58 ವರುಷಗಳನ್ನು ಪೂರೈಸಿದ ರಂಗಭೂಮಿ ಕ್ಷೇತ್ರ
ಇಂದಿಗೆ ಸುಮಾರು 58 ವರುಷಗಳ ಹಿಂದೆ ಕಲಾಕ್ಷೇತ್ರಕ್ಕೆ ಒಂದು ಉತ್ತಮ ನೆಲೆ ದೊರೆಯಿತು. ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ ಸಾಹಿತ್ಯ ಕೃತಿಯಾಗಿ, ರಂಗ ಭೂಮಿಯಲ್ಲಿ ನಾಟಕವಾಗಿ ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರವೇ ರಂಗಭೂಮಿ.
ಇಂಟರ್ ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ 1961ರಲ್ಲಿ ವ್ಯವಸ್ಥೆಗೊಳಿಸಿದ ವಿಶ್ವ ರಂಗಭೂಮಿ ಸಮಾವೇಶದಲ್ಲಿ ಪ್ರತೀ ವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 1962ರಲ್ಲಿ ಪ್ಯಾರಿಸ್ ನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯೊಂದಿಗೆ ಮೊದಲ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.
ಪ್ಯಾರಿಸ್ ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತರಾಷ್ಟ್ರೀಯ ರಂಗಸಂಸ್ಥೆಯು ಪ್ರತೀ ವರ್ಷ ವಿಶ್ವದ ಯಾವಾದಾದರೊದು ಭಾಷೆಯ ಹೆಸರಾಂತ ನಟ, ನಾಟಕಕಾರ,ನಿದೇ೯ಶಕ ಅಥವಾ ಸಂಘಟಕರಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ.
ಕನ್ನಡ ಭಾಷೆಗೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ವಿಶ್ವ ರಂಗಭೂಮಿ ದಿನದ ಸಂದೇಶ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಕಾರ್ನಾಡ್ ಅವರು ಈಗ ಭಾರತೀಯ ಅಂತಾರಾಷ್ಟ್ರೀಯ ಸಂಸ್ಥೆಯ ರಾಯಭಾರಿಯೂ ಆಗಿದ್ದಾರೆ.
ರಂಗ ಭೂಮಿಯಲ್ಲಿ ಮಹಿಳೆಯರು: ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರಿಗೆ ಸರಿಸಮನರಾಬೇಕು ಎಂಬ ತತ್ವ ಜನಜನಿತವಾಗಿದೆ. ಕಲಾಕ್ಷೇತ್ರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಿಳೆಯರು ಪಾತ್ರಕ್ಕೆ ಜೀವ ತುಂಬಲು ಹೊರಟಿದ್ದರು.
140 ವಷ೯ಗಳ ಇತಿಹಾಸ ಹೊಂದಿರುವ ವೃತ್ತಿ ರಂಗಭೂಮಿಯಲ್ಲಿ ಆರಂಭದ ಒಂದೆರಡು ದಶಕಗಳಲ್ಲಿ ಮಹಿಳೆಯರು ರಂಗ ಪ್ರವೇಶಿಸಿರಲಿಲ್ಲ. ಪುರುಷರೇ ಸ್ತ್ರೀಯರ ವೇಷ ಧರಿಸಿ ಸ್ತ್ರೀ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದರೂ ಅದು ಪರಿಣಾಮಕಾರಿಯಾಗದೇ ಹೋಯಿತು.
ಸ್ತ್ರೀಯರ ನಯ, ನಾಜೂಕಿನ ಹಾವ ಭಾವಗಳಿಗೆ ಸಹಜತೆ ಬರಬೇಕಾದರೆ ಸ್ತ್ರೀಯರೇ ಅಭಿನಯಿಸಬೇಕು ಎಂಬ ತೀರ್ಮಾನಕ್ಕೆ ಬಂದವರು ಶಿವಮೂರ್ತಿ ಸ್ವಾಮಿಗಳು. ಕೊಣ್ಣೂರು ನಾಟಕ ಕಂಪನಿಯವರಾದ ಶಿವಮೂರ್ತಿ ಸ್ವಾಮಿಗಳು 1901ರಲ್ಲಿಯೇ ಗುಳೇದಗುಡ್ಡದಿಂದ “ಯಲ್ಲೂಬಾಯಿ” ಎಂಬ ಮಹಿಳೆಯನ್ನು ಕರೆಸಿ ಆಕೆಯಿಂದ ಮಹಿಳಾ ಪಾತ್ರ ಮಾಡಿಸುತ್ತಾರೆ.
ಗಾಯನ ಮತ್ತು ಅಭಿನಯದಲ್ಲಿ ತನ್ನ ಅದ್ವಿತೀಯ ಪಾತ್ರ ನಿರ್ವಹಿಸಿದ ಯಲ್ಲೂಬಾಯಿಯನ್ನೇ ವೃತ್ತಿ ರಂಗಭೂಮಿಯ ಮೊದಲ ನಟಿ ಎಂದು ವಿದ್ವಾಂಸರು ಹೇಳುತ್ತಾ ಬಂದಿದ್ದರೂ, 1898ರಲ್ಲಿ ಪಾಪಸಾನಿ ಎಂಬಾಕೆ ಸ್ಥಾಪಿಸಿದ ಸ್ತ್ರೀ ನಾಟಕ ಮಂಡಳಿ “ಪ್ರಭಾವತಿ ದಬಾ೯ರು” ” ಹರೀಶ್ಚಂದ್ರ” ಮುಂತಾದ ನಾಟಕಗಳನ್ನು ಪ್ರದರ್ಶಿಸುತ್ತಿತ್ತೆಂದೂ ಹಾಗಾಗಿ ಇದೇ ಮೊದಲ ನಾಟಕ ಮಂಡಳಿ ಎಂದು ಹೇಳಲಾಗುತ್ತಿದೆ.
ನಾಟಕ ರಂಗಭೂಮಿಯಲ್ಲಿ ಜೀವಂತ ಮತ್ತು ನಿಜವಾದ ಕಲೆ ಹೊಂದಿದ್ದು, ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಎಲ್ಲೆಡೆ ನಡೆಯಬೇಕಿದೆ.
ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಹಾಗೂ ಮಾನವೀಯನ್ನು ಬೆಳೆಸುವಲ್ಲಿ ರಂಗಭೂಮಿ ಕಲೆ ಸಹಕಾರಿಯಾಗಿದೆ.