ದಕ್ಷಿಣ ಕನ್ನಡದಲ್ಲಿ ಈಗ ಎಷ್ಟು ದುಡ್ಡು ಕೊಟ್ಟರೂ ಸಿಗದ ದುಬಾರಿ ವಸ್ತು ಯಾವುದು ಗೊತ್ತಾ ?
ದಕ್ಷಿಣ ಕನ್ನಡದಲ್ಲಿ ಈಗ ಯಾವ ವಸ್ತು ದುಬಾರಿ, ಯಾವ ವಸ್ತು ದುಡ್ಡು ಕೊಟ್ಟರೂ ಈಗ ಅಂಗಡಿಗಳಲ್ಲಿ ದೊರೆಯುವುದಿಲ್ಲ ಎಂದು ಅಂಗಡಿ ಅಂಗಡಿ ಕೇಳುತ್ತಾ, ಹುಡುಕುತ್ತಾ ಹೊರಟ ನಮಗೆ ಕಂಡು ಬಂದದ್ದು ಒಂದು ಇಂಟರೆಸ್ಟಿಂಗ್ ವಿಚಾರ. ದಕ್ಷಿಣ ಕನ್ನಡದಲ್ಲಿ ಇವತ್ತಿಗೆ, ಈ ಕ್ಷಣಕ್ಕೂ ದುಡ್ಡು ಕೊಟ್ಟರೂ ಸಿಗದೆ ಇರುವ ಅತ್ಯಂತ ಹೆಚ್ಚು ದುಬಾರಿಯ ವಸ್ತು ಅಂದರೆ …… ಇಲ್ಲ, ನಿಮ್ಮ ಊಹೆ ತಪ್ಪು….ನೀವು ಫೀಡ್ಕ್ ಅಂದುಕೊಂಡಿದ್ದರೆ ಯು ಆರ್ ರಾಂಗ್. ಮದ್ಯ ಬಿಡಿ, ಅದು ಭಾರತದಲ್ಲಿಯೆ ಇವತ್ತಿನ ದಿನಕ್ಕೆ ಅತ್ಯಂತ ದುರ್ಲಭ. ಅದು ಬಿಟ್ಟರೆ….?
ಕಪ್ಪುಬೆಲ್ಲ !!
ಇವತ್ತು ದಕ್ಷಿಣ ಕನ್ನಡದ ಯಾವುದೇ ಅಂಗಡಿಗೆ ಹೋಗಿ ಕಪ್ಪುಬೆಲ್ಲ ಕೇಳಿ. ನೋ ಸ್ಟಾಕ್ ಅನ್ನುತ್ತಾರೆ ಎಲ್ಲ ಅಂಗಡಿಯವರು. ಲಾಕ್ ಡೌನ್ ಆದ ದಿನದಿಂದ ಕಪ್ಪುಬೆಲ್ಲದಷ್ಟು ದೊಡ್ಡ ಡಿಮಾಂಡ್ ಇರುವ ವಸ್ತು ಬೇರೊಂದಿಲ್ಲ. ಕಪ್ಪು ಬೆಲ್ಲಕ್ಕೆ ಈಗ ಚಿನ್ನದ ಬೆಲೆ ! ಆದರೆ ಸಿಗಬೇಕಲ್ಲ ?!
ಅಷ್ಟಕ್ಕೂ ಕಪ್ಪು ಬೆಲ್ಲಕ್ಕೆ ಏಕಿಷ್ಟು ಡಿಮಾಂಡು ?ಉತ್ತರಿಸಬಲ್ಲವರು ರಸಾಯನ ಶಾಸ್ತ್ರಜ್ಞರು !!
ಮದ್ಯವಿಲ್ಲದೆ ಇವತ್ತಿಗೆ 19 ದಿನಗಳು. ಸಾರಿ, ಲಾಕ್ ಡೌನ್ ಆಗಿ ಹತ್ತೊಂಬತ್ತು ದಿನಗಳಷ್ಟೇ. ಮದ್ಯ ಮಾರಾಟ, ಅದೂ ರಾಜ್ಯದ ಸರಕಾರಿ ಲೈಸನ್ಸ್ ಉಳ್ಳ ಮಳಿಗೆಗಳಲ್ಲಿ ಇಲ್ಲದೆ 19 ದಿನಗಳ ಆಗಿರಬಹುದು, ಆದರೆ ಮದ್ಯವಿಲ್ಲದೆ ಅಲ್ಲ ! ಯಾಕೆಂದರೆ ಸರ್ಕಾರಿ ಮಳಿಗೆಗಳಲ್ಲಿ ಮದ್ಯ ಇಲ್ಲದೇ ಹೋದರೂ ನಮ್ಮ ಜನರು ತಮ್ಮ ‘ಜೀವನೋಪಾಯಕ್ಕಾಗಿ’ ಆಲ್ಟರ್ನೇಟ್ contingency ( ತುರ್ತು ) ಪ್ಲಾನ್ ಇಟ್ಟುಕೊಂಡವರು !
ಮನೆಯ ಸುತ್ತಮುತ್ತ ಗೇರು ಹಣ್ಣು ಸಿಗುತ್ತದೆ. ಹಿತ್ತಲಲ್ಲಿ ಅಥವಾ ತೋಟದಲ್ಲಿ ಒಂದೆರಡು ಪರೆಂಗಿ ಪೆಲಕಾಯಿ (ಅನಾನಾಸ್) ಸಿಗಬಹುದು. ಅಂಗಡಿಯಿಂದ ಕಪ್ಪುಬೆಲ್ಲ ತಂದು ಕನಿಷ್ಟ 7 ದಿನ ಹುಳಿ ಬರಿಸಿದರೆ ಮುಗಿಯಿತು. ಕುದಿಸಿ, ತಣಿಸಿದರೆ ಮುಂದಿನ 7 ದಿನಕ್ಕೆ ಏನೂ ಸಮಸ್ಯೆಯಿಲ್ಲ. ಈ ರೀತಿ ಮನೆಯಲ್ಲಿ ಗೇರು ಕಷಾಯ ಸರಿಯಾ-ತಪ್ಪಾ-ಕಾನೂನುಬಾಹಿರವಾ- ಊಹೂಂ ಅದೆಲ್ಲ ಯಾರೂ ಯೋಚಿಸ್ತಾರೆ ? ” ನನ್ನ ಗೇರು, ನನ್ನ ಬಾರು ” ಅವರ ಫೇಮಸ್ ಫಿಲಾಸಫಿ !
ಮನೆಯಲ್ಲಿ ಹೆಂಡತಿ ಮಕ್ಕಳ ಮೇಲೆ ವಿನಾಕಾರಣ ಹಾರಾಡುವ ಗಂಡಸು ಕೂಡಾ, ಮುಂದಿನ 7 ಏಳು ದಿನಗಳು ಮನೆಯಲ್ಲಿ ಕಳ್ಳ ಬೆಕ್ಕಿನಂತೆ ಓಡಾಡುತ್ತಾನೆ. ಸುಮ್ಮ ಸುಮ್ಮನೆ ನಗುತ್ತಿರುತ್ತಾನೆ. ಗಂಟೆಗೊಮ್ಮೆ ತನಗೆ ಪಿತ್ರಾರ್ಜಿತವಾಗಿ ಬಂದ ಮರದ ಪೆಟ್ಟಿಗೆಯ ಬಾಗಿಲು ತೆರೆದು ಅದರಲ್ಲಿ ಅಜ್ಜಿಯ ಹಳೆಯ ಸೀರೆಗಳ ಮಡಿಕೆಗಳಲ್ಲಿ ಭದ್ರವಾಗಿ ಸುತ್ತಿಟ್ಟ ಬಾಟಲನ್ನು ಕಂಡು, ಅದರ ಮುಚ್ಚಳ ಮೂಸಿ, ಅದಕ್ಕೊಂದು ಸ್ಮೈಲ್ ಕೊಟ್ಟು ಬಂದರೇನೆ ಆತನಿಗೆ ಸಮಾಧಾನ.
ಮದ್ಯದ ಮಲ್ಲರು ಇನ್ನೆರಡು ದಿನ ಕಾಯಬೇಕು. ನಾಳೆಗೆ ಮೊದಲ ಹಂತದ ಲಾಕ್ ಡೌನ್ ನ ಕೊನೆಯ ದಿನ. ಒಂಚೂರು ಲಾಕ್ ಡೌನ್ ಸಡಿಲಿಕೆ ಆಗೋದು ಖಚಿತ. ಮದ್ಯವನ್ನೂ ನಿಗದಿ ಮಾಡಿದ MSIL ಅಂಗಡಿಗಳಲ್ಲಿ ಮದ್ಯ ಪಾರ್ಸೆಲ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿಯತನಕ…….!!!
ಸುದರ್ಶನ್ ಬಿ. ಪ್ರವೀಣ್, ಬೆಳಾಲು