ಸುಬ್ರಹ್ಮಣ್ಯ, ನೆಲ್ಯಾಡಿ, ನಾರಾವಿ, ವಿಟ್ಲ | ಆಲಿಕಲ್ಲು ಮಳೆ
ಬಿಸಿಲಿನ ಧಗೆಯಿಂದ ಕಂಗೆಟ್ಟಿರುವ ಜನತೆಗೆ ಮಳೆರಾಯನ ಆಗಮನ ಸ್ವಲ್ಪ ಹಿತವೆನಿಸಿದೆ.
ಕಳೆದ 10 ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಎ.10 ರಂದು ಸುಬ್ರಹ್ಮಣ್ಯ,ನೆಲ್ಯಾಡಿ,ನಾರಾವಿ ಪರಿಸರದಲ್ಲಿ ಗುಡುಗು, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಮಕ್ಕಳೆಲ್ಲ ಮನೆಯಲ್ಲಿದ್ದಾರೆ. ಬರ ಬರ ಬೀಳುವ ಆಲಿಕಲ್ಲು ಹೆಕ್ಕಿ ಪಾತ್ರೆಗೆ ಹಾಕಿಕೊಳ್ಳುವುದೇ ಅವರಿಗೆ ಕೆಲಸ.
ಕಡಬ, ಬೆಳ್ಳಾರೆ, ಸವಣೂರು, ಪುತ್ತೂರು ಭಾಗದಲ್ಲೂ ಗಾಳಿ ಸಹಿತ ಅಲ್ಪ ಮಳೆಯಾಗಿದೆ. ಉಳಿದಂತೆ ಗುಡುಗು, ಗಾಳಿ ಸಹಿತ ಹನಿಮಳೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ಕೆಲವೆಡೆ ಮಳೆ ಹನಿದಿದೆ, ಶಿರ್ಲಾಲ್ ವಿನಲ್ಲಿ ಆಲಿಕಲ್ಲು ಮಳೆ ಬಂದಿದೆ. ನಾರಾವಿಯಲ್ಲಿ ಗಾಳಿ ಸಿಡಿಲು ಜೋರು ಮಳೆ,ನಾರಾವಿಯ ಕೆಲವು ಕಡೆ ಗಾಳಿಗೆ ಅಡಿಕೆ ಮರ ಬಿದ್ದಿದೆ.
ಗುರುವಾಯನಕೆರೆಯಲ್ಲಿ ವಾತಾವರಣ ಒಮ್ಮೆಲೇ ತಂಪಾಯ್ತು. ಒಂದೆರಡು ಗುಡುಗು ಸಿಡಿಲು ಬಂತು. ಏನು ಮಳೆ ಬರತ್ತಾ ಅಂತ ನೋಡಲು ಅಂಗಳಕ್ಕೆ ಆಕಾಶ ನೋಡುವಾಗ ಮೂಗಿನ ತುದಿಗೆ ಒಂದೇ ಒಂದು ಹನಿ ಬಿದ್ದಿದೆ !
ವಿಟ್ಲದ ಕೆಲವೆಡೆ ತಡವಾಗಿ ಮಳೆ ಶುರುವಾಗಿ, ಸಾಧಾರಣ ಮಳೆ ಬಂದಿದೆ.
ಕಡಬ ತಾಲೂಕಿನ ಸುಬ್ರಹ್ಮಣ್ಯ, ಕೊಂಬಾರು, ಕೊಣಾಜೆ, ಮರ್ದಾಳ, ಐತೂರು, ಕಡಬ, ಕೋಡಿoಬಾಳ, ಕುಟ್ರುಪ್ಪಾಡಿ, ಬಲ್ಯ. ಕುಂತೂರು, ಆಲಂಕಾರು ಪ್ರದೇಶದಲ್ಲಿ ಮಳೆ ಸುರಿದಿದೆ. ಇದ್ದಕ್ಕಿದ್ದಂತೆ ಮಳೆ ಸುರಿದ ಪರಿಣಾಮ, ಕೃಷಿಕರಿಗೆ ಹಾಗೂ ಸೆಕೆಯಿಂದ ಕಷ್ಟ ಪಡುವವರಿಗೆ ಸಂತಸ ಮೂಡಿಸಿತು ಹಾಗೂ ನೀರಿಲ್ಲದೆ ಪರದಾಟ ನಡೆಸುತ್ತಿದ್ದ ಕೃಷಿಕರಿಗೆ, ಜನರಿಗೆ ಕೊಂಚ ನಿರಾಳವಾಯಿತು.
ಕಳೆದ ಕೆಲವು ದಿನಗಳಿಂದ ವಾತಾವರಣದ ಉಷ್ಣತೆ 40 ಡಿಗ್ರಿ ಹಲವು ಕಡೆ ದಾಖಲಾಗಿತ್ತು. ಬುಧವಾರ 42 ಡಿಗ್ರಿ ತಲುಪಿತ್ತು. ಒಟ್ಟಾರೆಯಾಗಿ ಭೂಮಿ ಒಂದಷ್ಟು ತಂಪಾಗಿದೆ.