ಸಧ್ಧರ್ಮ ಬಂಧುಗಳೇ, ಎಲ್ಲರಿಗೂ ಶ್ರುತ ಪಂಚಮಿ ಪರ್ವದ ಹಾರ್ದಿಕ ಶುಭಾಶಯಗಳು
ಶ್ರುತ ಪಂಚಮಿ ಪರ್ವದ ವೈಶಿಷ್ಟ್ಯತೆ:
ಪ್ರಪಂಚದ ಮಹೋನ್ನತ ಧರ್ಮಗಳ ಸಾಲಿನಲ್ಲಿ ಶಾಂತಿಯುತ ಸದ್ಗುಣ ಮೂರ್ತಿಯಾಗಿ ನಿಂತಿರುವಂತಹ ಶ್ರೇಷ್ಠ ಧರ್ಮ ಜೈನ ಧರ್ಮ.
ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ ‘ಶ್ರುತ ಪಂಚಮಿ’ಕೂಡ ಒಂದು.
ಶ್ರುತ ಎಂದರೆ ಜಿನವಾಣಿ ಅಥವಾ ಜೈನ ಸಾಹಿತ್ಯ, ಹಾಗೂ ಪಂಚಮಿ ಎಂದರೆ ಐದನೇ ದಿನ ಎಂಬರ್ಥವನ್ನು ಹೊಂದಿದೆ. ಇಬ್ಬರು ಜೈನ ಆಚಾರ್ಯ ಶ್ರೇಷ್ಠರು ಮೊದಲ ಜೈನ ಸಾಹಿತ್ಯವನ್ನು ರಚಿಸಿದಂತಹ ಸುದಿನವಿದು.
ಜೈನ ಧರ್ಮದ ೨೪ನೇ ತೀರ್ಥಂಕರ ಭಗವಾನ್ ಮಹಾವೀರರು ಅತ್ಯದ್ಭುತ ಜ್ಞಾನ ಶಕ್ತಿಯನ್ನು ಹೊಂದಿದ್ದವರು. ಅವರು ತಮ್ಮಲ್ಲಿನ ಜ್ಞಾನವನ್ನು ತಮ್ಮ ಶಿಷ್ಯರಿಗೆ ಧಾರೆ ಎರೆಯುವ ಮೂಲಕ ಮುಂದಿನ ಜೈನ ಶ್ರಾವಕ-ಶ್ರಾವಕಿಯರ ಧಾರ್ಮಿಕ ಜ್ಞಾನಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡಿದ್ದಾರೆ. ಮಹಾವೀರರ ನಿರ್ವಾಣದ ನಂತರ ಅಂದರೇ ಸರಿಸುಮಾರು .ಕ್ರಿ.ಶ. ೧೬೦ರ ನಂತರ ಅವರ ಪ್ರಧಾನ ಶಿಷ್ಯರಾದಂತಹ ಕೇವಲ ಜ್ಞಾನಿ ಗೌತಮ ಗಣಧರಜೀ ರವರು ತಮ್ಮ ಗುರು ಮಹಾವೀರರು ನೀಡಿದಂತಹ ಜ್ಞಾನವನ್ನು ತನ್ನ ಶಿಷ್ಯರಿಗೆ ಧಾರೆ ಎರೆಯುತ್ತಾ ಹೋಗುತ್ತಾರೆ. ನಂತರದ ೬೨ ವರ್ಷಗಳಲ್ಲಿ ಗೌತಮ ಗಣಧರ, ಸುಧರ್ಮ ಗಣಧರ, ಜಂಬೂ ಗಣಧರ ಎಂಬ ಮೂವರು ಕೇವಲ ಜ್ಞಾನಿಗಳನ್ನು ಕಾಣಬಹುದು. ತದನಂತರದಲ್ಲಿ ಒಬ್ಬರು ಜ್ಞಾನಿಯಿದ್ದರು. ನಂತರದ ೧೦೦ ವರ್ಷಗಳಲ್ಲಿ ವಿಷ್ಣು, ನಂದಿಮಿತ್ರ, ಅಪ್ರಜಿತ್, ಗೋವರ್ಧನ ಮತ್ತು ಭದ್ರಬಾಹು ಎಂಬ ಐವರು ಶ್ರುತ ಕೇವಲಿಗಳನ್ನು ಕಾಣಬಹುದು, ಅವರಲ್ಲಿ ಕೊನೆಯವರಾದ ಭದ್ರಬಾಹು ಆಚಾರ್ಯರು ಶ್ರವಣಬೆಳಗೊಳದಲ್ಲಿ ಸಮಾಧಿ ಪಡೆಯುತ್ತಾರೆ. ಆ ಹೊತ್ತಿಗಾಗಲೇ ಜ್ಞಾನದ ಮಟ್ಟವು ಒಟ್ಟು ಜ್ಞಾನ ಮಟ್ಟದ ೧೪ ಕೋನಗಳಲ್ಲಿ, ಕೇವಲ ೧ ಕೋನಕ್ಕೆ ಇಳಿದಾಗಿತ್ತು.
ಮಹಾವೀರರ ನಿರ್ವಾಣದ ೬೮೩ ವರ್ಷಗಳ ನಂತರ ಭದ್ರಬಾಹುವಿನ ವಂಶದ ಧರಸೇನಾಚಾರ್ಯರ ವರೆಗೂ ಜ್ಞಾನವು ಮೌಖಿಕವಾಗಿಯೇ ರವಾನಿಸಲ್ಪಟ್ಟಿತ್ತು. ಆದರೆ ಮೆದುಳಿನ ಶಕ್ತಿಯ ಕೊರತೆಯಿಂದಾಗಿ ಮೌಖಿಕ ಜ್ಞಾನದ ಮಟ್ಟವು ಕಡಿಮೆಯಾಗಲು ಪ್ರಾರಂಭಿಸಿತ್ತು. ಇದನ್ನು ತಡೆಗಟ್ಟಲು ಧರಸೇನಾಚಾರ್ಯರು ದಕ್ಷಿಣ ಭಾರತದಿಂದ ತಮ್ಮಿಬ್ಬರು ಶಿಷ್ಯರನ್ನು ಆಹ್ವಾನಿಸುತ್ತಾರೆ. ಅವರೇ ಆಚಾರ್ಯ ಪುಷ್ಷದಂತ ಹಾಗೂ ಆಚಾರ್ಯ ಭೂತಬಲಿ. ತದನಂತರ ಅವರಿಬ್ಬರ ಜ್ಞಾನವನ್ನು ಪರಿಶೀಲಿಸ ಹೊರಟ ಧರಸೇನರು ಅವರಿಗೇ ೨ ಮಂತ್ರಗಳನ್ನು ನೀಡಿ ಧ್ಯಾನಿಸಲು ತಿಳಿಸುತ್ತಾರೆ.
ಆಚಾರ್ಯ ಪುಷ್ಷದಂತ ಹಾಗೂ ಭೂತಬಲಿ ಧ್ಯಾನದಲ್ಲಿ ನಿರತರಾಗಿರುವಾಗ ಇಬ್ಬರು ಯಕ್ಷಿಣಿಯರು ಪ್ರತ್ಯಕ್ಷರಾದರು, ಅವರಲ್ಲಿ ಒಬ್ಬ ಯಕ್ಷಿಣಿಯ ಹಲ್ಲುಗಳು ಹೊರಕ್ಕೆ ಚಾಚಿಕೊಂಡಿದ್ದರೇ ಇನ್ನೋರ್ವ ಯಕ್ಷಿಣಿಗೇ ಒಂದು ಕಣ್ಣು ಇಲ್ಲದಂತಾಗಿರುತ್ತದೆ, ಆಗ ಅವರ ಅರಿವಿಗೇ ಬರುತ್ತದೆ, ಪುಷ್ಷದಂತರಿಗೇ ನೀಡಿದ್ದ ಮಂತ್ರದಲ್ಲಿ ಒಂದು ಅಕ್ಷರ ಕಡಿಮೆ ಇರುತ್ತದೆ ಹಾಗೂ ಭೂತಬಲಿಗೇ ನೀಡಿದ್ದ ಮಂತ್ರದಲ್ಲಿ ಒಂದು ಅಕ್ಷರ ಹೆಚ್ಚಿದೆ ಎಂದು, ನಂತರ ಅವರು ಸರಿಯಾದ ಅಕ್ಷರಗಳನ್ನು ಸೇರಿಸಿ ಮತ್ತೊಮ್ಮೆ ಧ್ಯಾನಿಸಿದಾಗ ಮತ್ತದೇ ಯಕ್ಷಿಣಿಯರು ಪ್ರತ್ಯಕ್ಷರಾಗುವರು, ಆಗ ಮಂತ್ರಗಳು ಪೂರ್ಣವಾದವುಗಳಾದುದರಿಂದ ಯಕ್ಷಿಣಿಯರು ಬಹಳ ಸುಂದರವಾಗಿ ಗೋಚರವಾಗುತ್ತಾರೆ. ನಂತರ ಆ ಮಂತ್ರಗಳನ್ನು ಧರಸೇನಾಚಾರ್ಯರ ಬಳಿಗೆ ಕೊಂಡೊಯ್ದಾಗ ಅವರು ‘ಜೈಹೋ ಶ್ರುತ’ ಎಂದು ಉದ್ಗರಿಸುತ್ತಾರೆ. ಆ ಇಬ್ಬರೂ ಆಚಾರ್ಯರು ಜ್ಞಾನವನ್ನು ಹೀರಿದ್ದರೆಂಬುದು ಧರಸೇನಾಚಾರ್ಯರಿಗೇ ಖಾತ್ರಿಯಾದೊಡನೆಯೇ ತಮ್ಮ ಜ್ಞಾನವನ್ನೆಲ್ಲಾ ಶಿಷ್ಯರಿಗೆ ಧಾರೆ ಎರೆಯುತ್ತಾರೆ, ತದನಂತರ ಆಚಾರ್ಯರಿಬ್ಬರೂ ಕೂಡಿ ತಾವು ಪಡೆದ ಜ್ಞಾನವನ್ನೆಲ್ಲಾ ಲಿಖಿತ ರೂಪದಲ್ಲಿ ಬರೆಯಲಾರಂಭಿಸಿದರು. ಅವರು ಆಗ ರಚಿಸಿದ ಗ್ರಂಥವೇ ‘ಷಟ್ ಖಂಡಾಗಮ’.
ಗುಜರಾತಿನ ಅಂಕಲೇಶ್ವರ ಪಟ್ಟಣದಲ್ಲೀ ಈ ಮಹಾಸಿಧ್ಧಾಂತಗ್ರಂಥಾಧಿರಾಜವು ಲಿಪಿಬಧ್ಧವಾಗಿ ಪುಸ್ತಕಾರೂಢವಾದಾಗ ಜ್ಯೇಷ್ಠ ಶುಕ್ಲ ಪಂಚಮಿಯ ದಿನವಾಗಿತ್ತು. ಆ ದಿನ ಷಟ್ ಖಂಡಾಗಮ ಗ್ರಂಥವನ್ನು ಪೂಜಿಸಲಾಯಿತು, ಆಗ ಆಕಾಶ ಜೀವಿಗಳಾದ ದೇವಾನುದೇವತೆಗಳು ಜಗನ್ಮಾತೆ ಜಿನವಾಣಿಗೇ ವಿಶೇಷ ಪೂಜೆ ಸಲ್ಲಿಸಿದರು.
ಈ ಧರ್ಮಗ್ರಂಥವು ೬ ಸಂಪುಟಗಳನ್ನು ಒಳಗೊಂಡಿದೆ. ಶ್ರುತ ಪಂಚಮಿಯ ದಿನದಂದು ಗ್ರಂಥ ಭಂಡಾರವನ್ನು ಚೊಕ್ಕಟಗೊಳಿಸಿ ಶಾಸ್ತ್ರ, ಶ್ರುತದ ಪೂಜೆಯನ್ನು ಮಾಡಲಾಗುವುದು… ಹೀಗೆ ಅಂದಿನಿಂದ ಇಂದಿನವರೆಗೂ ಈದಿನ ಶ್ರುತ ಪಂಚಮಿ ಪರ್ವ ಎಂದು ಪ್ರಸಿದ್ಧವಾಗಿದೆ
✒ಶ್ವೇತಾ ಜೈನ್ ಮೇಗುಂದಾ