ಕಟ್ಟಡ ಕಾರ್ಮಿಕರಿಗೆ ವಂಚನೆ ಸಲ್ಲದು |ನ್ಯಾಯವಾದಿ ಬಿ.ಎಂ.ಭಟ್
ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಹೋರಾಡಿ ತಂದುಕೊಂಡ ಕಾನೂನು ಸವಲತ್ತಿನಿಂದ ಕಟ್ಟಡಕಾರ್ಮಿಕರನ್ನು ವಂಚಿಸಬೇಡಿ ಎಂದು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅದ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ಅವರು ಇಂದು ಪುತ್ತೂರು ಮಿನಿ ವಿಧಾನ ಸೌದದ ಎದುರು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಪುತ್ತೂರು ತಾಲೂಕು ಸಮಿತಿ ವತಿಯಿಂದ ಬಿ.ಎಂ.ಭಟ್ ಅವರ ನಾಯಕತ್ವದಲ್ಲಿ ನಡೆದ ಕಟ್ಟಡ ಕಾರ್ಮಿಕರ ಸಾಂಕೇತಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 8,000 ಕೋಟಿ ರೂಗಿಂತಲೂ ಹೆಚ್ಚು ಹಣ ಇದ್ದು ಅದರಿಂದ ಸ್ಕಾಲರ್ ಶಿಪ್, ಮದುವೆ ಸಹಾಯ ಇತ್ಯಾದಿ ಸವಲತ್ತುಗಳನ್ನು ನೀಡಲು ಕಾರ್ಮಿಕರನ್ನು ಸತಾಯಿಸುವ ಸರಕಾರ ಇಂದು ಕೊರೋನಾ ಲಾಕ್ ಡೌನ್ ನಿಂದ ಕೆಲಸ ಇಲ್ಲದೆ ಸಂಕಷ್ಟಕ್ಕೆ ಒಳಗಾದ ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ರೂ. 5000 ಪ್ಯಾಕೇಜು ನೀಡುವುದಾಗಿ ಸರಕಾರ ಘೋಷಿಸಿದ್ದರೂ ಬಹುಸಂಖ್ಯಾತ ಕಟ್ಟಡ ಕಾರ್ಮಿಕರಿಗೆ ಇನ್ನೂ ಪ್ಯಾಕೇಜು ತಲುಪಿಲ್ಲ ಎಂದು ಟೀಕಿಸಿದರು.
ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ಕಿಟ್ ನೀಡಲೆಂದು ಹಣ ಬಿಡುಗಡೆ ಆಗಿದ್ದು ಸದ್ರಿ ಕಿಟ್ ನ್ನು ಶಾಸಕರ ಮೂಲಕ ಶಾಸಕರ ಹೆಸರು ಪೋಟೋ ಹಾಕಿ ನೀಡುವುದು ನಿಜಕ್ಕೂ ನಾಚಿಕೆ ವಿಚಾರ. ಕಟ್ಟಡ ಕಾರ್ಮಿಕರ ಹಣದಲ್ಲೂ ರಾಜಕೀಯ ಮಾಡುವ ಬಿಜೆಪಿ ಸರಕಾರದ ದೋರಣೆಯನ್ನು ಖಂಡಿಸಿದರು.
ಸರಕಾರ ತಕ್ಷಣ ಬಾಕಿ ಇರುವ ಪ್ಯಾಕೇಜು, ಕಿಟ್, ಹಾಗೂ ಸವಲತ್ತುಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. 2012-2015 ರ ತನಕ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಮಂಡಳಿ ಕಂತಿನ ಹಣ ಪಾವತಿಸಿ ಸ್ವೀಕೃತಿ ಪಡೆದಿದ್ದರೂ ಮಂಡಳಿಯು ಹಣ ಬಂದಿಲ್ಲ ಎಂದು ಕಾರ್ಮಿಕರ ಸದಸ್ಯತ್ವ ರದ್ದು ಮಾಡಿರುವುದನ್ನು ಖಂಡಿಸಿದ ಅವರು ಕಾರ್ಮಿಕ ಇಲಾಖೆಯಲ್ಲಿ ಆದ ವಂಚನೆಗೆ ಕಟ್ಟಡ ಕಾರ್ಮಿಕರನ್ನು ಹೊಣೆಯಾಗಿಸಬಾರದು, ಅವರ ಸದಸ್ಯತ್ವ ಮುಂದುವರಿಸಿ ಅವರಿಗೆ ಬಾಕಿ ಇರುವ ಎಲ್ಲಾ ಸವಲತ್ತುಗಳನ್ನು ತಕ್ಷಣ ಒದಗಿಸಬೇಕು ಎಂದರು.
ಮೊದಲಿಗೆ ಪುತ್ತ್ತೂರು ತಾಲೂಕು ಸಮಿತಿ ಕಾರ್ಯದರ್ಶಿ ಕೇಶವ ಗೌಡ ಸ್ವಾಗತಿಸಿ ಮಾತಾಡುತ್ತಾ ಅಟೋ ಚಾಲಕರಿಗೆ ಭರವಸೆ ನೀಡಿ ನಂತರ ಬ್ಯಾಡ್ಜ್ ಇಲ್ಲ ಎಂದು ಮೋಸ ಮಾಡುತ್ತಿರುವಂತೆ ಕಟ್ಟಡ ಕಾರ್ಮಿಕರ ಸವಲತ್ತುಗಳಿಗೆ ಮಂಡಳಿಯಲ್ಲಿ ಸಾಕಷ್ಟು ಹಣ ಇದ್ದೂ ಯಾಕೆ ಈ ಅನ್ಯಾಯವಾಗುತ್ತಿದೆ ಎಂದರು. ಕೊನೆಗೆ ಕಾರ್ಮಿಕ ನಾಯಕಿ ಈಶ್ವರಿ ವಂದಿಸಿದರು. ಈ ಸಂದರ್ಭ ಕಟ್ಟಡ ಕಾರ್ಮಿಕರ ಜಿಲ್ಲಾ ಕಾರ್ಯದರ್ಶಿ ಕೋಶಾದಿಕಾರಿ ರಾಮಚಂದ್ರ, ಗಣೇಶ ಪ್ರಸಾದ್, ಮೊದಲಾದವರು ಉಪಸ್ತಿತರಿದ್ದರು.