ಹಾಸ್ಟೆಲ್ ಜೀವನ ಅದ್ಭುತ!
ಹಾಸ್ಟೆಲ್ ಜೀವನ ಜೀವನ ಎಂದರೆ ನಾಲ್ಕು ಗೋಡೆಯ ನಡುವೆ ನಡೆಸುವಂತದಲ್ಲ. ನಿಜವಾದ ಜೀವನ ಎಂದರೆ ಸಾಗರದಂತೆ ಆಳವಾಗಿ, ಆಕಾಶದಂತೆ ವಿಶಾಲವಾಗಿ, ಸುಖ-ದುಃಖ ದಿಂದ ಕೂಡಿದಾಗ ಮಾತ್ರ ನಮ್ಮ ಜೀವನಕ್ಕೆ ಸರಿಯಾದ ಅರ್ಥ ದೊರೆಯುವುದು.ಆದರೆ ನಾoಲ್ಕು ಗೋಡೆಗಳ ನಡುವೆ ಒಂದು ಅದ್ಭುತವಾದ ಜೀವನವನ್ನು ಸೃಷ್ಟಿಸಬಹುದು ಎಂದು ನಮಗೆ ತಿಳಿಸಿ ಕೊಟ್ಟದ್ದು ನಮ್ಮ ಹಾಸ್ಟೆಲ್. ಅನೇಕರಿಗೆ ಹಾಸ್ಟೆಲ್ ನ ಬಗ್ಗೆ ಬಹಳ ತಿರಸ್ಕಾರ ಇರುತ್ತದೆ.
ಹಾಸ್ಟೆಲ್ ಎಂದರೆ ಒಂದು ಜೈಲು ಎಂಬಂಥ ಒಂದು ದೊಡ್ಡ ತಪ್ಪಾದ ಮನೋಭಾವನೆಯನ್ನು ಹೊಂದಿರುತ್ತಾರೆ. ನಿಜವಾಗಿಯೂ ಹೇಳಬೇಕೆಂದರೆ ಹಾಸ್ಟೆಲ್ ಒಂದು ಜೈಲು ಖಂಡಿತವಾಗಿ ಅಲ್ಲ.
ಹಾಸ್ಟೆಲ್ ಎಂದರೆ ಸ್ವತಃ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳುವಂತಹ ಸುಂದರ ತಾಣ.ಮೊದಲ ಬಾರಿ ಹಾಸ್ಟೆಲಿಗೆ ಸೇರಿದಾಗ ಮನೆಯ ನೆನಪು ತಂದೆ-ತಾಯಿ ಸಹೋದರ-ಸಹೋದರಿ ಎಲ್ಲರ ನೆನಪುಗಳು ನನ್ನನ್ನು ಬೆನ್ನ ಬಿಡದೆ ಕಾಡುತ್ತಿತ್ತು.
ಯಾವುದೇ ಕೆಲಸದಲ್ಲೂ ಆಸಕ್ತಿ ಎಂಬುದೇ ಇರುತ್ತಿರಲಿಲ್ಲ. ನಾನು ನೋಡಿದ ಪ್ರತಿಯೊಂದು ವಸ್ತುವಿನಲ್ಲೂ ಸಹ ನನ್ನ ತಂದೆ-ತಾಯಿಯ ಮುಖವೇ ಪ್ರತಿಫಲಿಸುತ್ತಿತ್ತು. ಒಂದು ಕ್ಷಣದಲ್ಲಿ ನನಗೆ ಹಾಸ್ಟೆಲ್ ಎಂದರೆ ಜೈಲು ಎಂಬಂತೆ ಅನ್ನಿಸಿಬಿಡುತ್ತಿತ್ತು.
ಆದರೆ ಆ ದುಃಖದ ಕ್ಷಣದಲ್ಲಿ ನನ್ನ ಜೊತೆಗಿದ್ದು ನನಗೆ ಧೈರ್ಯ ತುಂಬಿದವರೆಂದರೆ ನನ್ನ ಸೀನಿಯರ್ಸ್.ಅವರು ಧೈರ್ಯ ತುಂಬುತ್ತಿದ್ದ ರೀತಿಯಲ್ಲೇ ಅರ್ಥ ಆಗುತ್ತಿತ್ತು ಹಾಸ್ಟೆಲ್ ಒಂದು ಜೈಲು ಅಲ್ಲ ಎಂದು. ಹಾಸ್ಟೆಲ್ ಜೀವನ ನನ್ನ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದೆ.
ನಮಗೆಲ್ಲ ತಂದೆ-ತಾಯಿ ಯಿಂದ ದೂರವಿದ್ದಾಗ ಮಾತ್ರ ಅವರ ಮೌಲ್ಯ, ಮಹತ್ವ ತಿಳಿಯುವುದು. ಅವರ ಕಷ್ಟಕ್ಕೆ ಪ್ರತ್ಯುತ್ತರವಾಗಿ ಏನಾದರೊಂದು ಸಾಧನೆ ಮಾಡಬೇಕೆಂಬ ನಿಜವಾದ ಹುಟ್ಟುವುದೂ ಇಲ್ಲೇ.ಹಾಸ್ಟೆಲಿನಲ್ಲಿದ್ದ ನನಗೆ ಒಬ್ಬ ಅಣ್ಣನಾಗಿ, ಒಬ್ಬ ಸ್ನೇಹಿತನಾಗಿ, ಒಬ್ಬ ಶಿಕ್ಷಕನಾಗಿ ಕಂಡುಬರುವುದು ಅಲ್ಲಿನ ವಾರ್ಡನ್. ಅವರು ನಮ್ಮನ್ನ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸುತ್ತ ಕಾಳಜಿವಹಿಸುತ್ತಾರೆ.
ಇಲ್ಲಿ ಹಲವು ಗೆಳೆಯರ ಪರಿಚಯವಾಗುತ್ತದೆ. ಆದರೆ ಅಂಗೈಯ ಬೆರಳುಗಳು ಒಂದೇ ರೀತಿ ಇಲ್ಲ ಎಂಬಂತೆ ಎಲ್ಲ ವಿದ್ಯಾರ್ಥಿಗಳ ನಡವಳಿಕೆಗಳು ಒಂದೇ ರೀತಿ ಇರುವುದಿಲ್ಲ.
ಹಾಗಾಗಿ ಹೊಂದಾಣಿಕೆ ಇದ್ದಲ್ಲಿ ಮಾತ್ರ ಹಾಸ್ಟೆಲ್ ಜೀವನ ಸುಖಕರವಾಗಿರುತ್ತದೆ.ಇಲ್ಲಿ ಗೆಳೆಯರೊಂದಿಗೆ ಕಳೆಯುವ ಆ ಅದ್ಭುತ ಕ್ಷಣಗಳಲ್ಲಿ ನಮ್ಮ ಮನೆ ನೆನಪು , ಹೆತ್ತವರ ನೆನಪು ಕಾಡುವುದೇ ಇಲ್ಲ. ಹೀಗೆ ಮನೆಯಿಂದ ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳಿಗಿಂತ ಹಾಸ್ಟೆಲ್ನಿಂದ ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳ ಜೀವನ ಬಹಳ ಭಿನ್ನವಾಗಿರುತ್ತದೆ. ಇಲ್ಲಿ ಎಷ್ಟೇ ಕಷ್ಟ ಪಟ್ಟರು, ಎಷ್ಟೇ ಸುಖ ಪಟ್ಟರು ಎಲ್ಲವನ್ನು ಗೆಳೆಯರ ಜೊತೆಗೆ ಹಂಚಿಕೊಳ್ಳುತ್ತೇವೆ ಹಾಗಾಗಿ ಹಾಸ್ಟೆಲ್ ಜೀವನದಲ್ಲಿ ಗೆಳೆಯರ ಪಾತ್ರ ತುಂಬಾನೇ ಮುಖ್ಯ. ರಜಾದಿನಗಳಲ್ಲಿ ಗೆಳೆಯ ಜೊತೆ ಆಟ ಆಡುತ್ತಾ, ಮೋಜು ಮಾಡುತ್ತಾ, ಕುಸ್ತಿ ಮಾಡುತ್ತಾ ಕಾಲಹರಣ ಮಾಡುವುದು ಎಂದರೆ ಎಲ್ಲಿಲ್ಲದ ಖುಷಿ. ಹಾಗೆ ದಿನಗಳು ಉರುಳಿ ನನ್ನಹಾಸ್ಟೆಲ್ ಜೀವನ ಕೊನೆಯ ಘಟ್ಟಕ್ಕೆ ತಲುಪಿದಾಗ ನನಗೆ ಪ್ರತಿದಿನ ಪ್ರತಿಕ್ಷಣ ಹೇಳಲಾಗದ ದುಃಖ ಒಂದು ನನ್ನ ಮನಸ್ಸನ್ನು ಆವರಿಸಿಕೊಂಡಿತ್ತು.
ಅದರಲ್ಲೂ ಕೊನೆಯ ಗಳಿಗೆಯಲ್ಲಿ ನನ್ನ ಮನೆಯಂತಿದ್ದ ಹಾಸ್ಟೆಲ್, ನನ್ನ ಕುಟುಂಬದವರ ಹಾಗೆ ಇದ್ದ ಗೆಳೆಯರು ಮತ್ತು ವಾರ್ಡನ್ ಎಲ್ಲರನ್ನೂ ಬಿಟ್ಟು ದೂರ ಬಂದಾಗ ನನಗೆ ಅದು ನೋವುಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
ಲೇಖನ- ಸಂದೀಪ್. ಎಸ್. ಮಂಚಿಕಟ್ಟೆ , ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.