ನೀರಿನಲ್ಲಿ ಮುಳುಗುತ್ತಿರುವ ಕ್ಷಣದಲ್ಲಿ ವ್ಯಕ್ತಿಗೆ ಧರ್ಮ ನೆನಪಾಗುತ್ತಾ ?| ಬಂಟ್ವಾಳದ ನಿಶಾಂತ್ ಸಾವಿನ ಸುತ್ತ ಬೆಳೆಯುತ್ತಿರುವ ರಾಜಕೀಯದ ಹುತ್ತ
ಸಂಪಾದಕೀಯ
ನೆನಪಿಟ್ಟುಕೊಳ್ಳಿ. ಇಂತಹ ವರ್ತನೆಯನ್ನು ಪ್ರತಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್…. ಎಲ್ಲರೂ ಮಾಡುತ್ತಾರೆ !! ಕಷ್ಟದಲ್ಲಿದ್ದಾಗ, ಪ್ರಾಣ ಹೋಗುತ್ತಿರುವಾಗ, ಆಕಸ್ಮಿಕ ಸಂದರ್ಭಗಳಲ್ಲಿ ಪ್ರತಿ ಜಾತಿ, ಸಮುದಾಯದ ವ್ಯಕ್ತಿಗಳು ಮತ್ತೊಂದು ಪಂಗಡಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಚಾಚುತ್ತಾರೆ. ಜನ ಸಾಮಾನ್ಯರು ಅಂತಹ ಸಮಯದಲ್ಲಿ ಜಾತಿ, ಧರ್ಮ, ಆಚರಣೆ, ಮೈಲಿಗೆ ಅಂತ ಯೋಚಿಸುತ್ತಾ ಕೂರುವುದಿಲ್ಲ. ಹಾಗೊಂದು ವೇಳೆ ಧರ್ಮದ ಕಾರಣದಿಂದ ಆತ ಸಹಾಯಕ್ಕೆ ಧಾವಿಸದಿದ್ದರೆ, ಸ್ಸಾರಿ, ಆತನನ್ನು ಮನುಷ್ಯರ ಪಟ್ಟಿಯಿಂದ ಮತ್ತು ವೋಟರ್ ಲಿಸ್ಟ್ ನಿಂದ ತೆಗೆದು ಬಿಸಾಕಬೇಕು !
ಅಲ್ಲಿ, ಸಾಯಬೇಕೆಂದು, ಈ ಜೀವದ ಹಂಗು ಬೇಡ ಎಂದು ನದಿಗೆ ಹಾರುವವನಿಗೆ ಆ ಕ್ಷಣದಲ್ಲಿ ಧರ್ಮ ನೆನಪಾಗುವುದಿಲ್ಲ. ಅದೇ ರೀತಿ ನೀರಿಗೆ ಬಿದ್ದು ಒದ್ದಾಡುತ್ತಿರುವವ ನನ್ನು ವ್ಯಕ್ತಿಯನ್ನು ರಕ್ಷಿಸುವ ಸಂದರ್ಭದಲ್ಲಿ ಕೂಡಾ ಧರ್ಮ ನೆನಪಾಗುವುದಿಲ್ಲ. ಆದರೆ, ಆ ನಂತರ ಅಲ್ಲಿ ಒಬ್ಬಬ್ಬರಾಗಿ ಜನ ಸೇರಿಕೊಳ್ಳುತ್ತಾರೆ. ಕೆಲವರು ಅಲ್ಲಿ ಫೋಟೋ ವೀಡಿಯೋ ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು, ಅದನ್ನು ಕೊಲೆಜ್ ಮಾಡಿ, ಅದಕ್ಕೆ ಬಣ್ಣ ಹಾಕಿ, ಇಲ್ಲ ಮಿಕ್ಸ್ ಮಾಡಿ ಅಲ್ಲಿಂದ ‘ ಸೋಷಿಯಲ್ ‘ ಗಳ ಕೈಗೆ ಕೊಡುತ್ತಾರೆ. ಆ ನಂತರ ಶೋಭಕ್ಕ, ಸಿದ್ದಣ್ಣ, ಉಗ್ರಪ್ಪ, ಪ್ರತಾಪಸಿಂಹ, ಅನಂತ ಕುಮಾರ್ ಹೆಗ್ಗಡೆ, ಕುಮಾರಣ್ಣ, ಖಾದರ್ ಮತ್ತು ನಾನು (ನೀವು ಕೂಡಾ ಇರಬಹುದು), ತಮಗೆ ಬೇಕಾದಷ್ಟು ಸರಕನ್ನು ಬಳಸಿಕೊಳ್ಳುತ್ತಾರೆ !!!
ಮೊನ್ನೆ ಬಂಟ್ವಾಳದಲ್ಲಿ ನೇತ್ರಾವತಿ ನದಿಗೆ ಹಾರಿ ನಿಶಾಂತ್ ಎಂಬ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನನ್ನು ಉಳಿಸಲು, ರಂಝಾನ್ ಸಂದರ್ಭದಲ್ಲಿ ಸುತ್ತ ಮುತ್ತ ಸೇರಿದ್ದ ಹುಡುಗರು ( ಮುಸ್ಲಿಂ) ರಕ್ಷಿಸಿದ್ದಾರೆ. ಈಗ ಅದರ ಸುತ್ತ ದರಿದ್ರ ರಾಜಕೀಯದ ವಾಸನೆ ಬರುತ್ತಿದೆ.
ನಿನ್ನೆಯ ತನಕ ಶೋಭಾ ಕರಂದ್ಲಾಜೆ ಯವರು ಟ್ವೀಟ್ ಮಾಡಿದ್ದಾರೆ ಎನ್ನಲಾದ ಟ್ವೀಟ್ ಸುದ್ದಿ ಮಾಡಿತ್ತು. ನಂತರ ಶೋಭಾ ಅವರು ಹೇಳಿಕೆ ನೀಡಿ, ಮತಾಂಧ ಜಿಹಾದಿಗಳು ನಾನು ಹೇಳದ ಮಾತನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಸಾಥ್ ನೀಡುತ್ತಿವೆ ಎಂದು ಆಪಾದಿಸಿದ್ದರು. ಇದೀಗ ಸಿದ್ದರಾಮಯ್ಯ ಎಂಟ್ರಿ ಆಗಿದ್ದಾರೆ.
ನದಿಗೆ ಹಾರಿದ ಹಿಂದೂ ಯುವಕನನ್ನು ಉಳಿಸಿಲು ಪ್ರಾಣದ ಹಂಗು ತೊರೆದು ನದಿಗೆ ಹಾರಿದ ನಾಲ್ವರು ಮುಸ್ಲಿಂ ಯುವಕರ ಪ್ರಯತ್ನಕ್ಕೆ ಶಹಭಾಸ್ ಅನ್ನಲೇ ಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಧರ್ಮದ ಹೆಸರಲ್ಲಿ ಮನೆ-ಮನಸ್ಸುಗಳನ್ನು ಒಡೆಯುವ ವಿಚ್ಛಿದ್ರಕಾರಿ ಕೃತ್ಯಗಳ ನಡುವೆ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿರುವ ಈ ಯುವಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮನುಷ್ಯತ್ವವನ್ನು display ಮಾಡಬೇಕಾದ ಸಮಯದಲ್ಲಿ ಹಿಂದೂ ನೀರಿಗೆ ಬಿದ್ದ, ಮುಸ್ಲಿಂ ರಕ್ಷಿಸಿದ, ವೈಸ್ ವರ್ಸಾ ಹೇಳಿಕೆ ಯಾರಾದರೂ ಕೊಟ್ಟರೆ, ಧರ್ಮದ ಹೆಸರಿನ ಪದ ಬಳಕೆ ಯಾರಾದರೂ ಮಾಡಿದರೆ ಅವರನ್ನು ಅನುಮಾನದಿಂದ ನೋಡಬೇಕು. ಸಾಯುತ್ತಿರುವವನನ್ನು ಬದುಕಿಸುವುದು ಮಾನವೀಯತೆಯಲ್ಲ, ಅದು ಕರ್ತವ್ಯ. ಯಾರಿಗೆ ಗೊತ್ತು ? ಜನರನ್ನು ವ್ಯಾಪಾರೀ ಸರಕಾಗಿ ಬಳಸುವ ನಾವೇ ಒಂದು ದಿನ ಮುಳುಗು ನೀರಿನಲ್ಲಿ ಸಹಾಯ ಹಸ್ತ ಚಾಚುವ ಸನ್ನಿವೇಶ ಬರಬಹುದು. ಆಗ ದಡದಲ್ಲಿ ಅನ್ಯಧರ್ಮೀಯ ನಿಂತಿರಬಹುದು.
ಸುದರ್ಶನ್ ಬಿ. ಪ್ರವೀಣ್