ತಣ್ಣೀರುಪಂತ ಪಂಜಿಕುಡೇಲು ಚಿನ್ನಮ್ಮ ನಮಗೆ ಕಲಿಸಿದ Joy of Giving ನ ಪಾಠ

ಬೆಳ್ತಂಗಡಿ / ಉಪ್ಪಿನಂಗಡಿ : ದಾನ ಮಾಡಲು ಶ್ರೀಮಂತರಾಗಿರಬೇಕೆಂದು ಹೇಳಿದ್ದು ಯಾರು? ತನ್ನಲ್ಲೇ ಏನೇನೂ ಇಲ್ಲದೇ, ಬಡಪತ್ತಿನಲ್ಲಿರುವ ಮಹಿಳೆಯೊಬ್ಬರು ತನಗೇ ಸಿಕ್ಕಿರುವ ಜೀವನಾವಶ್ಯಕ ವಸ್ತುವಾದ ಅಕ್ಕಿಯನ್ನು ದಾನ ಮಾಡಿದ್ದಾರೆ.

ಗೂಗಲ್ ಕಂಪನಿಯ ಸಿಇಒ ಸುಂದರ ಪಿಚೈ ಕೊಟ್ಟ 5 ಕೋಟಿ ರೂಪಾಯಿಗಳ ದಾನದ ಮುಂದೆ 50 ಕೆಜಿ ಅಕ್ಕಿಯ ಬೆಲೆ ಏನೇನೂ ಅಲ್ಲ. ಆದರೆ ಮನಸ್ಸಿನಲ್ಲಿ ಯಾವುದೊಂದೂ (ಪ್ರಚಾರ ಕೂಡ) ನಿರೀಕ್ಷೆಯಿಲ್ಲದ ಈ ದಾನದ ಮಹತ್ತಿಗೆ ಬೆಲೆ ಕಟ್ಟಲಾಗದು.

ಬೆಳ್ತಂಗಡಿ ತಾಲೂಕಿನ ಪಂಜಿಕುಡೇಲು ನಿವಾಸಿ, 50 ರ ಪ್ರಾಯದ ಚಿನ್ನಮ್ಮ ಎಂಬವರು ತನಗೆ ಅಂತ್ಯೋದಯ ಯೋಜನೆಯಡಿ ಸಿಕ್ಕಿರುವ ಅಕ್ಕಿಯನ್ನು ಬಡವರಿಗೆ ಹಂಚಿದ್ದಾರೆ. ತನಗೆ, ಇರೋಳು ಒಬ್ಬಳು. ಇಷ್ಟು ಸಾಕು ಎಂದು 20 ಕೆಜಿ ಅಕ್ಕಿಯನ್ನು ತನ್ನ ಊಟಕ್ಕೆ ಇಟ್ಟುಕೊಂಡು ಉಳಿದ 50 ಕೆಜಿ ಅಕ್ಕಿಯನ್ನು ಅಗತ್ಯ ಇರುವವರಿಗೆ ಕೊಡಲು ಹೇಳಿದ್ದಾರೆ.

ತಣ್ಣೀರು ಪಂತ ಗ್ರಾಮ ಪಂಚಾಯತ್ ಕಡೆಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ, ಸದಸ್ಯರಾದ ಅಬ್ದುಲ್ ರೆಹಮಾನ್, ನವೀನ್, ಪಿಡಿಒ ಪೂರ್ಣಿಮಾ ಅವರ ತಂಡ ಚಿನ್ನಮ್ಮ ಅವರ ಕಷ್ಟ ಸುಖ ವಿಚಾರಿಸಲು ಹೋದಾಗ ತನಗೆ ಇರೋದು ಸಾಕು, ಜಾಸ್ತಿ ತಗೊಂಡು ನಾನೇನು ಮಾಡಲಿ ಎಂದು ತನಗೆ ಕೊಡಲು ಬಂದ ಕಿಟ್ ಅನ್ನು ವಾಪಸ್ ಕೊಟ್ಟಿದ್ದಾರೆ.

ದಿವಂಗತ ಶಿವಪ್ಪ ಪೂಜಾರಿಯವರು ತೀರಿಹೋಗಿ ಹಲವು ವರ್ಷಗಳೇ ಆದವು. ಅವರು ಇದ್ದ ಒಬ್ಬ ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ, ಈಗ ತಾನಿರುವ 50 ಸೆಂಟ್ಸ್ ಜಾಗದ ಪುಟಾಣಿ ಮನೆಯಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದಾರೆ. ದುಡಿದು ಕಷ್ಟದಲ್ಲಿ ಬದುಕು ನಡೆಸುತ್ತಾ ಇರುವ ಈಕೆಯ ನಡೆ ಶ್ಲಾಘನೆಯ ಜತೆಗೆ, ಅವಶ್ಯಕತೆಯಿಲ್ಲದೆ ಸನ್ನಿವೇಶದ ದುರುಪಯೋಗಕ್ಕೆ ಕ್ಯೂ ನಿಲ್ಲುವ ದುರಾಸೆಯ ಮಂದಿಗೆ ಒಂದು ಪಾಠವೂ ಹೌದು.

Comments are closed.