ಲಾಕ್ ಡೌನ್ | ಕೇವಲ 15 ದಿನದಲ್ಲಿ ಬಲಿಯಾದವು ದೇಶ ಕಟ್ಟುತ್ತಿದ್ದ ನೂರಕ್ಕೂ ಹೆಚ್ಚು ನತದೃಷ್ಟ ಜೀವಗಳು…!

ನವದೆಹಲಿ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕಾರ್ಮಿಕರಿಲ್ಲದೇ ದೇಶದ ಆರ್ಥಿಕತೆ ಕಟ್ಟುವುದು ಅಸಾಧ್ಯ. ಆದರೆ ಕೊರೋನಾ ಹಾವಳಿ ನಿಯಂತ್ರಿಸಲು ಕೈಗೊಂಡ ದಿಢೀರ್ ಲಾಕ್ ಡೌನ್ ನಿಂದಾಗಿ ತವರು ಸೇರಲು ಹೊರಟ ಹಲವು ವಲಸೆ ಕಾರ್ಮಿಕ ಅಮಾಯಕ ಜೀವಗಳು ಬಲಿಯಾಗಿವೆ.

ಭಾರತದ ವಿವಿಧ ರಾಜ್ಯಗಳಲ್ಲಿ ಕೋವಿಡ್19 ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ಸೇರಲು ನಡೆದುಕೊಂಡು ಅಥವಾ ವಾಹನಗಳಲ್ಲಿ ತೆರಳುವಾಗ ಸಂಭವಿಸಿದ ರಸ್ತೆಅಪಘಾತ, ರೈಲುಅಪಘಾತ ಹೀಗೆ ಬರೋಬ್ಬರಿ 116 ಮಂದಿ ಮೃತಪಟ್ಟಿದ್ದರೆ, 150 ಮಂದಿ ಗಾಯಗೊಂಡಿದ್ದಾರೆ.

ವಲಸೆ ಕಾರ್ಮಿಕರಿಗೆ ಸರ್ಕಾರ ಮೇ 1 ರಿಂದ 16ರವರೆಗೆ ‘ಶ್ರಮಿಕ ರೈಲು’ ಆರಂಭಿಸಿದ ನಂತರ ಈ ಘಟನೆಗಳು ಸಂಭವಿಸಿರುವುದು ವಿಶೇಷ.

ಮೃತಪಟ್ಟವರೆಲ್ಲಾ ರಾಜಸ್ಥಾನ ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಹಲವು ರಾಜ್ಯದಲ್ಲಿರುವ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರು.

ಇಂತಹ ಅಪಘಾತಗಳು ವರದಿಯಾಗುತ್ತಿದ್ದಂತೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಎಲ್ಲಾ ರಾಜ್ಯಸರ್ಕಾರಗಳಿಗೆ ಪತ್ರ ಬರೆದು, ಯಾವುದೇ ವಲಸೆ ಕಾರ್ಮಿಕರು ರಸ್ತೆಯಲ್ಲಿ ನಡೆದು ಬರುತ್ತಿದ್ದರೆ ಅದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಅಲ್ಲದೆ, ರೈಲು ಹಳಿಗಳ ಮೇಲೆ ನಡೆಯುವುದು, ಮಲಗುವುದು ಕಂಡು ಬಂದರೆ ಕೂಡಲೆ ಆಯಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಸಾರಿಗೆ ಸೌಲಭ್ಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.

ಮೂವರು ಖಾಸಗಿ ವ್ಯಕ್ತಿಗಳ ಸಂಶೋಧನೆ ಪ್ರಕಾರ, ಮೇ 1 ರಿಂದ ಮೇ 16ರವರೆಗೆ ಸಂಭವಿಸಿದ 27 ರಸ್ತೆ ಮತ್ತು ರೈಲು ಅಪಘಾತದಲ್ಲಿ 116 ಮಂದಿ ಮೃತಪಟ್ಟು 159 ಮಂದಿ ಗಾಯಗೊಂಡಿದ್ದಾರೆ. ಮೇ 16 ರಂದು ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆಯಲ್ಲಿ ಗೃಹ ಸಚಿವಾಲಯ ಸಿದ್ಧಪಡಿಸಿದ ಟಿಪ್ಪಣಿಯಲ್ಲಿ 350 ವಿಶೇಷ ರೈಲುಗಳಲ್ಲಿ 3.5 ಲಕ್ಷ ವಲಸೆ ಕಾರ್ಮಿಕರನ್ನು ಈವರೆಗೆ ಸ್ಥಳಾಂತರಿಸಲಾಗಿದೆ ಹಾಗೂ ಮುಂದೆಯೂ ವಲಸೆ ಕಾರ್ಮಿಕರಿಗಾಗಿ ಹೆಚ್ಚಿನ ರೈಲುಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

ಮೇ ಆರಂಭದಲ್ಲಿ ಲಾಕ್‌ಡೌನ್ 2.0 ರ ಅಂತ್ಯಕ್ಕೆ ನಿರ್ಬಂಧಗಳ ವಿಸ್ತರಣೆಯ ಸುದ್ದಿ ಹೊರಹೊಮ್ಮುತ್ತಿದ್ದಂತೆ ವಲಸೆ ಕಾರ್ಮಿಕರ ಎರಡನೇ ಬಾರಿ ವಲಸೆ ಪ್ರಯಾಣ ಪ್ರಾರಂಭವಾಗಿದೆ. ‘ಶ್ರಮಿಕ್ ರೈಲುಗಳ ಮೂಲಕ ಸಂಚಾರಕ್ಕೆ ಅವಕಾಶ ಕೊಡುವ ಸರ್ಕಾರದ ಘೋಷಣೆಯು ವಲಸೆ ಕಾರ್ಮಿಕರು ಮನೆಗೆ ತೆರಳುವುದರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಲಸೆ ಕಾರ್ಮಿಕರು ಏಪ್ರಿಲ್ನಲ್ಲಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ತಿಂಗಳ ಅಂತ್ಯದಲ್ಲಿ ಅದರ ತೀವ್ರತೆ ಹೆಚ್ಚಾಯಿತು.

ಅಪಘಾತಗಳಿಂದ ಮೃತಪಟ್ಟವರು ಇಷ್ಟೇ ಆದರೆ ಇನ್ನೂ ಹಲವು ಜೀವಗಳು ಕಾಲ್ನಡಿಗೆಯಲ್ಲಿ ತೆರಳಿ ಸೂರು ತಲುಪುವ ಮೊದಲು ದಣಿದು ಬೇಸತ್ತು‌ ಜೀವ ಕಳೆದುಕೊಂಡ ಅದೆಷ್ಟೋ ಘಟನೆಗಳು ವರದಿಯಾಗಿವೆ

Leave A Reply

Your email address will not be published.