ಕಾರ್ಪಾಡಿ |ಬಟ್ಟಿ ಸಾರಾಯಿ ತಯಾರಿಕೆ ಘಟಕ ಪತ್ತೆ

ಪುತ್ತೂರು : ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆ ಸಂಪ್ಯದ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ಕಳ್ಳಬಟ್ಟಿ ಸಾರಾಯಿ ಪತ್ತೆಯಾಗಿದೆ.

ಸಂಪ್ಯದ ಕಾರ್ಪಾಡಿಯ ಹತ್ತಿರದ ಉದ್ಯಂಗಲ ಎಂಬಲ್ಲಿಯ ಕಳ್ಳಬಟ್ಟಿ ತಯಾರಿಕ ಕೇಂದ್ರಕ್ಕೆ ದಾಳಿ ನಡೆಸಿದ ಸಂಪ್ಯ ಪೋಲೀಸರು ಹಲವು ಲೀಟರ್ ಮದ್ಯ, ತಯಾರಿಕ ಮೆಷಿನ್, ತಯಾರಿಸಲು ಶೇಖರಿಸಿಟ್ಟ ವಸ್ತುಗಳನ್ನು ಹಾಗೂ ತಯಾರಿಕೆ ಮಾಡುತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಕಳ್ಳ ಭಟ್ಟಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರ್ಯಾಪು ಗ್ರಾಮದ ಮರಿಕೆ ದಿ.ಬಾಬು ಪೂಜಾರಿ ಅವರ ಪುತ್ರ ರಾಜು ಪೂಜಾರಿ(38ವ) ಮತ್ತು ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳ ಉದ್ಯಂಗಳದಲ್ಲಿ ಸಂಕಪ್ಪ ಪೂಜಾರಿ ಅವರ ಪುತ್ರ ದಯಾನಂದ ಪೂಜಾರಿ (55ವ) ಬಂಧಿತ ಆರೋಪಿಗಳು.

ಆರೋಪಿಗಳಿಂದ ಒಟ್ಟು 7 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಕಳ್ಳಭಟ್ಟಿ ತಯಾರಿಸಲು ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ವಶ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 6,325 ಆಗಿದೆ.

ಘಟನೆ ವಿವರ: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಂಪ್ಯ ಪೊಲೀಸರು ಕಲ್ಲರ್ಪೆ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದ್ವಾರದ ಬಳಿ ಪ್ಲಾಸ್ಟಿಕ್ ಕೈ ಚೀಲದಲ್ಲಿ ಯಾವುದೋ ವಸ್ತುವನ್ನು ತುಂಬಿಸಿ ಹಿಡಿದುಕೊಂಡು ಇದ್ದ ಒಬ್ಬ ವ್ಯಕ್ತಿಯನ್ನು ವಿಚಾರಿಸಲು ಹೋದಾಗ ಆತ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನನ್ನು ಪೊಲೀಸರು ಹಿಡಿದು ತಪಾಸಣೆ ನಡೆಸಿದಾಗ ಆರೋಪಿ ರಾಜು ಪೂಜಾರಿ ಬಳಿಯಲ್ಲಿ ಬಾಟಲಿಯಲ್ಲಿ 4 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಮಾರಾಟದಿಂದ ಬಂದಿರುವ ಹಣ ಪತ್ತೆಯಾಗಿತ್ತಲ್ಲದೆ ಆರ್ಯಾಪು ಗ್ರಾಮದ ಉದ್ಯಂಗಳದ ದಯಾನಂದ ಪೂಜಾರಿ ಎಂಬವರಿಂದ ಕಳ್ಳಭಟ್ಟಿ ಸಾರಾಯಿಯನ್ನು ಖರೀದಿಸಿ, ಮದ್ಯದ ಬೇಡಿಕೆಯಿರುವ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಳಿಕ ಆರೋಪಿ ರಾಜು ಪೂಜಾರಿ ಸಹಾಯದಿಂದ ಕಳ್ಳಭಟ್ಟಿ ಅಡ್ಡೆಯನ್ನು ಪತ್ತೆ ಮಾಡಲಾಯಿತು. ಈ ವೇಳೆ ಅಲ್ಲಿದ್ದ ದಯಾನಂದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಡ್ಡೆಯಲ್ಲೂ 3 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಡ್ರಮ್ಮೊಂದರಲ್ಲಿದ್ದ 30 ಲೀಟರ್ ಹುಳಿರಸ, ಪ್ಲಾಸ್ಟಿಕ್ ಡ್ರಮ್, ಅಲ್ಯೂಮಿನಿಯಂ ಗುಡಾಣ, ಪಾತ್ರೆ, ಸ್ಟೀಲ್ ಪೈಪ್ ಅಳವಡಿಸಿರುವ ಸ್ಟೀಲ್ ಬಟ್ಟಲ್, ಪ್ಲಾಸ್ಟಿಕ್ ಪೈಪ್, ಗ್ಯಾಸ್ ಸ್ಟವ್‌ವನ್ನು ಪೊಲೀಸರು ಸ್ವಾಧೀನ ಪಡಿಸಿದ್ದು, ಆರೋಪಿಗಳ ವಿರುದ್ಧ ಕಲಂ 13 (ಎ) 13 (ಎಫ್) 32, 34, 43 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲು ಮಾಡಲಾಗಿದೆ.

Leave A Reply

Your email address will not be published.