ಕರಾವಳಿಯಲ್ಲಿ ನಿಯಂತ್ರಣಕ್ಕೆ ಬಾರದ ಕಿಲ್ಲರ್ ಕೊರೊನ| ದ.ಕ. ಜಿಲ್ಲೆಯಲ್ಲಿ 1, ಉಡುಪಿಯಲ್ಲಿ 6
ಇವತ್ತು ದಕ್ಷಿಣ ಕನ್ನಡದಲ್ಲಿ 1, ಉಡುಪಿಯಲ್ಲಿ 6 ಮತ್ತು ರಾಜ್ಯದಲ್ಲಿ ಒಟ್ಟು 63 ಪ್ರಕರಣಗಳು ದಾಖಲಾಗಿವೆ.
ಮುಂಬೈನಿಂದ ರಾಜ್ಯಕ್ಕೆ ಆಗಮಿಸಿದ್ದ ಪ್ರಯಾಣಿಕರಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಗ್ರೀನ್ ಝೋನ್ ವ್ಯಾಪ್ತಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿಯೂ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.
ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡ ಮತ್ತೊಂದು ಕೊರೋನಾ ಸೊಂಕು ಪ್ರಕರಣ ದಾಖಲಾಗಿ, ಕೊರೋನಾ ಪೀಡಿತರ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕಿತ ವ್ಯಕ್ತಿ ಮಂಗಳೂರಿನ ನೀರುಮಾರ್ಗದ 40 ವರ್ಷದ ಈ ಮಹಿಳೆಯಾಗಿದ್ದು ಆಕೆ ಬೆಂಗಳೂರಿನಲ್ಲಿ ಕೊರಿಯರ್ ಸಂಸ್ಥೆ ಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರು ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದರು.
ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಕೊರೋನಾ ಪೀಡಿತರ ಸಂಖ್ಯೆ ಏರುತ್ತಿದ್ದರೂ, ಇವರೆಲ್ಲರೂ ಹೊರರಾಜ್ಯಗಳಿಂದ ಬಂದವರಾದ್ದರಿಂದ ಮತ್ತು ಅವರೆಲ್ಲರನ್ನೂ ಈಗಾಗಲೇ ಕ್ವಾರಂಟೈನ್ ಮಾಡಿ ಕೂಡಿ ಹಾಕಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ಹೊಸ ಪೀಡಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುವ ಸಂಭವ ಇದೆ.