ಉಪ್ಪಿನ ಸತ್ಯಾಗ್ರಹವು ಕೊನೆಗೊಂಡು ಇಂದಿಗೆ ತೊಂಭತ್ತು ವರ್ಷಗಳು |ಗಾಂಧಿಗಿದೋ ನಮನ
ಮಹಾತ್ಮ ಗಾಂಧಿ ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಸ್ವಾತಂತ್ರ್ಯ ಹೋರಾಟದ ನಾನಾ ಚಿತ್ರಣಗಳು. ನಮ್ಮ ರಾಷ್ಟ್ರವು ನಾನಾ ಸವಾಲುಗಳನ್ನು ಎದುರಿಸಿ ಸ್ವತಂತ್ರವಾಗಲು ಕಾರಣರಾದವರಲ್ಲಿ ಗಾಂಧೀಜಿಯವರು ಪ್ರಮುಖರು. ಬಾಪುರವರ ತತ್ವ, ಆದರ್ಶಗಳು ಇಂದಿಗೂ ಪ್ರೇರಣಾ ದೀಪವಾಗಿದೆ. ಈ ಮಹಾನ್ ಅಹಿಂಸಾವಾದಿ ಭಾರತವನ್ನು ಬ್ರಿಟಿಷರ ಸೆರೆಯಿಂದ ಬಿಡಿಸಲು ಹಲವಾರು ಹೋರಾಟ, ಸತ್ಯಾಗ್ರಹಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಉಪ್ಪಿನ ಸತ್ಯಾಗ್ರಹವೂ ಒಂದು.
ಉಪ್ಪಿನ ಸತ್ಯಾಗ್ರಹದ ಹಿನ್ನಲೆ ಭಾರತವು ಬ್ರಿಟಿಷರ ಅಧೀನದಲ್ಲಿದ್ದ ಅವಧಿ ಅದು. ಬ್ರಿಟಿಷ್ ಸರ್ಕಾರವು 1930ರ ಮಾರ್ಚ್ ತಿಂಗಳಲ್ಲಿ ಉಪ್ಪಿನ ಮೇಲೆ ತೆರಿಗೆಯನ್ನು ವಿಧಿಸಿ ಸರ್ಕಾರದ ಖಜಾನೆಯನ್ನು ತುಂಬಿಸಿಕೊಳ್ಳಲು ಆರಂಭಿಸಿತು. ಉಪ್ಪಿನ ಕರವನ್ನು ವಿರೋಧಿಸಿದ ಗಾಂಧೀಜಿಯವರು, ಅಹಿಂಸಾತ್ಮಕ ನೆಲೆಯಲ್ಲಿ ಹೊಸ ಸತ್ಯಾಗ್ರಹವನ್ನು ಆರಂಭಿಸಿದರು. ಅದನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಯಾತ್ರೆ ಎಂದು ಕರೆಯಲಾಯಿತು.
ಬ್ರಿಟಿಷರು ವಿಧಿಸಿದ ಕರದಡಿಯಲ್ಲಿ ಬ್ರಿಟಿಷ್ ಸರ್ಕಾರದ ವಿನಃ ಬೇರೆ ಯಾರೂ ಉಪ್ಪನ್ನು ತಯಾರಿಸುವಂತೆಯೂ ಇರಲಿಲ್ಲ, ಮಾರಾಟ ಮಾಡುವಂತೆಯೂ ಇರಲಿಲ್ಲ. ಜನರಿಗೆ ಸಮುದ್ರದ ತಟದಲ್ಲಿ ಉಪ್ಪು ಪುಕ್ಕಟೆಯಾಗಿ ದೊರಕುತ್ತಿದ್ದರೂ, ಜನರು ಬ್ರಿಟಿಷ್ ಸರ್ಕಾರದಿಂದಲೇ ಉಪ್ಪನ್ನು ಖರೀದಿಸಬೇಕಾಗಿತ್ತು. ಇದರೊಂದಿಗೆ ಉಪ್ಪಿನ ಬೆಲೆಯೂ ದುಬಾರಿಯಾಗಿತ್ತು.
ಹೀಗಾಗಿ ಎಲ್ಲಾ ಧರ್ಮದ, ವರ್ಗದ, ಪ್ರಾಂತ್ಯದ ಜನರು ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ ಪ್ರತಿಭಟನೆಗೆ ಇಳಿಯಲು ಸಿದ್ಧರಾದರು. ಜೊತೆಗೆ ಗಾಂಧೀಜಿಯವರು ಎಲ್ಲಾ ಜನರನ್ನು ಸಂಘಟಿಸುವಲ್ಲಿ, ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾದರು. ಉಪ್ಪಿನ ತೆರಿಗೆಯನ್ನು ಉಲ್ಲಂಘಿಸುವುದರ ಮುಖಾಂತರ ಕಾನೂನು ಭಂಗ ಚಳುವಳಿಯೂ ತಲೆ ಎತ್ತಿತು.
1930ರ ಮಾರ್ಚ್ 2ರಂದು ಗಾಂಧೀಜಿಯವರು ಉಪ್ಪಿನ ಕಾನೂನನ್ನು ಬದಲಾಯಿಸುವಂತೆ ಅಂದಿನ ವೈಸ್‍ರಾಯ್ ಆಗಿದ್ದ ಲಾರ್ಡ್ ಇರ್ವಿನ್‍ಗೆ ಪತ್ರ ಬರೆದರು.
ಆದರೆ ಗಾಂಧೀಜಿಯವರ ಪತ್ರಕ್ಕೆ ಯಾವ ಸ್ಪಂದನೆಯೂ ಸಿಗಲಿಲ್ಲ. ಹೀಗಾಗಿ ಗಾಂಧೀಜಿಯವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಂತೆ 1930ರ ಮಾರ್ಚ್ 12ರಂದು ಗಾಂಧೀಜಿಯವರು ತಮ್ಮ 78 ಮಂದಿ ಅನುಯಾಯಿಗಳೊಂದಿಗೆ ಸಬರಮತಿ ಆಶ್ರಮದಿಂದ ಸುಮಾರು 400 ಕಿಲೋ ಮೀಟರ್‍ಗಳಷ್ಟು ದೂರದ ದಂಡಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಾ ದಂಡಿ ಯಾತ್ರೆಯನ್ನು ಆರಂಭಿಸಿದರು. ಈ ಉಪ್ಪಿನ ಸತ್ಯಾಗ್ರಹದ 23 ದಿನಗಳಲ್ಲಿ ಸಾವಿರಾರು ಸತ್ಯಾಗ್ರಹಿಗಳು ಚಳುವಳಿಯಲ್ಲಿ ಸೇರಿಕೊಂಡರು.
ನಾಲ್ಕು ಜಿಲ್ಲೆ ಮತ್ತು 48 ಹಳ್ಳಿಗಳ ಮೂಲಕ ಹಾದು ಹೋದ ಗಾಂಧೀಜಿ ಹಾಗೂ ಸತ್ಯಾಗ್ರಹಿಗಳು ಏಪ್ರಿಲ್ 6ರಂದು ದಂಡಿ ಗ್ರಾಮವನ್ನು ತಲುಪಿದರು. ನಂತರ ಗಾಂಧೀಜಿಯವರು ದಂಡಿಯ ಸಮುದ್ರ ತಟದಲ್ಲಿ ಉಪ್ಪನ್ನು ತಯಾರಿಸಿದರು. ಜೊತೆಗೆ ನೆರೆದಿದ್ದ ಜನತೆಗೆ ‘ತಮಗೆ ಎಲ್ಲಿ ಸಾಧ್ಯವೋ ಅಲ್ಲಿ ಉಪ್ಪನ್ನು ತಯಾರಿಸಿ’ ಎಂದು ಉಪದೇಶಿಸಿದರು. ಚಳುವಳಿಯ ಪರಿಣಾಮ ಉಪ್ಪಿನ ಸತ್ಯಾಗ್ರಹದ ಪರಿಣಾಮವು ದೇಶದೆಲ್ಲೆಡೆ ಕಾಣಿಸಿಕೊಂಡಿತು. ಗಾಂಧೀಜಿಯವರಿಂದ ಪ್ರೇರೇಪಿತರಾಗಿ ಸಹಸ್ರಾರು ಜನರು ಉಪ್ಪನ್ನು ತಯಾರಿಸಿದರು. ಅದೇ ರೀತಿ ಬ್ರಿಟಿಷ್ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿದರು. ಇದರಿಂದ ಕುಪಿತಗೊಂಡ ಬ್ರಿಟಿಷ್ ಸರ್ಕಾರ ಕಾನೂನು ಬಾಹಿರವಾಗಿ ಉಪ್ಪನು ತಯಾರಿಸಿದ ಮತ್ತು ಕೊಂಡುಕೊಂಡ ಜನರನ್ನು ಬಂಧಿಸಿತು. ಚಳುವಳಿಯ ಪರಿಣಾಮ ದೇಶದೆಲ್ಲೆದೆ ವ್ಯಾಪಕವಾಗಿ ಗೋಚರಿಸಿದ ಕಾರಣ ಬ್ರಿಟಿಷ್ ಸರ್ಕಾರವು ಗಾಂಧೀಜಿಯವರೊಂದಿಗೆ ಮಾತುಕತೆ ನಡೆಸಿತು. ಹೀಗಾಗಿ ಗಾಂಧಿ-ಇರ್ವಿನ್ ಒಪ್ಪಂದ ಏರ್ಪಟ್ಟಿತು.
ಬಂಧಿಸಲ್ಪಟ್ಟ ಭಾರತೀಯರನ್ನು ಬ್ರಿಟಿಷ್ ಸರ್ಕಾರ ಬಿಡುಗಡೆಗೊಳಿಸಿತು. ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಉಪ್ಪಿನ ಸತ್ಯಾಗ್ರಹವು ಮಹತ್ವದ ಘಟನೆಯಾಗಿ ಉಳಿದಿದೆ. ಇಂದಿಗೆ ಎಂದರೆ, 2020ನೇ ಏಪ್ರಿಲ್ 6ಕ್ಕೆ ಉಪ್ಪಿನ ಸತ್ಯಾಗ್ರಹವು ಕೊನೆಗೊಂಡು 90 ವರ್ಷಗಳು ಸಂದಿವೆ.
ಅಂದು ಇದೇ ದಿನ ಗಾಂಧೀಜಿಯವರು ಉಪ್ಪನ್ನು ತಯಾರಿಸಿದ್ದರು. ಆದ್ದರಿಂದ ಉಪ್ಪಿನ ಸತ್ಯಾಗ್ರಹದ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಮನದಲ್ಲೇ ವಂದಿಸೋಣ. ಗಾಂಧೀಜಿಯವರ ಹೋರಾಟದ ಹಾದಿ ಎಲ್ಲರಿಗೂ ಮಾದರಿಯಾಗಲಿ.
✒ ಸೌಜನ್ಯ.ಬಿ.ಎಂ.ಕೆಯ್ಯೂರು ದ್ವಿತೀಯ ಪತ್ರಿಕೋದ್ಯಮ ವಿವೇಕಾನಂದ ಪದವಿ ಕಾಲೇಜು ಪುತ್ತೂರು.