ಕನ್ನಡ ಚಿತ್ರರಂಗದ ಹಾಸ್ಯ ನಟ ಮೈಕಲ್ ಮಧು ಬದುಕಿನ ಪಯಣ ಅಂತ್ಯ

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹಾಸ್ಯ ನಟನೆಯ ಮೂಲಕ ಜನರ ಮನಗೆದ್ದ ಮೈಕಲ್ ಮಧು ಇಂದು ವಿಧಿವಶರಾದರು. ಸೂರ್ಯವಂಶ, ಓಂ, ಶ್ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಮೈಕಲ್ ಮಧು ಗುರುತಿಸಿಕೊಂಡಿದ್ದರು.

ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕುಳಿತಿದ್ದ ವೇಳೆ ಮೈಕಲ್ ಹಠಾತ್ ಆಗಿ ಕೆಳಗೆ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ನಾಳೆ ಬೆಳಿಗ್ಗೆ ಕಿಮ್ಸ್ ಆಸ್ಪತ್ರೆ, ಮೈಕಲ್ ಮಧು ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಒಪ್ಪಿಸಲಿದೆ.

ಮೈಕೆಲ್ ಮಧು ಅವರು ಉಪೇಂದ್ರ ಅವರ ಬ್ಯಾನರಿನ ಅಡಿಯಲ್ಲಿ ಮುನ್ನೆಲೆಗೆ ಬಂದರು. ಮೈಕೆಲ್ ಜಾಕ್ಸನ್ ನ ಆಂಗಿಕ ಅಭಿನಯವನ್ನು ಮಾಡುತ್ತಾ, ಆದರೆ ಯಾವುದೇ ರೀತಿಯಲ್ಲೂ ಮೈಕೆಲನ ಬಣ್ಣಕ್ಕೆ ಹೋಲಿಕೆಯಿಲ್ಲದ, ‘ ಹೇ, ಮ್ಯಾನ್ ‘ ಅನ್ನುತ್ತಾ ಅರ್ದಾಂಬರ್ದ ಇಂಗ್ಲಿಷ್ ಮಾತಾಡುತ್ತ ಮಾತಿಗೆ ನಿಲ್ಲುತ್ತಿದ್ದ, ವಿಭಿನ್ನ ಶೈಲಿಯ ಹೇರ್ ಸ್ಟೈಲ್ ಹೊಂದಿದ್ದ ಮೈಕೆಲ್ ಮಧು ಅವರು ಇತ್ತೀಚೆಗೆ ಚಿತ್ರರಂಗದಲ್ಲಿ ವಿರಳವಾಗಿ ನಟಿಸುತ್ತಿದ್ದರು.

ತೀರ ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಹಾಸ್ಯ ತಾರೆ ಬುಲೆಟ್ ಪ್ರಕಾಶ್ ಅವರು ಮರೆಯಾಗಿದ್ದರು. ಇದೀಗ ತಮ್ಮ ವಿಚಿತ್ರ ಆಂಗಿಕ ಅಭಿನಯದಿಂದ ಮ್ಯಾನರಿಸಂನಿಂದ ನಮ್ಮನ್ನು ನಗಿಸಿದ ಮೈಕಲ್ ಮಧು ಬದುಕಿನ ಸೈಕಲ್ ಸೈಡಿಗೆ ನಿಲ್ಲಿಸಿ ಹೋಗಿದ್ದಾರೆ. ಕನ್ನಡ ಚಿತ್ರರಂಗದ ಹಾಸ್ಯ ವಿಭಾಗ ಮತ್ತಷ್ಟು ಬಡವಾಗಿದೆ.

Leave A Reply

Your email address will not be published.