ಆನ್ ಲೈನ್ ನಲ್ಲಿ ದೇವರ ದರ್ಶನ, ಪೂಜೆ…..! ಮುಜರಾಯಿ ಇಲಾಖೆ ನಿರ್ಧಾರ
ಬೆಂಗಳೂರು: ಕಾಲ ಎಷ್ಟು ಮುಂದುವರಿಯುತ್ತಿದೆ ಎಂದರೆ ಆನ್ಲೈನ್ ವ್ಯವಹಾರದ ಮೂಲಕ ಇಂದಿಗೆ ಎಲ್ಲಾ ಸೌಕರ್ಯಗಳು ನಮ್ಮ ಕಾಲು ಬುಡಕ್ಕೆ ಬರುತ್ತಿವೆ. ಅಚ್ಚರಿಯ ವಿಷಯವೆಂದರೆ ಇದೀಗ ದೇವರ ದರ್ಶನ, ಪೂಜಾ ಕೈಂಕರ್ಯಗಳನ್ನು ಆನ್ಲೈನ್ ಮೂಲಕ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ.
ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳು ಬಾಗಿಲು ಮುಚ್ಚಿದ್ದು, ದೇವರ ದರ್ಶನವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಭಕ್ತರಿಗೆ ಆನ್ಲೈನ್ ಮೂಲಕ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ.
ಆನ್ಲೈನ್ ನೇರ ಪ್ರಸಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ದೇವಸ್ಥಾನಗಳ ಕಾರ್ಯನಿರ್ವಾಹಕರಿಗೆ ಪತ್ರ ಬರೆದಿದ್ದಾರೆ. ಅವರವರ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ನಡೆಯುವ ಸೇವಾ ಪೂಜಾ ಕೈಂಕರ್ಯಗಳನ್ನು ಆಯಾ ದೇವಾಲಯದ ರೂಢಿ, ಸಂಪ್ರದಾಯ ಮತ್ತು ಆಚರಣೆಗೆ ಒಳಪಟ್ಟು ಆನ್ಲೈನ್ ಮೂಲಕ ವೀಕ್ಷಣೆಯ ವ್ಯವಸ್ಥೆ ಒದಗಿಸಬಹುದಾದ ದೇವಾಲಯಗಳ ಪಟ್ಟಿ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.
ಆನ್ಲೈನ್ ಮೂಲಕ ಕಾಯ್ದಿರಿಸಬಹುದಾದ ಸೇವೆಗಳು, ಕಾಯ್ದಿರಿಸಲು ಲಭ್ಯವಿರುವ ದಿನ, ಈವರೆಗೆ ಬುಕ್ ಆಗಿರುವ ದಿನಾಂಕ, ದಿನಕ್ಕೆ ಎಷ್ಟು ಸೇವೆ ಮಾಡಬಹುದು, ಪ್ರಸಾದ ತಲುಪಿಸಲು ಸಾಧ್ಯವೇ ಮತ್ತಿತರ ಮಾಹಿತಿಯನ್ನು ನೀಡುವಂತೆ ಪತ್ರದಲ್ಲಿ ಆಯುಕ್ತರು ತಿಳಿಸಿದ್ದಾರೆ.
ಹದಿನೈದು ಜಿಲ್ಲೆಗಳ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಳಗಾವಿ, ಮಂಡ್ಯ, ಚಾಮರಾಜನಗರ, ಯಾದಗಿರಿ, ಕೊಡಗು, ಗದಗ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಉಡುಪಿ) ಜಿಲ್ಲಾಧಿಕಾರಿಗಳು ಮತ್ತು ‘ಎ’ ವರ್ಗದ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗಳು, ಆಡಳಿತಾಧಿಕಾರಿಗಳು ಮತ್ತು ಅನುವಂಶಿಕ ಮೊಕ್ತೇಸರರಿಗೆ ಪತ್ರ ಬರೆದಿರುವ ಆಯುಕ್ತರು, ಮೊಬೈಲ್ ಆ್ಯಪ್ ಮತ್ತು ವೆಬ್ಸೈಟ್ಗೆ ಅಗತ್ಯ ಮಾಹಿತಿಗಳನ್ನು ತಕ್ಷಣ ನೀಡುವಂತೆ ತಿಳಿಸಿದ್ದಾರೆ.