ಲಾಯಿಲದ ವಿಮಲೇಶ್ ಹೊಸೂರಿನಲ್ಲಿ ಆತ್ಮಹತ್ಯೆ | ಒಂಟಿಯಾಗಿ ಅಮ್ಮನನ್ನು ಬಿಟ್ಟು ನಡೆದ ಮಗ
ಲಾಯಿಲ : ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿ. ತುಕಾರಾಮ ಮತ್ತು ವಿನುತಾ ದಂಪತಿಗಳ ಪುತ್ರ ವಿಮಲೇಶ್ ಅವರ ಮೃತದೇಹ ತಮಿಳುನಾಡಿನ ಹೊಸೂರು ರೈಲು ಹಳಿಗಳ ಮೇಲೆ ಪತ್ತೆಯಾಗಿದೆ.
ವಿಮಲೇಶ್ ಹೊಸೂರಿನಲ್ಲಿ ರಾಜಶ್ರೀ ಅಟೋಮೋಟಿವ್ ಪ್ರೈವೆಟ್ ಲಿಮಿಟೆಡ್ ಇಂಡಸ್ಟ್ರಿಯಲ್ಲಿ ಕೆಲಸದಲ್ಲಿದ್ದರು. ಅಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಘಟನೆಯು ಏಪ್ರಿಲ್ 30 ರಂದೇ ನಡೆದಿದ್ದು ಈಗಿನ ಕೊರೋನಾ ಆತಂಕದ ಪರಿಸ್ಥಿತಿಯಲ್ಲಿ ಮೃತದೇಹವನ್ನು ಊರಿಗೆ ತಾರಲಾಗದೆ ಅನಿವಾರ್ಯವಾಗಿ ಅಲ್ಲಿಯೇ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲಿನ ರೈಲ್ವೇ ಹಳಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಅದು ಗಮನಕ್ಕೆ ಬರುತ್ತಿದ್ದಂತೆ ಅಲ್ಲಿನ ಸ್ಥಳೀಯರು ಹೊಸೂರಿನ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ತಮಗೆ ದೊರೆತ ಮೊಬೈಲ್ ನ ಜಾಡು ಆಧರಿಸಿ ಮೃತಪಟ್ಟಿರುವುದು ವಿಮಲೇಶ್ ಎಂದು ಗುರುತಿಸಿದ್ದಾರೆ. ಆನಂತರ ಮನೆಯವರಿಗೆ ಸುದ್ದಿ ತಲುಪಿಸಲಾಗಿದೆ.
ಲಾಕ್ಡೌನ್ ಇರುವ ಕಾರಣದಿಂದ ಮೃತ ವಿಮಲೇಶ್ ನ ತಾಯಿ ಮತ್ತು ಸಂಬಂಧಿಗಳು ಸೇರಿ ಒಟ್ಟು ನಾಲ್ಕು ಮಂದಿಗೆ ಮಾತ್ರ ವಿಶೇಷ ಪಾಸ್ ವ್ಯವಸ್ಥೆ ಮಾಡಿದ ಪೊಲೀಸರು ಹೊಸೂರಿಗೆ ಕಳುಹಿಸಿ ಕೊಟ್ಟಿದ್ದಾರೆ. ಅಲ್ಲಿಯೇ ಆತನ ಅಂತಿಮ ವಿಧಿ ನಡೆದಿದೆ.
ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ವಿಮಲೇಶ್ ಎಲ್ಲರಂತೆ ಸಹಜವಾಗಿರದೆ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡಿದ್ದ. ಅತ್ತ ಅಮ್ಮನನ್ನು ಒಬ್ಬಳನ್ನೆ ಬಿಟ್ಟು, ಮಗ ತನ್ನ ಜವಾಬ್ದಾರಿಯಿಂದ ವಿಮುಖನಾಗಿ ನಡೆದಿದ್ದಾನೆ.