ಹಿರಿಯ ಯಕ್ಷಗಾನ ಕಲಾವಿದ ಕುರ್ನಾಡು ಶಿವಣ್ಣ ಆಚಾರ್ಯ ನಿಧನ

ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀ ಪಾತ್ರಧಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುರ್ನಾಡು ಶಿವಣ್ಣ ಆಚಾರ್ಯ ಅವರು ಎ.9 ರಂದು ನಿಧನರಾದರು.
ದಮಯಂತಿ, ಕಯಾದು, ಗುಣಸುಂದರಿ, ದೇಯಿ ಬೈದೆತಿ ,ಕಟೀಲು ಕ್ಷೇತ್ರ ಮಹಾತ್ಮೆಯ ಜಾಬಾಲಿ, ಪಂಚವಟಿಯ ರಾಮ, ದೇವಿ ಮಹಾತ್ಮೆಯ ಮಾಲಿನಿ, ದಿತಿ, ದೇವಿ, ಇಂದ್ರಜಿತು ಕಾಳಗದ ಲಕ್ಷ್ಮಣ ಇತ್ಯಾದಿ ವೇಷಗಳನ್ನು ನಿರ್ವಹಿಸಿರುವ ಶಿವಣ್ಣ ಆಚಾರ್ಯ ಹಲವಾರು ವರ್ಷಗಳ ಕಾಲ ಪೋಷಕ ಪಾತ್ರಗಳನ್ನು ನಿರ್ವಹಿಸಿ ಅನುಭವ ಸಾಧಿಸಿದ ಬಳಿಕ ಪ್ರಧಾನ ಪಾತ್ರಗಳತ್ತ ಹೆಜ್ಜೆ ಹಾಕಿ ಯಕ್ಷಗಾನ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದರು.

ಬಂಟ್ವಾಳ ತಾಲೂಕಿನ ಪುಣಚ ಇವರ ಹುಟ್ಟೂರು. ಅಚ್ಚುತ ಆಚಾರ್ಯ ಮತ್ತು ಸರಸ್ವತಿ ದಂಪತಿಗಳ ಪುತ್ರ. 15.6.1942ರಂದು ಜನನ. ಶೈಕ್ಷಣಿಕ ವಿದ್ಯಾಭ್ಯಾಸ 4ನೇ ತರಗತಿಯವರೆಗೆ. ಪುಣಚ ನಾಗಪ್ಪ ಭಂಡಾರಿ ಅವರಿಂದ ಯಕ್ಷಗಾನ ನಾಟ್ಯ ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಕಲಾ ಪ್ರೌಡಿಮೆ ಮೆರೆದರು.
ಪುಳಿಂಚ ರಾಮಯ್ಯ ಶೆಟ್ಟಿ, ಕೋಳ್ಯೂರು ನಾರಾಯಣ ಭಟ್‌ ಅವರುಗಳಿಂದಲೂ ನಾಟ್ಯಗಾರಿಕೆಯನ್ನು ಅಭ್ಯಾಸ ಮಾಡಿದ ಇವರು ಹಿರಿಯ ಕಲಾವಿದರ ಒಡನಾಟ ಗಳಿಸಿದರು. ಭಾಗವತರಾಗಿದ್ದ ಚಿಕ್ಕಪ್ಪ ಶ್ರೀನಿವಾಸ ಆಚಾರ್ಯ ಅವರಿಂದಲೂ ಪ್ರೇರಣೆ ಪಡೆದಿದ್ದ ಇವರು,ಸ್ತ್ರೀಪಾತ್ರಕ್ಕೆ ಬೇಕಾದ ರೂಪವಿದ್ದುದರಿಂದ ಈ ಪಾತ್ರಗಳಿಗೆ ಇವರನ್ನು ಆಯ್ಕೆ ಮಾಡಿದ್ದರು. ರೂಪಕ್ಕೆ ತಕ್ಕ ಅಭಿನಯ, ನಾಟ್ಯ, ಭಾವಪೂರ್ಣ ಪಾತ್ರ ನಿರ್ವಹಣೆ ಇವರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟಿತು. ಪುಂಡು ವೇಷ, ಕಿರೀಟ ವೇಷಗಳನ್ನೂ ಮಾಡಿದ್ದಾರೆ. ಧರ್ಮಸ್ಥಳ, ಕೂಡ್ಲು, ಮೂಲ್ಕಿ, ವೇಣೂರು, ಸುಂಕದಕಟ್ಟೆ, ಮಲ್ಲ, ನಂದಾವರ ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದಾರೆ.
ಸುಭದ್ರೆ, ಚಂದ್ರಮತಿ ಮೊದಲಾದ ಪಾತ್ರಗಳನ್ನು ಭಾವನಾತ್ಮಕವಾಗಿ ನಿರ್ವಹಿಸುತ್ತಿದ್ದರು. ರಾವಣ ವಧೆ ಪ್ರಸಂಗದಲ್ಲಿ ಶೇಣಿಯವರ ರಾವಣ, ಶಿವಣ್ಣ ಆಚಾರ್ಯರ ಮಂಡೋದರಿ ಕೆಲವು ಬಾರಿ ನಡೆದಿತ್ತು. ಪೆರುವಡಿ ನಾರಾಯಣ ಭಟ್ಟರ ಬಾಹುಕ, ಇವರ ದಮಯಂತಿ, ಪೆರುವಡಿಯವರ ಪಾಪಣ್ಣ, ಆಚಾರ್ಯರ ಗುಣಸುಂದರಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.
ಇವರ ನಿಧನಕ್ಕೆ ಅಪಾರ ಕಲಾ ಪ್ರೇಮಿಗಳು ,ಕಲಾವಿದರು, ಜನಪ್ರತಿನಿಧಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.