ಇಂದು ಸಂಜೆ 3 ಗಂಟೆ ತನಕ ಅವಶ್ಯಕ ಸಾಮಗ್ರಿ ಖರೀದಿಗೆ ಅವಕಾಶ| ಮತ್ತೆ ಲಾಕ್ಡೌನ್ ಮುಂದುವರಿಕೆ
ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡದಂತೆ ದೇಶವ್ಯಾಪಿಯಲ್ಲಿ ಲಾಕ್ಡೌನ್ ಮಾಡಲಾಗಿದೆ. ಈ ನಡುವೆ ಔಷಧಿ, ಹಾಲು, ಪತ್ರಿಕೆಗೆ ಬೆಳಗ್ಗಿನ ಜಾವ ಬೆಳಿಗ್ಗೆ ಗಂಟೆ 6 ರಿಂದ 8ಗಂಟೆಯ ತನಕ ಸ್ವಲ್ಪ ರಿಲಾಕ್ಸ್ ನೀಡಲಾಗಿತ್ತು. ಇದೀಗ ಮಾ.31ರಂದು ಬೆಳಿಗ್ಗೆ ಗಂಟೆ 6 ರಿಂದ 3 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದ್ದು, ಈ ಅವಧಿಯಲಿ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಇತರ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾ.30ರಂದು ಮಧ್ಯಾಹ್ನ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಂತರ ಕಾಯ್ದು ಕೊಂಡು ನಡೆಸಿದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ವರ್ತಕರ ಪ್ರತಿನಿಧಿಗಳು, ಹೋಲ್ಸೇಲ್ ದಿನಸಿ ಮಾರಾಟಗಾರರು ಈ ಸಂದರ್ಭಲ್ಲಿ ಉಪಸ್ಥಿರಿದ್ದರು.
ಕಳೆದ ಮೂರು ದಿನಗಳಿಂದ ಲಾಕ್ಡೌನ್ಗೆ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಜನರಿಗೆ ಅಗತ್ಯ ವಸ್ತುಗಳ ಖರೀದಿಗಾಗಿ ಮಧ್ಯಾಹ್ನ 3 ಗಂಟೆಯ ತನಕ ಅವಕಾಶ ನೀಡಲಾಗಿದೆ. ಇದು ಒಂದು ದಿನ ಮಾತ್ರ ಅವಕಾಶ ನೀಡಿದ್ದು, ಮುಂದೆ ಮತ್ತೆ ಲಾಕ್ಡೌನ್ ಮುಂದುವರಿಯಲಿದೆ ಎಂದರು.
ಅಂಗಡಿಯವರು ಗ್ರಾಹಕರಿಗೆ ಅಗತ್ಯ ವಸ್ತುಗಳ ಪೂರೈಕೆ ನೀಡಬೇಕು. ಅದಕ್ಕಾಗಿ ಅವರು ಮಾ.30ರಂದೇ ಸಂಜೆಯ ಒಳಗಡೆ ಹೋಲ್ಸೇಲ್ ದಿನಸಿ ವಸ್ತುಗಳನ್ನು ಶೇಖರಣೆ ಮಾಡಬೇಕು. ಅವರ ಸಾಮಾಗ್ರಿಗಳ ಸಾಗಾಟಕ್ಕೆ ಪ್ರತ್ಯೇಕ ಪಾಸ್ ನೀಡಲಾಗಿದೆ. ಈ ಪಾಸ್ ಒಂದೇ ದಿನಕ್ಕೆ ಸೀಮಿತ. ನಾಳೆ ಮತ್ತೆ ಇದೇ ಪಾಸ್ ಬಳಸುವಂತಿಲ್ಲ. ಎಲ್ಲಾ ಪಾಸ್ಗಳಿಗೂ ಸಮಯ ನಿಗದಿ, ಹೋಗುವ ಜಾಗ ನಮೂದಿಸಲಾಗುತ್ತದೆ ಎಂದ ಅವರು ಏ..2ಕ್ಕೆ ಪಡಿತರ ಅಂಗಡಿಗಳಿಂದ ಪಡಿತರ ಸಾಮಾಗ್ರಿ ವಿತರಣೆ ನಡೆಯಲಿದೆ. ಈ ಸಂದರ್ಭವೂ ಎಲ್ಲರೂ ಅಂತರ ಕಾಯ್ದು ಕೊಂಡು ಸಹಕರಿಸುವಂತೆ ವಿನಂತಿಸಿದರು.
ಮನೆ ಮನೆಗಳಿಗೆ ಅಂಗಡಿಯವರು ದಿನಸಿ ಸಾಮಾಗ್ರಿಗಳನ್ನು ಸಾಗಾಟ ಮಾಡಲು ವರ್ತಕರು ಮುಂದೆ ಬಂದರೆ ಅವರಿಗೆ ಸಹಾಯಕ ಕಮೀಷನರ್ ಅವರು ಪಾಸ್ ನೀಡುತ್ತಾರೆ. ಗ್ರಾ.ಪಂ. ಪಿಡಿಒಗಳು ಪಾಸ್ನ ಅರ್ಜಿಯನ್ನು ಪರಿಶೀಲಿಸಿ ಸಹಾಯಕ ಕಮೀಷನರ್ಗೆ ಹಸ್ತಾಂತರಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳವಾರ ಜಿನಸಿ ಅಂಗಡಿಗಳು, ತರಕಾರಿ, ಹಾಲು, ಮೆಡಿಕಲ್ಗಳು ಮಾತ್ರ ತೆರೆದಿರುತ್ತವೆ. ಈ ನಡುವೆ ಗ್ಯಾಸ್ ವ್ಯವಸ್ಥೆ ಪೂರ್ಣ ರೀತಿಯಲ್ಲಿ ಸಿಗಲಿದೆ. ಅದು ಬಿಟ್ಟರೆ ಬೇರಾವ ಅಂಗಡಿಗಳಿಗೂ ಅವಕಾಶವಿಲ್ಲ. ಮೀನು, ಮಾಂಸ ಸೇರಿದಂತೆ ಇತರ ಯಾವ ಅಂಗಡಿಗಳಿಗೂ ಅವಕಾಶವಿಲ್ಲ. ಲಿಕ್ಕರ್ ಅಂಗಡಿಗಳೂ ತೆರೆದಿರುವುದಿಲ್ಲ. ಈಗ ಮನುಷ್ಯನಿಗೆ ಬೇಕಾದ ಅಗತ್ಯ ಆಹಾರ ಸಾಮಾಗ್ರಿ ಲಭ್ಯವಾಗುವುದು ಮಾತ್ರ ಸರಕಾರದ ಆದ್ಯತೆ. ಈನಡುವೆ ಲೈಸನ್ಸ್ ಇಲ್ಲದ ಅಂಗಡಿಯವರು ವ್ಯವಹರಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರಲ್ಲದೆ ಪಾಸ್ ಕೊಡುವಾಗಲೂ ಸಮಯ, ಕಿಲೋಮಿಟರ್ ಅಂತರ ನಮೂದಿಸಬೇಕು. ಇಲ್ಲವಾದರೆ ಅಂಗಡಿ ತೆರೆದು ಸುಮ್ಮನೆ ಬೈಕ್ನಲ್ಲಿ ಓಡಾಡುವವರು ಇದ್ದಾರೆ ಎಂದರು.
ಬಿಪಿಎಲ್ ಕಾರ್ಡ್ ಇಲ್ಲದ, ಎಪಿಎಲ್ ಕಾರ್ಡ್ ಇಲ್ಲದ ಜನರು ತಾಲೂಕಿನಲ್ಲಿ ಇದ್ದರೆ ಅಂಥವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಇಂಥವರ ಪಟ್ಟಿಯನ್ನು ಆಯಾ ಗ್ರಾಪಂ ಪಿಡಿಒ ನೇತೃತ್ವದ ಕಾರ್ಯಪಡೆ ಸಿದ್ಧಪಡಿಸಿ ಅದನ್ನು ಶಾಸಕರಿಗೆ ನೀಡಬೇಕು. ಶಾಸಕರ ಮೂಲಕ ಅವರಿಗೆ ಕಿಟ್ ವಿತರಿಸಲಾಗುವುದು. ಈ ಕಿಟ್ನಲ್ಲಿ ಅಕ್ಕಿ, ಸಕ್ಕರೆ, ಬೆಲ್ಲ, ಚಾಹುಡಿ, ಮೆಣಸು, ಸಾಬೂನು, ಪೇಸ್ಟ್, ಎಣ್ಣೆ ಮುಂತಾದ ಅಗತ್ಯ ವಸ್ತುಗಳು ಇರುತ್ತವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕಾರ್ಮಿಕರು, ಒಂದಷ್ಟು ವಲಸೆ ಬಂದವರಿಗೆ ಆಹಾರದ ಅವಶ್ಯಕತೆ ಇದೆ. ಅವರಿಗೆ ಕಿಟ್ ಸೌಲಭ್ಯ ನೀಡುವ ಕುರಿತು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಉತ್ತರಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾನಸಿಕ ಅಸ್ವಸ್ಥರು, ವಲಸೆ ಬಂದವರು, ಕಾರ್ಮಿಕರು, ದಿಕ್ಕುಪಾಲಾದವರು, ಅನಾಥರು, ಬಾಷೆ ಬಾರದವರಿಗೆ ಉಳಿದು ಕೊಳ್ಳಲು ವ್ಯವಸ್ಥೆ ಮತ್ತು ಊಟೋಪಚಾರವನ್ನು ದೇವಸ್ಥಾನದ ಕಡೆಯಿಂದ ಮಾಡಬೇಕು. ಅವರಿಗೆ ಅಗತ್ಯ ಚಿಕಿತ್ಸೆಯ ವ್ಯವಸ್ಥೆಯೂ ಮಾಡಲಾಗುವುದು ಎಂದರಲ್ಲದೆ ಬೀದಿಯಲ್ಲಿ ಕೆಲವರು ಕೇಬಲ್ ಗುಂಡಿ ತೆಗೆಯುವವರು ಟೆಂಟ್ ಹಾಕಿ ಇದ್ದಾರೆ. ಅವರಿಗೆ ಈಗಿನ ಪರಿಸ್ಥಿತಿಯಲ್ಲಿ ಎಲ್ಲಿ ಹೋಗುವುದು ಎಂದು ತಿಳಿಯುವುದಿಲ್ಲ. ಅಂತವರ ಪಟ್ಟಿಯನ್ನು ಪಿಡಿಓಗಳು ಮಾಡಬೇಕೆಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಮತ್ತು ಯಾವುದಾದರೊಂದು ಶಾಲೆಯಲ್ಲಿ ತುರ್ತು ಸೇವಾ ಕೇಂದ್ರಗಳನ್ನು ತೆರೆಯಬೇಕು. ಊಟ ವಿತರಣಾ ಕೇಂದ್ರಗಳಲ್ಲಿ ಕೂಡ ಜನ ಗುಂಪು ಸೇರದಂತೆ ನೋಡಿಕೊಳ್ಳಬೇಕು. ಅವರ ಆರೋಗ್ಯ ತಪಾಸಣೆ ನಡೆಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಖಾತ್ರಿಪಡಿಸಬೇಕು ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಖಾತೆಯಲ್ಲಿ ಉಳಿತಾಯ ಮೊತ್ತದ ಕೊರತೆಯಿದೆ. ಪ್ರಸ್ತುತ ಕೇವಲ ೩ ಲಕ್ಷ ರೂ. ಮಾತ್ರವಿದೆ ಎಂದು ದೇವಳದ ಕಾರ್ಯನಿರ್ವಹಣಾ ಅಧಿಕಾರಿಯೂ, ತಾಪಂ ಕಾರ್ಯನಿರ್ವಹಣಾ ಅಧಿಕಾರಿಯೂ ಆಗಿರುವ ನವೀನ್ ಭಂಡಾರಿ ಹೇಳಿದರು. ಅಷ್ಟು ಹಣ ಧಾರಾಳ ಸಾಕು. ಸರಳ ಊಟ ಮಾತ್ರ ನೀಡಿ. ಮೃಷ್ಟಾನ್ನ ಭೋಜನದ ಆವಶ್ಯಕತೆ ಇಲ್ಲ ಎಂದು ಸಚಿವರು ಸೂಚಿಸಿದರು.
ಪುತ್ತೂರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್ನಿಂದಲೂ ಅಗತ್ಯವಿರುವ ಊಟ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅವರು ನಗರಸಭಾ ಪೌರಾಯುಕ್ತರಾದ ರೂಪಾ ಶೆಟ್ಟಿ ಅವರಿಗೆ ಸೂಚನೆ ನೀಡಿದರು.
ಕೊರೋನಾ ಸಂಕಟ ಮುಗಿದು ನೆಮ್ಮದಿ ಮೂಡುವ ದಿನ ಗೊತ್ತಾ ? ಇಲ್ಲಿದೆ ನೋಡಿ !