ಸತ್ತು ಮಲಗಿದವನ ಎತ್ತಿಕೊಂಡು ‘ ಹಾಡೂ…, ಡ್ಯಾನ್ಸ್ ಮಾಡೂ…..’ !
ಮಿರುಗುವ ಕರಿ ಕಪ್ಪು ಬಣ್ಣದ ಸೂಟು ಬೂಟ್ ತೊಟ್ಟ ಲವಲವಿಕೆಯಿಂದ ಕೂಡಿದ ಐದಾರು ಜನ ಯುವಕರು. ಅವರ ಕಣ್ಣಲ್ಲಿ ಕಾಂತಿ, ಅದನ್ನು ಮುಚ್ಚುವ ಮಿಂಚುವ ಸನ್ ಗ್ಲಾಸ್ಗಳು. ಕಿಕ್ಕೇರಿಸುವ ಟೆಕ್ನೋ ಬೀಟಿಗೆ ನೆಲದ ಮೇಲೆ ಕಾಲು ಹೆಜ್ಜೆ ಹಾಕೋ ಹುಡುಗರು. ಇದ್ಯಾವುದೋ ಸ್ಟೇಜ್ ಪರ್ಫಾರ್ಮೆನ್ಸ್ ಅಂದುಕೊಂಡಿದ್ದರೆ ನೀವು ಯಾಮಾರಿದಂತೆ !
ಅವರು ಬೇರಾರೂ ಅಲ್ಲ ಅವರು ಕಾಫಿನ್ ಡ್ಯಾನ್ಸರ್ಸ್. ನಮ್ಮಲ್ಲಿ ಭಾರತದಲ್ಲಿ ಕೆಲವು ಕಡೆ ಶವಯಾತ್ರೆಯ ಸಂದರ್ಭದಲ್ಲಿ ಹಾಕ್ತಾರಲ್ಲ ಸ್ಟೆಪ್, ಅಂತಹ ಹುಡುಗರು ಪೆಟ್ಟಿಗೆಯ ನಾಲ್ಕೂ ಮೂಲೆಯನ್ನು ತಮ್ಮ ಹೆಗಲ ಮೇಲೆ ಇಟ್ಟು ಕುಣಿಯೋ ಶೈಲಿ ಇತ್ತೀಚೆಗೆ ಎಲ್ಲೆಡೆ ಬಹಳಷ್ಟು ವೈರಲ್ ಆಗ್ತಿದೆ. ಅದ್ರಲ್ಲೂ ಕೊರೊನಾ ಲಾಕ್ಡೌನ್ ಜಾರಿಯಾದ ಮೇಲಂತೂ ಅವರ ಈ ನೃತ್ಯದ ವಿಡಿಯೋ ತುಣುಕುಗಳನ್ನು ಬೇರೆ ಬೇರೆ ವಿಡಿಯೋಗಳಿಗೆ ಜೋಡಿಸಿ ಟ್ರೋಲ್ ಮಾಡಿದ್ದನ್ನು ನೋಡಿ ಎದ್ದು ಬಿದ್ದು ಮಾಡಿರುತ್ತೀರಿ. ಅದು ನೋಡಲು ತಮಾಷೆಯಾಗಿ ಖುಷಿ ಕೊಟ್ಟರೂ, ಅವರು ಹಾಗೆ ಶವಪೆಟ್ಟಿಗೆಯನ್ನ ಹೊತ್ತು ಕುಣಿಯುವುದರ ಹಿಂದೆ ಒಂದು ರೋಚಕ ಕಥೆ ಅಡಗಿದೆ.
ಅದು ಆಫ್ರಿಕಾದ ಘಾನದಲ್ಲಿ ಇದು ಪ್ರಾಚೀನ ಸಂಸ್ಕೃತಿಯಿಂದ ಎದ್ದು ಬಂದ ಆಚರಣೆ !
ಹೌದು. ಇವರು ಎಂಟ್ರಿ ಕೊಟ್ಟ ಕೂಡಲೇ ಅಲ್ಲಿನ ವಾತಾವರಣವು ಸಡನ್ನಾಗಿ ಬದಲಾಗುತ್ತದೆ. ಸಖತ್ ಸ್ಟೈಲಿಶ್ ಆಗಿ ಬರುವ ಅವರು ಮೃತನ ಅಂತ್ಯ ಸಂಸ್ಕಾರದ ಉದ್ದಕ್ಕೂ ಮನ ಬಿಚ್ಚಿ ಹಾಡುತ್ತಾರೆ. ಹಾಡುವ ಮುನ್ನ ಶವ ಪೆಟ್ಟಿಗೆಯನ್ನ ಹೊತ್ತು ಉತ್ಸಾಹದಿಂದ ಜಬರ್ದಸ್ತಾಗಿಿ ಕುಣಿಯುವುದರೊಂದಿಗೆ ಮೃತನಿಗೆ ಒಂದು ಆತ್ಮೀಯ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡುತ್ತಾರೆ !
ಕಫಿನ್ ಡ್ಯಾನ್ಸಿಂಗ್ ಎಂದೂ ಕರೆಯಲ್ಪಡುವ ಈ ಆಚರಣೆಯ ಹಿಂದೆ ಮತ್ತೊಂದು ಕುತೂಹಲಕಾರಿ ಕಥೆ ಇದೆ. ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದ ಡಚ್ ಘಯಾನಾ ಎಂಬ ಹಳೆಯ ಹೆಸರನ್ನು ಹೊಂದಿದ್ದ, ಈಗಿನ ಸುರಿನಾಮ್ ಎಂಬ ಹೆಸರಿನ ಪುಟಾಣಿ ದೇಶ ಇದೆ. ಆಫ್ರಿಕಾದಲ್ಲಿ ನೆಲೆಸಿರುವ ಈ ಸುರಿನಾಮ್ ಜನಾಂಗದವರಲ್ಲಿ ಹಿಂದಿನಿಂದಲೂ ಈ ರೀತಿಯ ಆಚರಣೆಯ ಇತ್ತು ಅದು ಘಾನಾದಲ್ಲಿ ಇಂದಿಗೂ ಅದು ಮುಂದುವರಿಯುತ್ತಿರುವುದು ವಿಶೇಷ.
ತಮ್ಮ ವಿಡಿಯೋ ಕ್ಲಿಪ್ಪಿಂಗ್ ಅಷ್ಟೊಂದು ವೈರಲ್ ಆಗಿರುವುದನ್ನು ನೋಡಿ ಕಫಿನ್ ಡ್ಯಾನ್ಸರ್ಸ್ನ ನಾಯಕ ಬೆಂಜಮಿನ್ ಎಯ್ಡೂ ಎಂಬಾತ ದಿಗ್ಬ್ರಮೆಗೊಂಡಿದ್ದಾನೆ. ” ಎಲ್ಲರಂತೆ ನಾವು ನಮ್ಮ ಪಾಡಿಗೆ ನಾವು ಅಂತ್ಯ ಸಂಸ್ಕಾರದ ಸಮಯದಲ್ಲಿ ಹಾಡುತ್ತಾ ಕುಣಿಯುತ್ತಾ ಇದ್ದೆವು. ಆದರೆ ಒಂದು ದಿನ ಮಾರ್ಚ್ ತಿಂಗಳ ಒಂದು ಮುಂಜಾನೆ ಎದ್ದು ನೋಡಿದ್ರೆ ನಾವು ವಿಶ್ವಾದ್ಯಂತ ವೈರಲ್ ಆಗಿದ್ದೇವೆ. ಇದು ಹೇಗಾಯ್ತು ಗೊತ್ತಿಲ್ಲ ” ಎಂದು ಭುಜ ಕುಣಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಈಗ ಕೋರೋನಾ ಸಮಯ ಬೇರೆ. ಈ ಸಮಯದಲ್ಲಿ ಜನರು ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಹೆಚ್ಚುಕಮ್ಮಿ ಬಿಡುವಿನಲ್ಲಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು, ” ಲಾಕ್ ಡೌನ್ ನಿಯಮ ಉಲ್ಲಂಘಿಸಿದವರು ಇವರ ಹೆಗಲ ಮೇಲಿನ ಪೆಟ್ಟಿಗೆಯಲ್ಲಿ ಮಲಗಲು ಸಿದ್ಧವಾಗಿರಿ ” ಎಂಬ ಅರ್ಥದ ವಿಡಿಯೋ ಕ್ಲಿಪ್ಪಿಂಗ್ ಗಳನ್ನು ಎಡಿಟಿಂಗ್ ಮಾಡಿ ಶೇರ್ ಮಾಡಲಾಗುತ್ತಿದೆ. ಐದಾರು ಸೆಕೆಂಡಗಳ ಕಾಮಿಡಿ ಕ್ಲಿಪ್ಪಿಂಗ್ಗಳಿಗೆ ಮಿಲಿಯನ್ಗಟ್ಟಲೆ ವ್ಯೂಸ್ ಬರುತ್ತಿವೆ !
ಇದೇ ಥೀಮ್ ಅನ್ನು ಹಿಡಿದುಕೊಂಡು ವಿಶ್ವಾದ್ಯಂತ ಪೊಲೀಸರೂ ತಮ್ಮನ್ನು ತಾವೇ ನೃತ್ಯಗಾರರಾಗಿ ಮಾರುವೇಷ ತೊಟ್ಟು ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಕಾಫಿನ್ ಡ್ಯಾನ್ಸರ್ಸ್ ಹವಾ ಹರಡುತ್ತಿದೆ.
ನಿಶ್ಮಿತಾ ಕೊರೆಕ್ಕಾಯ