ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ, ಮಲೇರಿಯ ನಿಯಂತ್ರಣಕ್ಕೆ ಸಿದ್ಧತೆ ಮಾಡುವಂತೆ ಪಿಡಿಒ, ಲೆಕ್ಕಾಧಿಕಾರಿಗಳಿಗೆ ಎಸಿ ಖಡಕ್ ಸೂಚನೆ
ಪುತ್ತೂರು : ಡೆಂಗ್ಯೂ, ಮಲೇರಿಯ ನಿಯಂತ್ರಣಕ್ಕಾಗಿ ಪ್ರತಿ ಹಳ್ಳಿಗಳಲ್ಲಿ ಸೊಳ್ಳೆ ಉತ್ಪನ್ನ ತಾಣಗಳನ್ನು ನಾಶ ಮಾಡಬೇಕು. ಈ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕೆಲಸ ತಳಮಟ್ಟದಲ್ಲಿ ನಡೆಯಬೇಕು. ದಿನವೊಂದಕ್ಕೆ ಕನಿಷ್ಠ 50 ಮಂದಿಗಾದರೂ ಸಾಂಕ್ರಾಮೀಕ ರೋಗದ ಕುರಿತು ಮುನ್ನೆಚ್ಚರಿಕೆ ಕ್ರಮದ ಜಾಗೃತಿ ಮೂಡಿಸುವಂತೆ ಸಹಾಯಕ ಕಮೀಷನರ ಡಾ. ಯತೀಶ್ ಉಳ್ಳಾಲ್ ಅವರು ತಾಲೂಕಿನ ಪ್ರತಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮತ್ತು ಲೆಕ್ಕಾಧಿಕಾರಿಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕೊರೋನಾ ವೈರಸ್ ಸೋಂಕು ಜೊತೆಗೆ ಪುತ್ತೂರಿನ ಬೆಟ್ಟಂಪಾಡಿ ಮತ್ತು ಬಲ್ನಾಡು ಗ್ರಾ.ಪಂ ವ್ಯಾಪ್ತಿಯಲ್ಲಿ ಶಂಕಿತ ಡೆಂಗ್ಯೂ ಮತ್ತು ಮಲೇರಿಯ ಸಾಂಕ್ರಾಮಿಕ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕಾಗಿ ಕಂದಾಯ ಇಲಾಖೆ, ತಾ.ಪಂ ಮತ್ತು ಆರೋಗ್ಯ ಇಲಾಖೆ ಪುತ್ತೂರು ವತಿಯಿಂದ ಪ್ರತಿ ಗ್ರಾ.ಪಂ ಪಿಡಿಒ ಮತ್ತು ಲೆಕ್ಕಾಧಿಕಾರಿಗಳಿಗೆ ಮೇ 6ರಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜನರೊಂದಿಗೆ ಹತ್ತಿರವಾಗಿರೋ ತಳಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಕಾರ್ಯಾಗಾರ ನಡೆಸಲಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಹಳ್ಳಿಗಳಲ್ಲಿರುವ ಮಲೇರಿಯಾ, ಡೆಂಗ್ಯೂ ಉತ್ಪನ್ನದ ತಾಣಗಳನ್ನು ಗುರುತಿಸಿ, ಪಂಚಾಯತ್ ಮೂಲಕ ಮನೆ ಮನೆ ಭೇಟಿ ಅಥವಾ ಪಂಚಾಯತ್ ವಠಾರದಲ್ಲೇ ದಿನಕ್ಕೆ ಕನಿಷ್ಠ ೫೦ ಜನರಿಗೆ ಜಾಗೃತಿ ಮಾಹಿತಿ ನೀಡಿ ಎಂದ ಅವರು ಕೋವಿಡ್ ಇರುವ ನಿಟ್ಟಿನಲ್ಲಿ ಡೆಂಗ್ಯೂ ಮತ್ತು ಮಲೇರಿಯ ಬಂದರೆ ತೀವ್ರ ತರದ ಸಮಸ್ಯೆ ಆಗುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಿ ಮೂಡಿಸುವ ಕೆಲಸ ಮಾಡಲೇ ಬೇಕೆಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಅವರು ಮಾತನಾಡಿ ಕೋವಿಡ್‌ನಿಂದ ಬಹುತೇಕ ವೃದ್ಧರು ಮೃತಪಟ್ಟಿದ್ದಾರೆ. ಡೆಂಗ್ಯೂ ಮಲೇರಿಯಾದಿಂದ ಮಕ್ಕಳಿಂದ ಹಿಡಿದು ಗಟ್ಟಿಮುಟ್ಟಾದ ಯುವಕರೇ ಮೃತಪಡುವುದು ಹೆಚ್ಚು. ಈ ನಿಟ್ಟಿನಲ್ಲಿ ಎಲ್ಲರು ಬಹಳ ಎಚ್ಚೆತ್ತು ಕೆಲಸ ಮಾಡಬೇಕು ಎಂದ ಅವರು ಡೆಂಗ್ಯೂ ಮಲೇರಿಯ ಹರಡಲು ವಾಹಕ ಬೇಕು. ಆ ವಾಹಕವೇ ಸೊಳ್ಳೆ. ಸೊಳ್ಳೆ ಇಲ್ಲದೆ ಡೆಂಗ್ಯೂ ಮತ್ತು ಮಲೇರಿಯ ಹರಡುವುದಿಲ್ಲ. ಆದರೆ ಕೋವಿಡ್ ಮಾತನಾಡುವಾಗ, ಸೀನುವಾಗ ದೇಹದಿಂದ ಬರುವ ದ್ರವದಿಂದ ಹರಡುವ ಖಾಯಿಲೆಯಾಗಿದೆ.
ಈ ನಿಟ್ಟಿನಲ್ಲಿ ಸಾಂಕ್ರಾಮೀಕ ರೋಗಕ್ಕೂ ಇತರ ರೋಗಕ್ಕೂ ವ್ಯತ್ಯಾಸ ಇರುತ್ತದೆ. ಡೆಂಗ್ಯೂ ಮತ್ತು ಮಲೇರಿಯ ದಕ್ಷಿಣ ಕನ್ನಡ ಜಿಲ್ಲೆಗೆ ದೊಡ್ಡ ವಿಚಾರ. ಕಳೆದ ವರ್ಷ ೩,೪೯೯ ಡೆಂಗ್ಯೂ, ಮಲೇರಿಯಿ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಈ ಪೈಕಿ ೨೭೯೭ ಪ್ರಕರಣಗಳು ದ.ಕ.ಜಿಲ್ಲೇಯಲ್ಲೇ ಇತ್ತು. ರಾಜ್ಯಕ್ಕೆ ಶೇ.೮೫ರಷ್ಟು ದಕ್ಷಿಣ ಕನ್ನಡ ಜಿಲ್ಲೆಯೇ ಮಲೇರಿಯ ಕೊಡುತ್ತಿದೆ. ಈಗಾಗಲೇ ಪುತ್ತೂರಿನಲ್ಲಿ ಸಾಕಷ್ಟು ಕೇಸ್ ಬಂದಿದೆಯಾದರೂ ಅವೆಲ್ಲಾ ಕಡಿಮೆ ಆಗುತ್ತಿವೆ ಎಂದರು.
ಕಳೆದ ವರ್ಷ ಡೆಂಗ್ಯೂ ಮಲೇರಿಯ ರೋಗಗಳಿಂದಾಗಿ ಆಸ್ಪತ್ರೆಯಲ್ಲಿ ಇತರ ರೋಗಿಗಳನ್ನು ದಾಖಲಿಸಲು ಸ್ಥಳವಕಾಶದ ಕೊರತೆ ಆಗಿತ್ತು. ಈ ವರ್ಷ ಹಾಗೆ ಆಗಬಾರದು. ಅದಕ್ಕಾಗಿ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ ರೀತಿಯಲ್ಲಿ ಕಂಟೈನ್ಮೆಂಟ್ ಏರಿಯಾ ಮಾಡಿಕೊಳ್ಳಬಹುದು ಎಂದು ಡಾ. ನವೀನ್‌ಚಂದ್ರ ಹೇಳಿದರು.
ರೋಗ ಲಕ್ಷಣದ ಕುರಿತು ಅವರು ವಿವರಣೆ ನೀಡಿದರು. ಈಡೀಸ್ ಮತ್ತು ಅನಾಫಿಲಿಸ್ ಸೊಳ್ಳೆಯಿಂದ ಡೆಂಗ್ಯೂ ಮತ್ತು ಮಲೇರಿಯ ಬರುತ್ತದೆ.
ಈ ನಿಟ್ಟಿನಲ್ಲಿ ಸೊಳ್ಳೆ ಹೇಗೆ ಹುಟ್ಟುತ್ತದೆ. ಎಲ್ಲಿ ಹುಟ್ಟುತ್ತದೆ ಎಂಬುದನ್ನು ನೋಡಬೇಕು. ಯಾಕೆಂದರೆ ನಮ್ಮ ವಾತಾವರಣಗಳಿಂದ ಸೊಳ್ಳೆಗಳು ತುಂಬಾ ಸುಲಭವಾಗಿ ಬದುಕುತ್ತದೆ.ಕೊಳಚೆ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುವುದಿಲ್ಲ.
ಒಳ್ಳೆಯ ಸ್ವಚ್ಛ ನೀರಿನಲ್ಲೇ ಸೊಳ್ಳೆ ಉತ್ಪತ್ತಿಯಾಗುತ್ತದೆ. ನಮ್ಮ ಪರಿಸರದಲ್ಲಿ ತೋಟದ ವಾಣಿಜ್ಯ ಬೆಳೆ ಏನಿದೆಯೋ ಅದನ್ನು ಸರಿಯಾದ ಸಮಯದಲ್ಲಿ ವಿಲೇವಾರಿ ಮಾಡುವುದು ಅಗತ್ಯ. ಆದರೆ ಬಹುತೇಕ ಮಂದಿ ತೋಟದಲ್ಲಿ ಸೊಳ್ಳೆ ಇರುವುದು ಸಾಮಾನ್ಯ ಜನರ ಚಿಂತನೆ. ಈ ಚಿಂತನೆ ಮಾಡುವವರಿಗೆ ಡೆಂಗ್ಯೂ, ಮಲೇರಿಯ ಜಾಗೃತಿ ಮೂಡಿಸುವುದು ಅಗತ್ಯ. ಜೊತೆಗೆ ಅಂಗಡಿಗಳ ಮುಂದೆ ಪಾನಿಯಾ ಬಾಟಲಿಗಳಲ್ಲಿ ಮತ್ತು ಸೀಯಾಳದ ಚಿಪ್ಪಿನಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
ಗುಜುರಿ ಅಂಗಡಿಗಳಿದ್ದರೆ ಅಲ್ಲಿರುವ ಹಳೆಯ ಪಾತ್ರೆ, ಡ್ರಮ್‌ಗಳನ್ನು ಪಿಡಿಒಗಳು ತೆರಳಿ ಪರಿಶೀಲಿಸಬೇಕು ಮತ್ತು ಮನೆ ಮನೆಗೆ ಹೋಗಿ ಅಥವಾ ಮೈಕ್ ಅನೌನ್ಸ್‌ಮೆಂಟ್ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು. ನಿಮ್ಮ ಮಾಹಿತಿಯನ್ನು ಕೇಳದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದರು.
ಸಭೆಯಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಹಶೀಲ್ದಾರ್ ರಮೇಶ್ ಬಾಬು ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಕಂದಾಯ ಅಧಿಕಾರಿ ರವಿ, ವೆಂಕಟೇಶ್, ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ತಾಲೂಕಿನ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮತ್ತು ಲೆಕ್ಕಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.