ಮನೆಯ ಎದುರು ಜಗಲಿಯಲ್ಲಿ ಮಲಗಿದ್ದವಳನ್ನು ಕೊಂದು ತಿಂದ ಚಿರತೆ

ರಾಮನಗರ : ಕನಸಿನ ಲೋಕದಿಂದ ಕಾಣದ ಲೋಕಕ್ಕೆ ಹೋದಂತಾಗಿದೆ ! ಮನೆಯ ಎದುರಿನ ಜಗುಲಿಯಲ್ಲಿ ತಂಗಾಳಿ ನಡುವೆ ಹಾಯಾಗಿ ಮಲಗಿದ್ದ ವೃದ್ದೆಯ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ಮಹಿಳೆ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ನಡೆದಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಹೋಬಳಿ ಮೋಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಲಿಯಾದವರು ಗಂಗಮ್ಮ ಎಂಬ 68 ವರ್ಷದ ವೃದ್ದೆ.

ದಾಳಿಯ ಕ್ರೂರತೆಗೆ ವೃದ್ದೆಯ ರುಂಡ, ಮುಂಡ ಬೇರೆಯಾಗಿದೆ. ಪೂರ್ತಿಮುಖವನ್ನು ಚಿರತೆ ತಿಂದು ಹಾಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ದೌಡಾಯಿಸಿದ್ದು, ಪರಿಶೀಲನೆ ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಇಲ್ಲಿ ದನಗಾಹಿಗಳನ್ನು ಚಿರತೆಯೊಂದು ಅಟ್ಟಾಡಿಸಿದೆ ಎಂದು ಈಗ ಗೊತ್ತಾಗುತ್ತಿದೆ.

ಮಗು ತಿಂದಿದ್ದ ಚಿರತೆ:
ಮಾಗಡಿ ತಾಲೂಕು ಕದರಯ್ಯನ ಪಾಳ್ಯದಲ್ಲಿ ಕಳೆದ ವಾರ ಮನೆಯಲ್ಲಿ ಬಾಗಿಲು ತೆರೆದಿಟ್ಟು ಮಲಗಿದ್ದ ಮೂರು ವರ್ಷದ ಪುಟಾಣಿ ಮಗುವಿನ ಮೇಲೆ ಚಿರತೆ ದಾಳಿಮಾಡಿ ಎತ್ತಿಕೊಂಡು ಹೋಗಿ ಕೊಂದು ಹಾಕಿತ್ತು.
ಇದೇ ಚಿರತೆ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿತ್ತು. ಇದರಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು.
ಆದರೆ ಇಂದು ಮುಂಜಾನೆ ನಡೆದ ಘಟನೆ ಇಲ್ಲಿಗೆ ಸಮೀಪವೇ ಆದ ಕಾರಣ, ಇದು ಇನ್ನೊಂದು ಚಿರತೆಯಾಗಿದ್ದು ಜನರ ಮತ್ತಷ್ಟು ಆತಂಕ ಹೆಚ್ಚಾಗಿದೆ.

Leave A Reply

Your email address will not be published.