ಮಾಜಿ ಭೂಗತ ದೊರೆ, ಜಯ ಕರ್ನಾಟಕ ಸಂಸ್ಥಾಪಕ ಎನ್. ಮುತ್ತಪ್ಪ ರೈ ವಿಧಿವಶ
ಬೆಂಗಳೂರು: ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಭೂಗತ ದೊರೆ, ಸಮಾಜ ಸೇವಕ ಎನ್. ಮುತ್ತಪ್ಪ ರೈಯವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೂಲತಃ ಪುತ್ತೂರು ತಾಲೂಕಿನ ಕೆಯ್ಯೂರಿನವರಾದ ನೆಟ್ಟಾಳ ಮುತ್ತಪ್ಪ ರೈ ದೇರ್ಲ ಅವರು ಕಳೆದ ಕೆಲವು ಸಮಯಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 2018 ರಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಖಚಿತವಾಗಿತ್ತು.
ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರೂ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ನ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಮಾಜಿ ಭೂಗತ ದೊರೆ, ಉದ್ಯಮಿ ಮುತ್ತಪ್ಪ ರೈಯವರು ಪ್ರಸ್ತುತ ಬೆಂಗಳೂರಿನ ಬಿಡದಿಯಲ್ಲಿ ವಾಸವಾಗಿದ್ದರು. ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಅವರು ತೀರಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಅವರು ತೀರಿಕೊಂಡಿದ್ದಾರೆೆ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಮೂಲಗಳು ಘೋಷಿಸಿವೆ.
ಉಜಿರೆಯಲ್ಲಿ ಕಾಲೇಜು ಶಿಕ್ಷಣವನ್ನು ಮುಗಿಸಿದ ಅವರು ನಂತರ ವಿಜಯಾ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದರು. ಭೂಗತಲೋಕದ ಹುತ್ತದೊಳಗೆ ಕೈ ಹಾಕಿದ ನಂತರ ಅನಿವಾರ್ಯವಾಗಿ ಬ್ಯಾಂಕ್ ಕೆಲಸವನ್ನು ಬಿಡಬೇಕಾಯಿತು.
ಬೆಂಗಳೂರಿನ ಭೂಗತ ಜಗತ್ತು ಕತ್ತಿ ಮಚ್ಚು ತಳವಾರ ಗಳಲ್ಲಿ ಕೆಲಸ ಮಾಡುತ್ತಿರುವಾಗ, ಸೀದಾ ಎದ್ದು ಬೊಂಬಾಯಿಗೆ ಹೋಗಿ ಅಲ್ಲಿಂದ ವಾಪಾಸ್ ಬಂದು ಬೆಂಗಳೂರಿಗೆ ಮೊದಲ ಗುಂಡಿನ ಸದ್ದನ್ನು ಪರಿಚಯಿಸಿದ ವ್ಯಕ್ತಿ ಮುತ್ತಪ್ಪ ರೈ.
ದುಷ್ಮನಿಯನ್ನು ಕಂಡರೆ ಸಾಕು ಎಲ್ಲೆಂದರಲ್ಲಿ ಯಾವುದೇ ಯೋಜನೆ ಇಲ್ಲದೆ ಯುದ್ಧಕ್ಕೆ ತಲ್ವಾರ್ ಹಿಡಿದು ಮುನ್ನುಗ್ಗು ವುದನ್ನು ಬೆಂಗಳೂರು ಭೂಗತ ಲೋಕ ರೂಢಿ ಮಾಡಿಕೊಂಡಿದ್ದರೆ, ‘ ಸ್ಕೆಚ್ ‘ ಹಾಕಿ ಮುಗಿಸುವ ಕಲೆಯನ್ನು ಕಲಿಸಿದ ಗುರು ಮುತ್ತಪ್ಪ ರೈ. ಹುಲಿಯೊಂದು ತಾನು ಭೇಟೆಯಾಡುವ ಮುನ್ನ ಮಾಡಿಕೊಳ್ಳುವ ತಯಾರಿ, ಹೊಂಚು ಹಾಕಿ ಕೂರುವ ಸಹನೆ, ಅವಕಾಶ ದೊರೆತಾಗ ಪಡೆದುಕೊಳ್ಳುವ ವೇಗ ಮತ್ತು ವಿರೋಧಿಯೆಡೆಗೆ ಎಂದೂ ತೋರದ ನಿರ್ಧಯತೆ ರೈ ನಲ್ಲಿತ್ತು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಜೊತೆ ಗುರುತಿಸಿಕೊಂಡು ರಾಜಕೀಯವಾಗಿ ಬಲಿಷ್ಠವಾಗಿದ್ದ, ದೈಹಿಕವಾಗಿ ಅಕ್ಷರಶ: ದೈತ್ಯನಂತೆ ಇದ್ದ ಎಂ ಪಿ ಜಯರಾಜ್ ನನ್ನ ಬೆಂಗಳೂರಿನಲ್ಲಿ ಯಾವ ರೌಡಿಗಳು ಕೂಡಾ ಮುಟ್ಟುವಂತಿರಲಿಲ್ಲ. ಅಂತಹ ಸಂದರ್ಭದಲ್ಲಿ ಮುತ್ತಪ್ಪ ರೈ ಬೊಂಬಾಯಿಗೆ ಹೋಗಿ ಬಂದಿದ್ದರು. ಮುತ್ತಪ್ಪ ರೈ ಆಂಡ್ ಕೋ ಕೈಯಲ್ಲಿ ಪಿಸ್ತೂಲ್ ಹಿಡಿದು ಫೀಲ್ಡ್ ಗೆ ಇಳಿದಾಗಿತ್ತು. ಜಯರಾಜ್ ಬುರುಡೆಯಲ್ಲಿ ಗುಂಡು ಹೊಕ್ಕಿ ಆತ ಸತ್ತುಬಿದ್ದಿದ್ದ. ಅಲ್ಲಿಂದ ಮುತ್ತಪ್ಪ ರೈಯನ್ನು ಭೂಗತಲೋಕ ಏಕಾಏಕಿ ಡಾನ್ ಅಂತ ಒಪ್ಪಿಕೊಂಡಿತು.
ಮುತ್ತಪ್ಪ ರೈ ಭೂಗತ ಜಗತ್ತಿಗೆ ಎಂಟ್ರಿ ಆದದ್ದು ಒಂದು ರೋಚಕ ಕತೆ. ಹೋಟೆಲ್ ಉದ್ಯಮ ನಡೆಸುತ್ತಿದ್ದ ರೈ ನ ಆತ್ಮೀಯರಿಗೆ ಬೆಂಗಳೂರಿನ ಪುಡಿ ರೌಡಿಗಳು ಇನ್ನಿಲ್ಲದ ಕಿರುಕುಳ ಕೊಟ್ಟು ರೋಲ್ ಕಾಲ್ ವಸೂಲಿ ಮಾಡುತ್ತಿದ್ದರು. ಆಗ ಆ ಸ್ನೇಹಿತರ ಸಹಾಯಕ್ಕೆ ಬಂದ ಮುತ್ತಪ್ಪ ರೈ ತನಗರಿವಿಲ್ಲದಂತೆ ಭೂಗತ ವಿಷವರ್ತುಲಕ್ಕೆ ಸಿಕ್ಕಿಹಾಕಿಕೊಂಡಿದ್ದ. ಅದರ ಆಳ ಕೆಸರಿನಲ್ಲಿ ಆತನ ಕಾಲು ಹೂತು ಹೋಗಿತ್ತು. ಆದರೂ ಅದರಿಂದ ಕೊಸರಿಕೊಂಡು ಹೊರಬರಲು ಅವರು ಪ್ರಯತ್ನಿಸಿದ್ದರು. ಅದರಲ್ಲಿ ಭಾಗಶಃ ಯಶಸ್ಸನ್ನೂ ಪಡೆದಿದ್ದರು.
ಭೂಗತ ದೊರೆ ದುಬೈ ನಿಂದ ಭಾರತಕ್ಕೆ ಬಂದು, ತನ್ನ ಮೈ ಮೇಲಿನ ಎಲ್ಲ ಕೇಸುಗಳನ್ನು ಒಂದೊಂದಾಗಿ ತೊಳೆದುಕೊಂಡು ಬಿಟ್ಟಿದ್ದರು ಮುತ್ತಪ್ಪ ರೈ. ದುಬಾಯಿ ನಿಂದ ಬೆಂಗಳೂರಿಗೆ ಬಂದ ಮೇಲೆ ಅವರ ಮೇಲಿನ ಯಾವ ಕೇಸುಗಳು ಕೂಡಾ ಕೋರ್ಟಿನಲ್ಲಿ ಪ್ರೂವ್ ಆಗಲಿಲ್ಲ. ನಂತರ ಅವರು ಜಯ ಕರ್ನಾಟಕ ಎಂಬ ಸಂಘಟನೆ ಸ್ಥಾಪಿಸಿದರು. ಅದು ಕರ್ನಾಟಕ ರಕ್ಷಣಾ ವೇದಿಕೆಯ ಥರ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಅವರು ತುಳುವಿನ ಕಂಚಿಲ್ದ ಬಾಲೆ ಚಿತ್ರದಲ್ಲಿ ನಟಿಸಿದ್ದರು. ಇಬ್ಬರು ಗಂಡು ಮಕ್ಕಳಿದ್ದಾರೆ. 2013 ರಲ್ಲಿ ಅನಾರೋಗ್ಯದಿಂದ ಪತ್ನಿ ನಿಧನರಾಗಿದ್ದರು.
ಅತ್ಯಂತ ಚಾಲಾಕಿ, ಕುಶಾಗ್ರಮತಿ ಮತ್ತು ಹಠ ವಾದಿಯಾಗಿದ್ದ ಮುತ್ತಪ್ಪ ರೈ, ಮಡಿಕೇರಿಯ ಕೋರ್ಟಿನಲ್ಲಿ ವಕೀಲನ ಸೋಗಿನಲ್ಲಿ ಬಂದು ಗುಂಡು ಹೊಡೆದರೂ ಬದುಕಿ ಬಂದಿದ್ದ ಗಟ್ಟಿ ಜೀವ.
ಯಾವ ಡಾನ್ ಗಳ ಕೈಗೂ ಸಿಕ್ಕಿಹಾಕಿಕೊಳ್ಳದೆ ಜೀವ ಉಳಿಸಿಕೊಂಡ ಮುತ್ತಪ್ಪ ರೈ ಈಗ ವಿಧಿ ವಶ.