ಮೂಡುಬಿದಿರೆ: ಕ್ವಾರಂಟೈನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್
ಮಂಗಳೂರು: ಮೂಡಬಿದ್ರೆ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದ ಸಂದರ್ಭ ಮೇ 21 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಮುಂಬೈನಿಂದ ಆಗಮಿಸಿದ ವ್ಯಕ್ತಿ ಜಿಲ್ಲಾಡಳಿತ ನಿಗದಿಪಡಿಸಿರುವ ಚೆಕ್ ಪೋಸ್ಟ್ ಮುಖಾಂತರ ಒಳಬರದೆ, ಸಚ್ಚರಿಪೇಟೆ ಒಳ ರಸ್ತೆ ಮೂಲಕ ಮೂಡಬಿದ್ರೆ ತಾಲೂೂಕಿನ ಕಡಂದಲೆ ಗ್ರಾಮಕ್ಕೆ ಆಗಮಿಸಿದ್ದರು.
ಅವರನ್ನು ಮೇ 20ರಂದು ರಾತ್ರಿ 1 ಗಂಟೆಗೆ ದ.ಕ.ಜಿ.ಪ.ಹಿ.ಪ್ರಾ. ಶಾಲೆ ಕಡಂದಲೆ ಮೈನ್ ಇಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.
ಮೇ 21ರಂದು ಬೆಳಗ್ಗೆ 6.30 ಕ್ಕೆ ವೇಳೆಗೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.
ಮೃತರ ಗಂಟಲು ದ್ರವ ಮಾದರಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಶುಕ್ರವಾರ ವರದಿ ಸ್ವೀಕೃತವಾಗಿದ್ದು, ಮೃತರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಮೃತರ ಕುಟುಂಬದ ಸಮ್ಮತಿಯೊಂದಿಗೆ ಅವರ ಅಂತ್ಯಸಂಸ್ಕಾರವನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿರುವ ವೈದ್ಯಕೀಯ ಶಿಷ್ಟಾಚಾರದಂತೆ ಮಂಗಳೂರು ಪಾಲಿಕೆ ವ್ಯಾಪ್ತಿಯ ಬೋಳೂರು ವಿದ್ಯುತ್ ಚಿತಾಗಾರದಲ್ಲಿ ವೈದ್ಯಕೀಯ ನಿಗಾದಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.