ಮನೆಯ ಗೋಡೆಗಳ ಮೇಲೆ ಪ್ರಕೃತಿಯನ್ನೇ ಆಹ್ವಾನಿಸಿದ ಚಿತ್ರಕಲಾ ಪ್ರತಿಭೆ ಪೂಜಾಶ್ರೀ

ಲಾಕ್ ಡೌನ್ ನ ಸಮಯದಲ್ಲಿ ಕೆಲವರು ಬಾವಿ ತೋಡಿದರು. ಮತ್ತೆ ಕೆಲವರು ಪ್ರಕೃತಿಯ ನಡುವೆ, ಮರದ ಮೇಲೆ ಅಟ್ಟಣಿಗೆ ಕಟ್ಟಿ ಮನೆಯ ಕಟ್ಟಿದರು. ಕೆಲವು ಮಕ್ಕಳು ಮರದ ಮೇಲೆ ಗುಡಿಸಲು ನಿರ್ಮಿಸಿದರು. ಇಲ್ಲೊಬ್ಬಳು ನೇರವಾಗಿ ಪ್ರಕೃತಿಯನ್ನೇ ತನ್ನ ಮನೆಯೊಳಗೆ ಆಹ್ವಾನಿಸಿದ್ದಾಳೆ.
ತನಗೆ ಒಲಿದು ಬಂದ ಚಿತ್ರಕಲೆಯಲ್ಲಿ ಸಾಧನೆ ಮಾಡುತ್ತಿರುವ ಪೂಜಾಶ್ರೀ ಇದೀಗ ಲಾಕ್ ಡೌನ್ ನ ಹೇರಳ ಬಿಡುವಿನ ಸಮಯಾವಕಾಶದ ಮಧ್ಯೆ ತನ್ನ ಮನೆಯ ಗೋಡೆಗಳಲ್ಲಿ ಚಿತ್ರ ಬಿಡಿಸಿದ್ದಾಳೆ.

ಸುರತ್ಕಲ್ ನಿವಾಸಿಯಾಗಿರುವ ಪುಷ್ಪರಾಜ್ ಹಾಗೂ ಲಲಿತ ದಂಪತಿಗಳ ಮಗಳಾದ ಪೂಜಾಶ್ರೀ ತನ್ನ ಮನೆಯ ಗೋಡೆಗಳ ಮೇಲೆ ಚಿತ್ರಬಿಡಿಸಿ ಮನೆಯ ಸೌಂದರ್ಯ ಹೆಚ್ಚಿಸಿದ್ದಾರೆ. ಈಕೆ ಸುರತ್ಕಲ್ ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ.

ಒಂದು ಗೋಡೆಯಲ್ಲಿ ಎಳೆಯುದುರಿಸಿಕೊಂದು ವಿರಳ ಎಲೆಗಳ ವೃಕ್ಷ, ಮತ್ತೊಂದರಲ್ಲಿ ಧುಮ್ಮಿಕ್ಕಿ ಹರಿಯುವ ನೀರ ರಾಶಿಯ ನಡುವಿನ ಸಸ್ಯ ಕಾಶಿ, ಇನ್ನೊಂದರಲ್ಲಿ ಪ್ರಕೃತಿ ಮತ್ತೊಂದು ಬಗೆಯಲ್ಲಿ ಹರಡಿಕೊಂಡ ದೃಶ್ಯ: ಇವೆಲ್ಲವನ್ನೂ ತನ್ನ ಮನೆಯ ಗೋಡೆಗಳಲ್ಲಿ ಬರೆದಿದ್ದಾಳೆ. ಪ್ರಕೃತಿಯ ಜತೆಗೆ ಬದುಕಿನ ಸುಂದರ ಚಿತ್ರಣವೂ ಗೋಡೆಗಳಲ್ಲಿ ಅಚ್ಚಾಗಿದೆ.

ನಮ್ಮ ಹವ್ಯಾಸ, ಆದ್ಯತೆಗಳನ್ನು ಬದಲಿಸಿಕೊಳ್ಳುವುದು ನಮ್ಮ ಕೈಯಲ್ಲೆ ಇದೆ. ಆ ಮೂಲಕ ಭವಿಷ್ಯವನ್ನು ನಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು ಎಂಬುದಕ್ಕೆ ಪೂಜಶ್ರೀ ಒಂದು ಉದಾಹರಣೆ.

ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಗಮನಾರ್ಹ ಸಾಧನೆಯನ್ನು ಮಾಡುವುದರ ಮೂಲಕ 2020 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಕವಿವಾಣಿ ಪತ್ರಿಕೆ ಬಳಗ ನಡೆಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನ ಪಡೆದು ಚಿತ್ರಕಲಾ ರತ್ನ ಪ್ರಶಸ್ತಿ ಯನ್ನು ಪಡೆದಿರುತ್ತಾರೆ.
ಜೊತೆಗೆ ನೃತ್ಯ, ಸಂಗೀತ, ಕ್ರೀಡೆ, ಯೋಗ.. ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

ಎಲ್ಲದಕ್ಕಿಂತ ಮುಖ್ಯವಾಗಿ ಅವರಿಗೆ ಇದೆ ಹೆತ್ತವರ ಪ್ರೋತ್ಸಾಹ. ತಮ್ಮ ಮನೆಯ ಗೋಡೆಗಳಲ್ಲಿ ಒಂದು ಪೆನ್ಸಿಲ್ ಗೀರು ಹಾಕಿದರೂ ಗದರುವ ಪೋಷಕರಿರುವಾಗ, ಮನೆಯ ಹೆಚ್ಚಿನ ಎಲ್ಲ ಗೋಡೆಗಳನ್ನೂ ಮಗಳಿಗೆ ಬಿಟ್ಟು ಕೊಟ್ಟು ಚಿತ್ರ ಬಿಡಿಸಲು ಅವಕಾಶ ಮಾಡಿಕೊಟ್ಟ ಅವರ ತಂದೆ-ತಾಯಿಯ ಬೆಂಬಲಕ್ಕೆ ನಮ್ಮದೊಂದು ಸಲ್ಯೂಟ್ !

ಸುದೇಶ್ ಜೈನ್ ಮಕ್ಕಿಮನೆ

Leave A Reply

Your email address will not be published.