ಇಂಟರ್ನೆಟ್ ಪಡೆಯಲು ಮರವೇರಿ ಕುಳಿತ ಉಜಿರೆಯ SDM ಕಾಲೇಜು ವಿದ್ಯಾರ್ಥಿ
ಬೆಳ್ತಂಗಡಿ : ಕೋವಿಡ್ ಪ್ರಯುಕ್ತ ಕೆಲವು ಕಾಲೇಜುಗಳು ಆನ್‌ಲೈನ್ ಮೂಲಕ ಪಾಠ ಪ್ರವಚನ ಪ್ರಾರಂಭಿಸಿವೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್‌ನದ್ದೇ ಬಹು ದೊಡ್ಡ ಸಮಸ್ಯೆ. ಅದಕ್ಕಾಗಿ ಇಲ್ಲೊಬ್ಬ ವಿದ್ಯಾರ್ಥಿ ಏನೇ ಆದರೂ ತರಗತಿಗಳನ್ನು ತಪ್ಪಿಸಬಾರದೆಂದು ಮೊಬೈಲ್ ನಲ್ಲಿ ನೆಟ್‌ವರ್ಕ್ ನ ಕುಟ್ಟಿ ಹುಡುಕುತ್ತಾ ಕೊನೆಗೆ ಮರ ಹತ್ತಿ ನೆಟ್ ವರ್ಕ್ ಪಡೆದ ಕಥೆ !
ಶಿರಸಿ ಮೂಲದ ಶ್ರೀರಾಮ್ ಹೆಗಡೆ ಉಜಿರೆ ಎಸ್‌ಡಿಎಂ ಕಾಲೇಜಿನ ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯಕ್ಕೆ ತಮ್ಮ ಹುಟ್ಟೂರು ಶಿರಸಿಗೆ ಆಗಮಿಸಿದ್ದಾರೆ. ಆಗ ಆನ್‌ಲೈನ್ ಮೂಲಕ ತರಗತಿಗಳನ್ನು ಆರಂಭಿಸಿದ ವಿದ್ಯಾ ಸಂಸ್ಥೆಯು ಇರುವಲ್ಲಿಂದಲೇ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿತು.
ಆದರೆ ಶ್ರೀರಾಮ್ ಹುಟ್ಟೂರು ಶಿರಸಿಯ ಬಕ್ಕಳದಲ್ಲಿ ಇಂಟರ್‌ನೆಟ್ ಸಂಪರ್ಕದ್ದೇ ಸಮಸ್ಯೆ. ಸುತ್ತಲೂ ಹರಡಿರುವ ನಿಬಿಡ ಕಾಡು ಅರಣ್ಯ ಪ್ರದೇಶಗಳಿಂದ ಆವೃತವಾದ ಮಲೆನಾಡಿನಲ್ಲಿ ಸಿಗ್ನಲ್ ಸಿಗುವುದು ದುಸ್ತರ. ಹಾಗಾಗಿ ತರಗತಿಯಲ್ಲಿ ಭಾಗಿಯಾಗುವುದು ಸಾಧ್ಯವಾಗಲಿಲ್ಲ.
ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಶ್ರೀರಾಮ್ ನಿರ್ಧರಿಸಿದ. ಕೈಯಲ್ಲಿ ಮೊಬೈಲ್ ಅನ್ನು ಟಾರ್ಚ್ ನಂತೆ ಹಿಡಿದುಕೊಂಡು ತನ್ನ ಕಳೆದುಹೋದ ಪುಟಾಣಿ ನಾಯಿ ಮರಿಯನ್ನು ಮೂಲೆ ಮೂಲೆಗಳಲ್ಲಿ ಹುಡುಕುವಂತೆ ಆತ ನೆಟ್ವರ್ಕ್ ಗಾಗಿ ಅರಸಿದ. ಮನೆಯ ಅಂಗಳ, ಈ ಕೋಣೆ, ಆ ಮೂಲೆ ಹೀಗೆ ಹುಡುಕಾಟ ಸಾಗಿತ್ತು. ಆದರೂ ನಾಯಿಮರಿ ದೊರೆಯಲಿಲ್ಲ !!
ಆದರೂ ಛಲ ಬಿಡದ ಶ್ರೀರಾಮ್ ಸುತ್ತಮುತ್ತ ಮನೆಯಿಂದ ಸ್ವಲ್ಪ ದೂರ ನೆಟ್ವರ್ಕ್ ಗಾಗಿ ತಡಕಾಡಿದ. ಹಾಗಾಗಿ ಮರ ಹತ್ತಿಯೆ ಬಿಟ್ಟ ಶ್ರೀರಾಮ್. ಕೊನೆಗೆ ಸುಮಾರು ಒಂದು ಕಿ.ಮೀ. ದೂರದಲ್ಲಿ ಮೊಬೈಲಿನ ನೆಟ್‌ವರ್ಕ್ ಸಿಂಬಲ್ ನಲ್ಲಿ ಒಂದೇ ಒಂದು ಪುಟಾಣಿ ಕುಟ್ಟಿ ಲಭಿಸಿತು. ಇದರಿಂದ ಉತ್ತೇಜಿತನಾದ ಶ್ರೀರಾಮ್ ಮನೆ ಪ್ರದೇಶದ ಸುತ್ತಮುತ್ತ ತಿರುಗಿ ಕೊನೆಗೂ ಎರಡೇ ಸಿಗ್ನಲ್ ಪಾಯಿಂಟ್ ನಲ್ಲಿ ನಿಂತುಕೊಂಡಿತು ಪ್ರಯತ್ನ. ಅದು ಕೇವಲ ಧ್ವನಿ ಕರೆಗಳನ್ನು ಸ್ವೀಕರಿಸಲು ಮಾತ್ರ ಸೀಮಿತವಾಗಿತ್ತು. ಅಂತರ್ಜಾಲ ಸಂಪರ್ಕ ಇದರಿಂದ ಸಾಧ್ಯವಾಗುತ್ತಿರಲಿಲ್ಲ.
ಒಂದೊಮ್ಮೆ ಪಕ್ಕದ ಮರಹತ್ತಿ ಕುಳಿತರೆ ಸಿಗ್ನಲ್ ಸಿಗಬಹುದೇನೋ ಎಂಬ ಒಂದು ಆಸೆ. ಪರಿಶ್ರಮಕ್ಕೆ ಫಲ ಸಿಗದೆ ಹೋಗಲಿಲ್ಲ. ಮರದ ಒಂದೊಂದು ಕೊಂಬೆ ಮೇಲಕ್ಕೆ ಹತ್ತಿದಷ್ಟು ಸಿಗ್ನಲ್ ಬಲವಾಗುತ್ತಿತ್ತು. ಆದರೆ ಇತ್ತೀಚೆಗೆ ಮಳೆ ಬಂದು ಮರದ ರೆಂಬೆ ಗೊಂಬೆಗಳು ಜಾರುತ್ತಿದ್ದವು. ಆದರೂ ಸುರಕ್ಷತೆಯಿಂದ ಮತ್ತಷ್ಟು ಮೇಲೇರಿ ಮೊಬೈಲ್ ಚೆಕ್ ಮಾಡಿದಾಗ ಒಂದು ಕಡೆ ಮೊಬೈಲಿನಲ್ಲಿ ಉದ್ದನೆಯ ನೆಟ್ವರ್ಕ್ ಕಂಬಗಳು !
ಅಂದಿನಿಂದ ಪ್ರತಿದಿನ ಮನೆಯಿಂದ ಒಂದು ಕಿ.ಮೀ. ದೂರದಲ್ಲಿರುವ ಈ ಸ್ಥಳಕ್ಕೆ ಬಂದು ಮರವೇರಿ ಕುಳಿತು ಅಂತರ್ಜಾಲ ಸಂಪರ್ಕ ಸಾಧಿಸಿ ತರಗತಿಗೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಉಜಿರೆಯ ಎಸ್‌ಡಿಎಂ ಕಾಲೇಜು ಗ್ರಾಮಾಂತರ ಪ್ರದೇಶದಲ್ಲಿದ್ದರೂ ತಂತ್ರಜ್ಞಾನ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ವಿದ್ಯಾರ್ಥಿಗಳ ಸ್ಪಂದನೆಯೂ ಉತ್ತಮವಾಗಿದೆ. ಅವರೆಲ್ಲರ ನಡುವೆ ಗ್ರಾಮೀಣ ಭಾಗದ ಶ್ರೀರಾಮ್ ಹೆಗಡೆ ಕಷ್ಟ ಪಟ್ಟು ಪಾಠ ಕೇಳುತ್ತಿದ್ದಾರೆ.
ಸುವೀರ್ ಜೈನ್, ಪ್ರಾಧ್ಯಾಪಕರು, ಸಮಾಜ ಕಾರ್ಯ ವಿಭಾಗ
” ನಾನೀಗ ಸೋಂಕಿನಿಂದ ದೂರ, ಕಾಲೇಜಿನ ಚಟುವಟಿಕೆಗಳಿಗೆ ಹತ್ತಿರ “
ಶ್ರೀರಾಮ್ ಹೆಗಡೆ ( ಮರ ಹತ್ತಿ ಕುಳಿತ ವಿದ್ಯಾರ್ಥಿ)