ಕ್ವಾರಂಟೈನ್‌ನಲ್ಲಿರುವವರಿಗೆ ಊಟ ನೀಡುವ ವ್ಯಕ್ತಿಗಳಿಗೆ ಅಡ್ಡಿಪಡಿಸಿದರೆ ಕ್ರಿಮಿನಲ್ ಮೊಕದ್ದಮೆ!| ಕ್ವಾರಂಟೈನ್‌ನಲ್ಲಿ ಇರುವವರು ಕೊರೊನಾ ಬಾಧಿತರಲ್ಲ
ಪುತ್ತೂರು: ಕ್ವಾರೆಂಟೈನ್‌ನಲ್ಲಿರುವವರಿಗೆ ಊಟ ನೀಡುವ ವ್ಯಕ್ತಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ಟಿ. ರಮೇಶ್ ಬಾಬು ತಿಳಿಸಿದ್ದಾರೆ.
ಮೇ 21ರಂದು ತಮ್ಮ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯಗಳಲ್ಲಿಂದ ಬಂದವರಿಗೆ ಪುತ್ತೂರು ತಾಲೂಕಿನಲ್ಲಿ ಕೊರೆಂಟೈನ್ ವ್ಯವಸ್ಥೆ ಮಾಡಲಾಗುತ್ತಿದ್ದು, 14 ದಿನಗಳ ಕಾಲ ಅವರಿಗೆ ಕ್ವಾರೆಂಟೈನ್ ಮಾಡಲಾಗುತ್ತದೆ. ಇಂತವರಿಗೆ ಊಟ ಕೊಡುವ ವ್ಯಕ್ತಿಗಳಿಗೆ ಅಡ್ಡಿ ಪಡಿಸುತ್ತಿರುವ ಬಗ್ಗೆ ಕೆಲವೊಂದು ದೂರು ಬಂದಿದೆ. ಅಂತಹ ಕೆಲಸ ಮಾಡುವವರ ವಿರುದ್ದ ವಿಪತ್ತು ನಿರ್ವಹಣೆ 2005 ಕಾಯಿದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ನಮ್ಮ ಹೋರಾಟ ಕೊರೊನಾ ಸೋಂಕಿನ ವಿರುದ್ಧ ಹೊರತು ಕೊರೊನಾ ಬಾಧಿತ ವ್ಯಕ್ತಿಗಳ ವಿರುದ್ಧ ಅಲ್ಲ ಎಂಬುವುದನ್ನು ಜನತೆ ಅರಿಯಬೇಕಾಗಿದೆ. ಕೊರೆಂಟೈನ್ ವ್ಯವಸ್ಥೆಯಲ್ಲಿರುವ ಮಂದಿ ಕೊರೊನಾ ಪೀಡಿತರಲ್ಲ. ಅಂತವರಿಗೆ ಊಟದ ವ್ಯವಸ್ಥೆ ಮಾಡುವುದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ.
ಬಲ್ನಾಡಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೊರ ರಾಜ್ಯದಿಂದ ಬಂದ 15 ಮಂದಿಗೆ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿಗೆ ಊಟ ತಂದು ಕೊಡುವ ವ್ಯಕ್ತಿಗೆ ಸ್ಥಳೀಯ ಕೆಲ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ. ಈ ರೀತಿ ಅಡ್ಡಿಪಡಿಸುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖಾ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕ್ವಾರಂಟೈನ್ ಗೆ ಗ್ರಾಮಮಟ್ಟದಲ್ಲಿ ಸರ್ಕಾರಿ ಶಾಲೆಗಳು, ನಗರದಲ್ಲಿ ವಿದ್ಯಾರ್ಥಿ ನಿಲಯಗಳು ಹಾಗೂ ಲಾಡ್ಜ್ ಗಳಲ್ಲಿ ಈ ವ್ಯವಸ್ಥೆಗಳನ್ನು ಮಾಡಲಾಗಿದೆ. ಗ್ರಾ.ಪಂ ಮಟ್ಟದಲ್ಲಿ ಸರ್ಕಾರಿ ಕೊರೆಂಟೈನ್‌ನಲ್ಲಿರುವ ಮಂದಿಗೆ ಗ್ರಾ.ಪಂ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ತಾಪಂ ವತಿಯಿಂದ ಈ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು. ಹೊರ ರಾಜ್ಯದಿಂದ ಬರುವವರಿಗೆ ಪುತ್ತೂರು ತಾಲೂಕಿನಲ್ಲಿ ಕ್ವಾರೆಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ವಿದೇಶದಿಂದ ಬರುವವರಿಗೆ ಮಂಗಳೂರಿನಲ್ಲಿ ಕ್ವಾರೆಂಟೈನ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.