ಭಾರತದಲ್ಲಿ ತಗ್ಗಿದ ಪೊಲ್ಯೂಷನ್ | ಹಿಗ್ಗಿದ ಕಾಡು ಪ್ರಾಣಿಗಳು

ಪ್ರಪಂಚದಾದ್ಯಂತ ಕೊರೋನಾ ವೈರಸ್ ಬಂದು ಮನುಷ್ಯತ್ವವನ್ನೇ ಪ್ರಶ್ನಿಸುತ್ತಾ ಮುನ್ನುಗ್ಗುತ್ತಿದೆ. ಅದರಿಂದಾಗಿ ಪ್ರಪಂಚದ ಬಹುತೇಕ ದೇಶಗಳಲ್ಲಿನ ಚಟುವಟಿಕೆಗಳು ನಿಧಾನವಾಗಿದೆ. ಫ್ಯಾಕ್ಟರಿಗಳು ಮುಚ್ಚಿವೆ. ಕೆಲವು ಫ್ಯಾಕ್ಟರಿಗಳು ಪ್ರೊಡಕ್ಷನ್ ಕಮ್ಮಿ ಮಾಡಿಕೊಂಡಿವೆ. ಪೂರ್ತಿ ಲಾಕ್ ಡೌನ್ ಆದ ದೇಶಗಳಲ್ಲಂತೂ ಎಲ್ಲ ಕಾರ್ಖಾನೆಗಳು ಬಂದ್ ಆಗಿದೆ. ರಸ್ತೆಗಳು ಜನ, ವಾಹನ ಇಲ್ಲದೆ ಖಾಲಿ ಬಿದ್ದಿದೆ. ಮನುಷ್ಯತ್ವವನ್ನು ಪ್ರಶ್ನಿಸಿದ ಕೊರೋನಾದ ಕೃಪೆಯಿಂದ ಕಾಡು ಪ್ರಾಣಿಗಳು ರಾಜಬೀದಿಗಳಲ್ಲಿ ಬಂದು ಆರಾಮ ಮಾಡುತ್ತಿವೆ ಎಂಬ ಸುದ್ದಿ ಮೈಸೂರು -ಊಟಿ ರಸ್ತೆಯಂಚಿನಿಂದ ಬಂದಿದೆ. ಪ್ರತಿ ಕೆಟ್ಟದ್ದರ ಹಿಂದೆ ಸಾಲು ಸಾಲು ಒಳ್ಳೆಯವು ಇರುತ್ತವಂತೆ. ಅದೀಗ ನಿಜವಾಗುತ್ತಿದೆ.

ಈ ನಡುವೆ ಊಟಿ ಮತ್ತು ಕೊಯಮತ್ತೂರಿನ ರಸ್ತೆಯಲ್ಲಿ ಜಿಂಕೆಗಳು ಬಂದು ರಸ್ತೆಯಲ್ಲಿ ಮಲಗಿವೆ ಎಂಬ ಸುದ್ದಿ ಟ್ವಿಟ್ಟರಿನಲ್ಲಿ ವೈರಲ್ ಆಗಿತ್ತು. ಆದರೆ, ಆ ಚಿತ್ರ, ಊಟಿ ಮತ್ತು ಕೊಯಮತ್ತೂರಿನ ರಸ್ತೆಯದ್ದಲ್ಲ, ಅದು ಜಪಾನಿನ ನಾರಾ ಪಾರ್ಕ್ ನಲ್ಲಿ 6 ವರ್ಷಗಳ ಹಿಂದೆ ತೆಗೆದ ಚಿತ್ರ ಎಂದೀಗ ಗೊತ್ತಾಗಿದೆ. ಕಾಡುಪ್ರಾಣಿಗಳಂತೂ ಈಗ ನಿರುಮ್ಮಳವಾಗಿ ರಸ್ತೆಗೆ ಬಂದು ಬಿಸಿ ಬಿಸಿ ಡಾಮಾರಿನ ಮೇಲೆ ಮಲಗಿ ಹೊಸದೊಂದು ಎಕ್ಸ್ ಪೆರಿಮೆಂಟ್ ಮಾಡಿಯೇ ಮಾಡುತ್ತವೆ. ಅಷ್ಟಂತೂ ಒಳ್ಳೆಯದನ್ನು ಪ್ರಾಣಿಗಳಿಗೆ ಕರುಣಿಸಿದೆ ಕೊರೋನಾ !

ಕಾರುಗಳು, ರಸ್ತೆಗಳು ಮತ್ತು ಕಾರ್ಖಾನೆಗಳು ಮುಚ್ಚಿದುದರಿಂದ ಭಾರತದ ಮೆಗಾಸಿಟಿಗಳು ಹಿಂದೆಂದೂ ಕಂಡುಬಾರದ ರೀತಿಯಲ್ಲಿ ವಾಯುಮಾಲಿನ್ಯ ಕಡಿಮೆಯಾಗಿದೆ. ಅದರ ಪರಿಣಾಮ, ಹೊಗೆ ಭರಿತ ಬೂದಿ ಎರಚಿದಂತಹ ಆಕಾಶವು ಈಗ ನಿರ್ಮಲ ನೀಲಾಕಾಶವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಭಾರತದಲ್ಲಿ ಪರೋಕ್ಷವಾಗಿ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತಿದೆ. ರಸ್ತೆಗಳು ಸಾಮಾನ್ಯವಾಗಿ ಕಾರುಗಳು, ರಿಕ್ಷಾಗಳು, ಬಸ್ಸುಗಳು ಮತ್ತು ಮೋಟಾರು ಬೈಕುಗಳಿಂದ ತುಂಬಿರುತ್ತವೆ. ಆದರೆ ಈಗ ರಸ್ತೆಗಳು ಖಾಲಿ ಬಿದ್ದಿದ್ದು ಎಲ್ಲ ಒಟ್ಟು ಬೀಗ ಹಾಕಿದಂತೆ, ಬೀದಿಗಳು ಖಾಲಿಯಾಗಿವೆ ಮತ್ತು ಸ್ಥಳೀಯರು ಸುಲಭವಾಗಿ ಉಸಿರಾಡಲು ಸುಲಭವಾಗುತ್ತಿದೆ.

ಈಗ ಭಾರತದ ಹಣಕಾಸು ರಾಜಧಾನಿ ಮುಂಬಯಿಯಲ್ಲಿನ ವಾಯುಮಾಲಿನ್ಯವು ಗುಣಮಟ್ಟ ಸೂಚ್ಯಂಕದಲ್ಲಿ 90 ರಷ್ಟಿದೆ. ಕಳೆದ ವರ್ಷ, ಇದೇ ಸಮಯಕ್ಕೆ ಅದು ಸರಾಸರಿ 153 ರಷ್ಟಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ. 26.7 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಮೆಗಾಸಿಟಿ ನವದೆಹಲಿಯಲ್ಲಿ ಕೇವಲ ವಾಯುಮಾಲಿನ್ಯವು ಗುಣಮಟ್ಟ ಸೂಚ್ಯಂಕ 93 ಕ್ಕೆ ಇಳಿದಿದೆ. ಇದು ಕಳೆದ ವರ್ಷ, ಮಾರ್ಚ್ 2019 – ರಲ್ಲಿ 161 ರಷ್ಟಿತ್ತು. ವಾಯುಮಾಲಿನ್ಯವು ಗುಣಮಟ್ಟ ಸೂಚ್ಯಂಕ 50 ಕ್ಕಿಂತ ಕಡಿಮೆಯಾದಾಗ ಆಗ ಗಾಳಿಯ ಉತ್ತಮ ಗುಣಮನ್ನುಟ್ಟದ್ದೆಂದು ಪರಿಗಣಿಸಲಾಗುತ್ತದೆ.

ಗಾಳಿಯ ಗುಣಮಟ್ಟದಲ್ಲಿನ ಕುಸಿತ ಕಂಡಿರುವ ದೇಶ ಭಾರತ ಮಾತ್ರವಲ್ಲ. ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೊರೋನಾ ವೈರಸ್ ಏಕಾಏಕಿ ಹಿಡಿತ ಸಾಧಿಸಿದಾಗ, ನಾಸಾ ತೆಗೆದ ಚಿತ್ರಗಳು ಮತ್ತು ಅಧ್ಯಯನದಲ್ಲಿ ಈಗಾಗಲೇ ಚೀನಾದ ಹುವಾನ್ ಪ್ರಾಂತ್ಯದಲ್ಲಿ ವಾಯುಮಾಲಿನ್ಯ ಭಾರೀ ಕುಸಿತವನ್ನು ಕಂಡಿದೆ. ಅಷ್ಟೇ ಅಲ್ಲ, ಮಾರ್ಚ್ ವೇಳೆಗೆ, ಸ್ಪೇನ್‌ನ ಟ್ರಾಫಿಕ್ ನಿರ್ದೇಶನಾಲಯವು ಮ್ಯಾಡ್ರಿಡ್ ಮತ್ತು ಇಟಲಿಯಲ್ಲಿ 14 % ಮಾಲಿನ್ಯ ಕುಸಿತವನ್ನು ದಾಖಲಿಸಿದೆ. ಉತ್ತರ ಇಟಲಿಯ ಇತರ ಭಾಗಗಳಲ್ಲಿ NO2 ಮಟ್ಟವು ಶೇಕಡಾ 40 ರಷ್ಟು ಕುಸಿದಿದೆ ಎಂದು ಮಾಲಿನ್ಯ ಅಧ್ಯಯನ ತಿಳಿಸಿದೆ.

1 Comment
  1. ಸೌಜನ್ಯ. ಬಿ.ಎಂ. says

    ಪ್ರಕೃತಿ ತನಗೆ ಬೇಕಾದಂತೆ ಎಲ್ಲವನ್ನೂ ಮಾಡಿಕೊಳ್ಳುತ್ತದೆ

Leave A Reply

Your email address will not be published.