ಲಾಕ್ ಡೌನ್ ಸಂಜೆಯಲ್ಲೊಂದು ರಿಕ್ಷಾ ಸವಾರಿ….!
ಮಾರ್ಚ್ ಬಂತೆಂದರೆ ನಮ್ಮಲ್ಲಿ ಅಟ್ಟಕ್ಕೆ ಹಾಕಿದ ಒಣ ಅಡಿಕೆ ಹೊರತೆಗೆದು ಸಿಪ್ಪೆ ಸುಲಿದು ಮಾರಾಟಕ್ಕೆ ಅಣಿ ಮಾಡೋದು ವಾಡಿಕೆ. ನಮ್ಮಲ್ಲಿ ಅಂತಲ್ಲ, ಎಲ್ಲಾ ಕಡೆ ಹಾಗೇ ನಡೆದು ಬಂದಿದೆ ಕೂಡ. ಯಾಕೆಂದರೆ ಮಾರ್ಚ್ ನಮ್ಮಂತಹ ಕೃಷಿಕರು ಫಸಲು ಮಾರಿ ಬ್ಯಾಂಕ್ ಸಾಲ ತೀರಿಸಬೇಕಾದ ತಿಂಗಳು.
ಮಾರ್ಚ್ ಮೊದಲ ವಾರದಲ್ಲಿ ತೆಗೆದಿಟ್ಟಿದ್ದ ಅಡಕೆ ಮಾರಾಟಕ್ಕೆ ಸಿದ್ದವಾಗುವ ಹೊತ್ತಿಗೆ ಲಾಕ್ ಡೌನ್ ಘೋಷಣೆಯಾಯ್ತು. ಜೊತೆಗೆ ಮಾಡಲು ಕೆಲಸವೂ ಅಷ್ಟೊಂದು ಇಲ್ಲದೇ ಇದ್ದುದರಿಂದಾಗಿ ಅಟ್ಟದಲ್ಲಿದ್ದ ಕೊಬ್ಬರಿಯೂ ಮೈ ಬಿಚ್ಚಿಕೊಂಡು ಗಾಣದ ಕೋಣೆಗೆ ಹೊರಡಲು ರೆಡಿಯಾಗಿ ಕುಂತಿತ್ತು. ಅವೆರಡೂ ಕಾಯುತ್ತಿದ್ದುದು ಲಾಕ್ ಡೌನ್ ಸಡಲಿಕೆ. ಅಮ್ಮನ ಬೈಗುಳದ ನಡುವೆ ನನ್ನ ಮತ್ತು ಅಡಕೊಬ್ಬರಿಗಳ ಪೇಟೆ ಸವಾರಿಗೆ ಇವತ್ತು ದಿನ ಕೂಡಿ ಬಂತು.
ಹಲೋ ಪ್ರಸಾದ್ ಒಂದು ಬಾಡಿಗೆ ಇತ್ತು ಬರ್ಬೋದಾ? ನನ್ನ ಬಾಲ್ಯದ ಗೆಳೆಯ ಪ್ರಸಾದ್ ಗೆ ಫೋನಾಯಿಸಿದೆ. ಅವನೋ “ನಾನೊಂದು ಸ್ವಲ್ಪ ಬೇರೆ ಬಾಡಿಗೆಯಲ್ಲಿದ್ದೇನೆ. ಮಧ್ಯಾಹ್ನದ ಮೇಲೆ ಹೊರಟರಾಗದೆ?” ಕೇಳಿದ. ಆಗಬಹುದು, ಆದರೆ ಮಳೆ ಬರಬಹುದು ಅಂತ ಎಚ್ಚರಿಸಿದೆ.
ಮಧ್ಯಾಹ್ನ ಫೋನಾಯಿಸಿದರೆ ಅರ್ಧರ್ಧ ಗಂಟೆ ಅಂತ ಪುಣ್ಯಾತ್ಮ ಮೂರು ಗಂಟೆಯವರೆಗೆ ಕಾಯಿಸಿದ.
ಹೀಗೆ ಹೊರಟಿತು ನಮ್ಮ ರಿಕ್ಷಾ ಸವಾರಿ.
“ಅಲ್ವೋ ನಾನ್ ಕಾಲ್ ಮಾಡಿದ್ದಾಗ ಅದೇನೋ ಬಾಡಿಗೆ ಇತ್ತು ಅಂದ್ಯಾಲ್ಲ.. ಎಂತ ಬಾಡಿಗೆ… ಎಣ್ಣೆ ಶಾಪಿಗಾ?” ಗೆಳೆಯನನ್ನು ಅಣಕಿಸುವಂತೆ… ಮಾತಿಗೆಳೆದೆ.
“ಹೌದು ಮಾರಾಯ! ಹಾಳಾದ ಕುಡುಕರು ಆದ್ರೆ ನಮಗೀಗ ಅವರೇ ಗತಿ. ಕಷ್ಟ ಅಲ್ವಾ ಬಾಡಿಗೆ ಮಾಡಲೇಬೇಕು” ಅಂತ ಕುಡುಕರನ್ನ ದೇಶವನ್ನ ಬೈತಾನೆ ಅಂದುಕೊಂಡ್ರೆ….
“ಇಲ್ಲ ಅಂತದ್ದು ಇಲ್ಲಿಯವರೆಗೆ ಬಂದಿಲ್ಲ. ಬೆಳಗ್ಗೆ ಒಂದು ಟಿ.ವಿ ತರಲಿಕ್ಕೆ ಮತ್ತೊಂದು ಫ್ರಿಡ್ಜ್ ತರ್ಲಿಕ್ಕೆ….” ಅಂದ.
“ಹೌದಾ? ಏನ್ ವಿಶೇಷ?” ಕಣ್ಣರಳಿಸಿ ಕೇಳಿದೆ.
“ಹೋಗಿದ್ದು ಚಯರ್ ತರ್ಲಿಕ್ಕೆ ಅಲ್ಲಿ ಹೋದ್ಮೇಲೆ ಫ್ರಿಡ್ಜ್ ಬೇಕೆನಿಸಿತು ತಂದ್ರು” ಅಂದ.
ಮತ್ತೆ ಮತ್ತೆ ಅವನನ್ನು ಪ್ರಶ್ನೆ ಕೇಳಿ ಕಾಡಿಸಲು ಇಷ್ಟವಾಗಲಿಲ್ಲ.
ಅಷ್ಟರಲ್ಲಿ ನಾನು ಹೋಗಬೇಕಾಗಿದ್ದ ಎಣ್ಣೆಯ ಅಂಗಡಿ ಬಂದಿದ್ದರಿಂದ ಇಳಿದು ತೂಗಿ ನನಗೆ ಕೊಬ್ಬರಿ ಎಣ್ಣೆ ತುಂಬಿಸಲು ಕ್ಯಾನ್ ಬೇಕಾಗಿದ್ದರಿಂದ ಹತ್ತಿರದ ದೊಡ್ಡ ಮಳಿಗೆಗೆ ಹೋದೆ.
ಹೋಗುತ್ತಿರುವುದೇನೂ ಹೊಸತಲ್ಲ. ಆದರೆ ಹತ್ತಾರು ಜನರು ಕೆಲಸಕ್ಕಿರುವ ಬೃಹತ್ ಅಂಗಡಿಯಲ್ಲಿ ಯಜಮಾನ ನನ್ನನ್ನು ಹೇಗೆ ತಾನೇ ಆತ್ಮೀಯತೆಯಿಂದ ಮಾತನಾಡಿಸಬಲ್ಲ. ಇವತ್ತು ಹಾಗಾಗಲಿಲ್ಲ. ನಾನೇ ಬ್ಯುಸಿಯಾಗಿದ್ದರೂ ಆತನೇ ನಿಲ್ಲಿಸಿ ಆತ್ಮೀಯತೆಯಿಂದ ಮಾತನಾಡಿದ. ಹಾ! ಮಾತನಾಡುತ್ತಾ ಆತ ಹೇಳಿದ ಒಂದು ವಿಚಾರ ಬಹಳ ಮುಖ್ಯವೆನಿಸಿತು…
ತಿಂಗಳ ಹಿಂದೆ ಆತನ ಗೋದಾಮಿನಲ್ಲಿ ಐವತ್ತಕ್ಕೂ ಹೆಚ್ಚಿನ ಕೇರಂ ಬೋರ್ಡುಗಳಿದ್ದವು, ಮುನ್ನೂರಕ್ಕೂ ಹೆಚ್ಚಿನ ಶಟಲ್ ಬ್ಯಾಟ್ , ಕ್ರಿಕೆಟ್ ಬ್ಯಾಟ್, ಬಾಲ್, ಚೆಸ್ ಬೋರ್ಡ್ ಇತ್ಯಾದಿ ಸಾಮಾಗ್ರಿಗಳಿದ್ದವು.
ಸಾವಿರಾರು ರುಪಾಯಿ ಬೆಲೆಬಾಳುವ ಆಟದ ಸಾಮಾಗ್ರಿಗಳೂ ಸೇರಿ ಎಲ್ಲವೂ ಖಾಲಿಯಾಗಿದೆಯಂತೆ. ಏನಶ್ಚರ್ಯ! ನಮ್ಮ ಜಂಗಮವಾಣಿಯಲ್ಲಿ ದೊರೆಯುವ ವಿಡಿಯೋ ಗೇಮ್ ಗಳಿಗಿಂತಲೂ ಈ ಆಟಗಳು ಈಗ ಆತ್ಮೀಯವೆಂದೆನಿಸಿದವೇ? ಆತನಲ್ಲಿ ಇನ್ನೂ ಹಲವು ಪ್ರಶ್ನೆಗಳಿದ್ದವು. ಜೊತೆಗೆ ತನಗೆ ಜಾಸ್ತಿಗೆ ಮಾರುವ ಅವಕಾಶವಿದ್ದರೂ ತಾನು ಧರ್ಮಾತ್ಮ ಅಂತ ಕೊಚ್ಚಿಕೊಳ್ತಾ ಇದ್ದ ಹಾಗೆ ನಾವಲ್ಲಿಂದ ಕಾಲ್ಕಿತ್ತೆವು.
ಅಡಕೆ ಮಂಡಿಯಲ್ಲೂ ಅದೇ ಆತ್ಮೀಯತೆಯ ಮಾತುಗಳು. ಹಿಂದೆಲ್ಲಾ ಅಡಕತ್ತರಿಯ ನಡುವೆ ಒಬ್ಬ ಹಾಳಾದವ ಸಿಕ್ಕಿದರೂ ನೂರು ಮಾತಾಡಿ ಸಾವಿರ ಉಳಿಸಿಕೊಳ್ಳುತ್ತಿದ್ದವರು ಇಂದು ಕಣ್ಮುಚ್ಚಿ ನೋಟೆಣಿಸಿ ಕೊಟ್ಟಿದ್ದರು. ಅಲ್ಲೇ ಹೊರಗೆ ಬಂದಾಗ ದೂರದ ಸಂಬಂಧಿಕರು ಯಾವಗಲೋ ಸಂಧಿಸಿದ ನೆನಪು. ಮಾತಾಡಿಸಿಯೇ ಇರದವರು ಇಂದು ನನ್ನ ಕುಲಗೋತ್ರ ಎಲ್ಲಾ ವಿಚಾರಿಸಿಬಿಟ್ಟರು.
ಅಷ್ಟರಲ್ಲಿ ಸಂಜೆಯಾದ್ದರಿಂದ ಚಹಾ ಕುಡಿಯುವ ಮನಸ್ಸಾಯಿತು. ಪ್ರಸಾದನಿಗೆ “ನೀನು ಫ್ರೀಯಾಗಿದ್ದರೆ ಯಾವುದಾದರೂ ಚಹಾದ ಹೋಟೆಲ್ ಹೊಕ್ಕು ಸ್ವಲ್ಪ ಹೊತ್ತು ಹರಟೋಣವೇ?” ಕೇಳಿದೆ.
ಅವನದೇ ಪರಿಚಯದ ಹೋಟೆಲ್ ಹೊಕ್ಕರೆ ಆತನ ಪರಿಚಿತರೊಬ್ಬರು ಗ್ಲಾಸ್ ತೊಳೆಯುತ್ತಿದ್ದರು. ಅವರೋ ಲಾಕ್ ಡೌನ್ ಮುಂಚೆ ತೂರಾಡುತ್ತಿದ್ದ ಗಿರಾಕಿಯಂತೆ ನನಗೊತ್ತಿಲ್ಲ. ಪ್ರಸಾದ್ ನಿಧಾನಕ್ಕೆ ಅವರ ಕಾಲೆಳೆಯಲು ಶುರು ಮಾಡಿದ.
“ಏನು ಶೆಟ್ರೆ ನಿನ್ನೆ ಓಪನ್ ಅಂತೆ ಅಲ್ವಾ? ಹೋಗಲ್ವಾ?” ಅಂದ.
”ಎಲ್ಲಿಂದ ಹೋಗೋದು. ಕಿಸೆಯಲ್ಲೂ ಬೇಕಲ್ವಾ?” ಅಂತ ಗೋಳು ಹೊಯ್ಕೋತಾರೆ ಅಂತ ನಾನಂದುಕೊಂಡಿದ್ರೆ ಅವರಿಗೋ ಆತನ ದಿಢೀರ್ ಪ್ರಶ್ನೆಯಿಂದ ಕೊಂಚ ನಾಚಿಕೆಯಾಗಿರಬೇಕು. ನನ್ನತ್ತ ತಿರುಗಿ
“ನೋಡಿ ಸರ್ ನಲವತ್ತು ದಿನ ಕುಡಿತ ಬಿಟ್ಟೋನಿಗೆ ನಲವತ್ತೊಂದನೇ ದಿನ ಬಿಡೋದು ದೊಡ್ ವಿಷ್ಯಾನಾ? ನಿಜ ಹೇಳ್ತೀನಿ, ದಿನಕ್ಕೆ ನಾಲ್ನೂರರಿಂದ ಐನೂರು ರುಪಾಯಿ ನನಗೆ ಕುಡಿಯೋಕೆ ಆಗ್ತಿತ್ತು. ಈ ಲಾಕ್ ಡೌನ್ ಶುರುವಾದಾಗಿನಿಂದ ಆ ಹಣ ನನ್ನ ಉಳಿತಾಯದ ಖಾತೆ ಸೇರಿದೆ. ನನಗೂ ಇಷ್ಟು ದಿನ ಮಾಡಿದ್ದು ಪಾಪ ಅಂತ ಅನ್ನಿಸೋಕೆ ಶುರುವಾಗಿದೆ. ಇನ್ನಾದರೂ ಹೆಂಡತಿ ಮಕ್ಕಳಿಗೋಸ್ಕರ ಬದುಕೋಣ ಅಂದ್ಕೊಂಡಿದೀನಿ. ಇಲ್ಲಿ ಕೆಲಸ ಮಾಡ್ತಿರೋದು ದುಡ್ಡಿಗೋಸ್ಕರ ಅಲ್ಲ, ಬದಲಾಗಿ ಮನೆಯಲ್ಲೇ ಕುಳಿತುಕೊಂಡು ತಿಂದುಂಡು ಅರಾಮಾಗಿ ಇರೋ ಬದಲು ಇದನ್ನಾದರೂ ಮಾಡೋಣ ಅಂತ. ನನ್ನ ಕಾಫಿ, ತಿಂಡಿ, ಊಟದ ಖರ್ಚೂ ಸರಿ ಹೋಗುತ್ತದೆ. ಜೊತೆಗೆ ಸಂಜೆ ಐವತ್ತೋ ನೂರೋ ಖರ್ಚಿಗೆ ಕೊಡ್ತಾರೆ ಅಷ್ಟು ಸಾಕು….”
ಇಷ್ಟು ಹೇಳ್ಬೇಕಾದ್ರೆ ಆತನಿಗೇ ಗೊತ್ತಿಲ್ಲದಂತೆ ಕಣ್ಣಂಚಿನಿಂದ ನೀರು ಜಾರಿ ಹೋಯ್ತು. ಅಷ್ಟು ಹೊತ್ತಿಗಾಗ್ಲೆ ಟಿ.ವಿ, ಫ್ರಿಡ್ಜ್ ಗಳ ಖರೀದಿಯ ಹಿಂದಿನ ಸೀಕ್ರೆಟ್ ಅರಿವಾಯ್ತು.
ಅಲ್ಲಿಂದ ಹೊರಟ ನನ್ನ ತಲೆಯೊಳಗೆ ಮತ್ತೊಂದಿಷ್ಟು ಪ್ರಶ್ನೆಗಳು ಕಾಡತೊಡಗಿದವು…. ಪ್ರಸಾದ್ನನ್ನೇ ಕೇಳಿದೆ.
“ಅಲ್ವೋ, ಪ್ರಸಾದ ಕುತೂಹಲಕ್ಕೆ ಕೇಳ್ತೀನಿ ಅದೇನೋ ರಿಕ್ಷಾ ಡ್ರೈವರ್ ಗಳಿಗೆ, ಬಡವರಿಗೆ ಕಿಟ್ ಅಂತ ಕೊಡ್ತಿದ್ರಲ್ವಾ? ನಿನಿಗ್ ಸಿಕ್ಕಿಲ್ವಾ?”
“ನನಿಗಾ? ಅದನ್ನು ತಗೊಂಡು ಏನ್ಮಾಡ್ಲಿ?. ಸರಿಯಾಗಿ ಕುಂತು ಉಂಡ್ರೆ ನಮ್ಮ ಫ್ಯಾಮಿಲಿಗೆ ಎರಡು ದಿನಕ್ಕೆ ಹೊಟ್ಟೆ ತುಂಬಾ ಸಾಕಾಗ್ಲಿಕ್ಕಿಲ್ಲ. ಅದರಲ್ಲೂ ಬೇಕಾಗಿರುವ ಅಕ್ಕಿಗಿಂತ ನೆಲಕಡಲೆಯಂತಹ ಕಾಳುಗಳೇ ಜಾಸ್ತಿ ಇದ್ವು. ಅವ್ವಾನು ನಿನ್ನೆಯಿಂದ ಪಕ್ಕದ ಮನೆಯ ತೋಟಕ್ಕೆ ಕಳೆ ಕೀಳಲು ಹೋಗ್ತಾಳೆ. ಅಲ್ಲಿ ಕೊಡುವ ಅಕ್ಕಿಯೇ ಸದ್ಯಕ್ಕೆ ಊಟಕ್ಕೆ” ಅಂದ ನಗುತ್ತಾ.
ಅಷ್ಟರಲ್ಲಿ ಮನೆಯ ದಾರಿ ಬಂತು. ಇಷ್ಟೆಲ್ಲಾ ಸವಾರಿಯ ನಡುವೆ ಲಾಕ್ ಡೌನಿನ ಆ ಮುಖ ನನಗೆ ಪರಿಚಯವಾಗಿತ್ತು.
ಒಟ್ಟಿನಲ್ಲಿ ಮನೆ ಕಡೆ ಹೆಜ್ಜೆ ಹಾಕುತ್ತಿರಬೇಕಾದ್ರೆ ಒಂದಿಷ್ಟು ಯೋಚನಾ ಲಹರಿಗಳು ಹರಿದಾಡಿದ್ವು.
ಯಾರು ತಲೆ-ತಲಾಂತರಗಳಿಂದ ಮೂಲ ಸಂಸ್ಕೃತಿಗಳನ್ನ ಮರೆಯದೆ ಬದುಕುತ್ತಿದ್ದಾರೋ ಅವರಿಗೆ ಏನೂ ಸಮಸ್ಯೆಯಾಗ್ತಿಲ್ಲ. ಬದಲಾವಣೆಗೆ ಒಗ್ಗಿಕೊಳ್ಳುವವರಿಗೆ ಸಮಸ್ಯೆಯಾಗ್ತಿಲ್ಲ. ಕೃಷಿ ಎಂಬ ತಪಸ್ಸಿನಲ್ಲಿ ದಿನಗಳೆಯುವ ಋಷಿ ಖುಷಿ ಮರೆತಿಲ್ಲ. ಹಳೆ ಆಟಗಳು ಕೊಡುವ ಉತ್ಸಾಹ ಹೊಸ ಆಟಗಳು ಕೊಡುತ್ತಿಲ್ಲ. ಕುಡಿತದ ನಶೆಯೊಳಗಿದ್ದವನಿಗೆ ನಲವತ್ತು ದಿನದಲ್ಲಿ ತನ್ನ ಮನೆಯಲ್ಲಿ ನಾಲ್ಕು ಚಯರ್ ಇಲ್ಲದುದರ ಅರಿವಾಗಿದೆ. ಎಲ್ಲಕ್ಕಿಂತಲೂ ಆಧುನಿಕ ಸೀರಿಯಲ್ ಕೊಡುವ ಮನೋರಂಜನೆಗಿಂತಲೂ ಬಾಲ್ಯದ ಸೀರಿಯಲ್ ಗಳು ಮನರಂಜಿಸಿದ್ದವು ಅನ್ನೋ ಸತ್ಯದ ಅರಿವಾಗಿದೆ. ಕೊನೆಯದಾಗಿ ಒಂದು ಸಾಹಿತ್ಯವೂ ನನಗೇ ಗೊತ್ತಿಲ್ಲದೆ ಆ ಕಾಡುಹಾದಿಯಲ್ಲಿ ಆಚೆ ಬಂತು….
ಒಗ್ಗಿಕೊಳ್ಳುವವನಿಗೆ ಬದುಕಿದೆ ವಿಸ್ತರ….
ಒಗ್ಗಿಕೊಳ್ಳದವನ ಬದುಕು ಆಗಲಿದೆ ದುಸ್ತರ…
ಮೈ ಬಗ್ಗಿಸಿ ದುಡಿಯಲು ಕಲಿ,
ಕಲಿಯುಗದ ಓ ಕೂಸೆ…
ನೆಪ ಕೇಳಲು ತಯಾರಿಲ್ಲ…. ನೀನಿರುವುದು ಕಾಯುತ್ತಿರುವ ಜಗದ ಮೂಸೆ…