Breaking News | ರಾಜ್ಯಕ್ಕೇ ದೊಡ್ಡ ಬೀಗ ಬಿದ್ದಿದೆ | ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ
ಬೆಂಗಳೂರು, ಮಾ.23 : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆಯಿಂದ ( ಮಾ. 24) ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಮಹತ್ವದ ಸಭೆಯಲ್ಲಿ ಮಾರ್ಚ್ 31ರ ವರೆಗೆ ಕರ್ನಾಟಕವನ್ನು ಲಾಕ್ ಡೌನ್ ಮಾಡುವ ಕುರಿತು ಚರ್ಚೆ ನಡೆಸಲಾಗಿತ್ತು. ಸಂಜೆ ನಿರ್ಧಾರ ಪ್ರಕಟಿಸುವುದಾಗಿ ಯಡಿಯೂರಪ್ಪನವರು ಹೇಳಿದ್ದರು. ಆದರೆ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಿದ್ರೆ ಮಾತ್ರ ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಧ್ಯವೆನ್ನುವ ಒತ್ತಡ ಕೇಳಿಬಂದಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಟೋಟಲ್ ಲಾಕ್ ಡೌನ್ ಗೆ ಮೊದಮೊದಲು ಒಪ್ಪಿರಲಿಲ್ಲ. ಕಾರಣ ಇದರಿಂದ ದಿನದ ದುಡಿಮೆ ಮಾಡಿ ಬದುಕುವ ಬಡವರಿಗೆ ತೊಂದರೆ ಆಗಬಾರದು ಎಂದು.
ಈಗ ತಜ್ಞ ವೈದ್ಯರು ನೀಡಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೊನಾ ಸೊಂಕಿತರ ಸಂಪರ್ಕದಲ್ಲಿರುವ ಪತ್ತೆ ಹಚ್ಚಿ ಕೊರಂಟೈನ್ ನಲ್ಲಿ ಇಡುವುದು ಸವಾಲಿನ ಕೆಲಸವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಜನರು ಮನೆಯಲ್ಲಿಯೇ ಇರುವಂತೆ ಸಿ ಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಮುಖ್ಯಾಂಶಗಳು :
- ನಾಳೆಯಿಂದ 8 ದಿನ ಕರ್ಫ್ಯೂ. ನಾಳೆಯಿಂದ ಕರ್ನಾಟಕ ಇಡೀ ರಾಜ್ಯ ಸ್ತಬ್ದವಾಗಲಿದೆ
- ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಇರೋದಿಲ್ಲ
- ಆಟೋ, ಟ್ಯಾಕ್ಸಿ, ಓಲಾ – ಎಲ್ಲಾ ರೋಡಿಗಿಳಿಯಲ್ಲ
- ಅಂತಾರಾಜ್ಯ ವಾಹನ, ಬಸ್ ಸೇವೆಗಳು ಇರುವುದಿಲ್ಲ
- ಅಂತಾರಾಷ್ಟ್ರೀಯ ವಿಮಾನ ಇರುವುದಿಲ್ಲ. ದೇಶೀಯ ವಿಮಾನ ಮಾರ್ಚ್ 24 ರ ಮಧ್ಯರಾತ್ರಿಯ ನಂತರ ಇರುವುದಿಲ್ಲ
- ಸರಕು ಸಾಗಾಣಿಕ ವಿಮಾನ ಇರುತ್ತದೆ
- ಮಂದಿರ, ಮಸೀದಿ, ಚರ್ಚು ಇಲ್ಲ
- ಯಾವುದೇ ಸೇವೆ, ಫ್ಯಾಕ್ಟರಿ ಇರಲ್ಲ
- ಕಾನೂನು ಉಲ್ಲಂಘಿಸಿ ಅನಗತ್ಯ ತಿರುಗಾಡಿದವರ ಮೇಲೆ ನಾನ್ ಬೈಲೇಬಲ್ ಕೇಸು ಆಗಲೂಬಹುದು ಬಹುಶ: ಆರ್ಟಿಕಲ್ 144 ಹಾಕಲಾಗುತ್ತದೆ
- ಗರಿಷ್ಟ 2 ವರ್ಷ ಜೈಲು ವಾಸ ಪಕ್ಕಾ.
- ಹಾಲು, ದಿನಸಿ, ತರಕಾರಿ, ಜೀವರಕ್ಷಕ ಮೆಡಿಸಿನ್ ಮತ್ತು ಅಗತ್ಯ ಸೇವೆಗಳು ಇರುತ್ತವೆ
- ಮೀನು ಮಾಂಸ ಲಭ್ಯ
- ಇಂದಿರಾ ಕ್ಯಾನ್ಟಿನ್ ಇರುತ್ತದೆ
- ಹೋಟೆಲ್ಗಳಲ್ಲಿ ಪಾರ್ಸೆಲ್ ( ಸ್ವೀಗ್ಗಿ, ಝೋಮ್ಯಾಟೋ….) ಇರುತ್ತದೆ
- ಸಮಾರಂಭಗಳು ಬ್ಯಾನ್. ಮನೆಯಲ್ಲಿ ಹಬ್ಬ ಆಚರಿಸಬಹುದು. ಬೇರೆ ಮನೆಯವರನ್ನು ಸೇರಿಸಿ ಗುಂಪಾಗಿ ಹಬ್ಬ, ಪಾರ್ಟಿ ಮಾಡುವಂತಿಲ್ಲ.
- ಪೆಟ್ರೋಲ್ ಡೀಸೆಲ್ ಇರುತ್ತದೆ
- ಆಸ್ಪತ್ರೆ, ಡಯಾಗ್ನೋಸ್ಟಿಕ್ ಸೆಂಟರ್, ಎಟಿಎಂ ಇರತ್ತೆ
ನಿನ್ನೆ ರಾಜ್ಯ ಸರಕಾರ ಕೊರೊನಾ ವೈರಸ್ ಶಂಕಿತರು ದೃಢಪಟ್ಟಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಬೆಳಗಾವಿ, ಮೈಸೂರು, ಧಾರವಾಡ, ಚಿಕ್ಕಬಳ್ಳಾಪುರ, ಕಲಬುರಗಿ, ಕೊಡಗು ಸೇರಿದಂತೆ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿತ್ತು.
ಜನರು ಕೂಡ ರಾಜ್ಯದೆಲ್ಲೆಡೆ ಕಂಪ್ಲೀಟ್ ಲಾಕ್ ಡೌನ್ ಗೆ ತಯಾರಾಗುತ್ತಿದ್ದಾರೆ. ಭರ್ಜರಿ ದಿನಸಿ ಖರೀದಿ ಎಲ್ಲೆಡೆ ನಡೆಸಿದೆ. ಕೆಲವೆಡೆ ಬಾರುಗಳ ಮುಂದೆ ನೂಕುನುಗ್ಗಲು. ವಾರದ ಮಾಲು ಸ್ಟೋರು ಮಾಡಿಕೊಳ್ಳಲು ಅವರೆಲ್ಲ ಅಲ್ಲಲ್ಲಿ ನೆರೆದಿರುವುದು ಕಂಡುಬರುತ್ತಿದೆ.
ಸುತ್ತಮುತ್ತಲ ಕೊರೋನಾ ಸಂಬಂಧಿ ಘಟನಾವಳಿಗಳ ಬಗ್ಗೆ ಮತ್ತಷ್ಟು ಮಾಹಿತಿ
ಮಾರ್ಚ್ 13 ರಿಂದ ಇದುವರೆಗೂ ಮಂಗಳೂರು ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಬರೋಬ್ಬರಿ 229 ವಿಮಾನಗಳು ಆಗಮಿಸಿವೆ ಎಂಬ ಮಾಹಿತಿ ಇದೆ. ಒಟ್ಟು 89,000 ಕೂ ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅವರಲ್ಲಿ ರಾಜ್ಯಕ್ಕೆ ವಿದೇಶಗಳಿಂದ ಬಂದವರ ಸಂಖ್ಯೆ ಬರೋಬ್ಬರಿ 40,000 ದಾಟುತ್ತಿದೆ ಎಂಬ ಅಂದಾಜಿದೆ. ಇಷ್ಟೊಂದು ಸಂಖ್ಯೆಯಲ್ಲಿ ವಿದೇಶದಲ್ಲಿ ನೆಲೆಸಿರುವವರು ರಾಜ್ಯಕ್ಕೆ ಆಗಮಿಸಿದ್ದರೂ ಕೂಡ ರಾಜ್ಯ ಸರಕಾರ ಅವರ ಅವರ ಮೇಲೆ ನಿಗಾ ಇರಿಸಿಲ್ಲ. ಹೀಗೆ ಬಂದವರು ಕಡ್ಡಾಯವಾಗಿ ತಪಾಸಣೆಗೆ ಒಳಪಟ್ಟಿಲ್ಲ. ಸರಕಾರ ಸತ್ಯವನ್ನು ಮುಚ್ಚಿಟ್ಟಿರುವುದರಿಂದ ಜನರು ಆತಂಕಕ್ಕೆ ಸಿಲುಕುವಂತಾಗಿದೆ. ಹೀಗೆ ಬಂದವರಲ್ಲಿ ರೋಗ ಲಕ್ಷಣ ಇದ್ದವರನ್ನು ಮಾತ್ರ ತಪಾಸಣೆ ನಡೆಸಿತ್ತು. ಉಳಿದವರನ್ನು ಹೋಂ ಕ್ವಾರ0ಟೈನ್ ಹೆಸರಿನಲ್ಲಿ ಅವರನ್ನು ಮನೆಯಲ್ಲೇ ಉಳಿಯಲು ಹೇಳಿತ್ತು ಸರಕಾರ. ಆದರೆ ಆ ರೀತಿ ಮನೆಯಲ್ಲಿ ಇರಲು ಹೇಳಿದವರು ಬೀದಿ ಸುತ್ತುತ್ತಿದ್ದಾರೆ. ಮಾಲ್ ಪಾರ್ಕ್ ಅಂತ ತಿರುಗುತ್ತಿದ್ದಾರೆ. ಈ
ವಿದೇಶಗಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡಿಲ್ಲ. ಆದರೆ ವಿದೇಶಿ ಪ್ರಯಾಣಿಕರ ನಿರ್ಬಂಧವಾಗಲಿ, ವಿದೇಶಿ ಪ್ರಯಾಣಿಕರಿಗೆ ಕಡ್ಡಾಯ ತಪಾಸಣೆಯನ್ನಾಗಲಿ ಮಾಡಿಲ್ಲ.
ಇನ್ನು ಕೆಲವರು ಇತರ ರಾಜ್ಯಗಳ ವಿಮಾನ ನಿಲ್ದಾಣದಕ್ಕೆ ಆಗಮಿಸಿ ನಂತರ ಬೆಂಗಳೂರಿನ ಡೊಮೆಸ್ಟಿಕ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅಧಿಕಾರಿಗಳು ಕೇವಲ ಅಂತರಾಷ್ಟ್ರೀಯ ವಿಮಾನದಿಂದ ಬಂದವರನ್ನು ಮಾತ್ರವೇ ತಪಾಸಣೆಗೆ ಒಳಪಡಿಸಿದ್ದಾರೆ. ಆದರೆ ಸ್ವದೇಶಿ ವಿಮಾನಗಳಲ್ಲಿ ಬಂದವರನ್ನು ಸ್ಕ್ರೀನಿಂಗ್ ಗೆ ಒಳಪಡಿಸಿಲ್ಲ. ಇನ್ನು ಸ್ಕ್ರೀನಿಂಗ್ ಗೆ ಒಳಪಟ್ಟವರ ವಿರುದ್ದವೂ ಆರಂಭದಲ್ಲಿ ಯಾವುದೇ ಕ್ರಮಗಳನ್ನು ಸರಕಾರ ಕೈಗೊಂಡಿರಲಿಲ್ಲ. ವಿದೇಶದಿಂದ ಮರಳಿದವರು ಕೂಡ ಜಾಗೃತೆ ವಹಿಸದೇ ಮಹಾಮಾರಿ ಕೊರೊನಾವನ್ನು ತಮ್ಮೂರಿಗೆ ಹರಡೋ ಕಾರ್ಯವನ್ನು ಮಾಡುತ್ತಿದ್ದಾರೆ.
ಈಗಾಗಲೇ ಸುಮಾರು 500 ತಂಡಗಳನ್ನು ರಚಿಸಿಕೊಂಡು ವಿದೇಶಗಳಿಂದ ಬಂದಿರುವವರ ಕೈಗೆ ಸೀಲ್ ಹಾಕಲು ಮುಂದಾಗಿದೆ. ಆದರೆ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಅನ್ನುವಂತಾಗಿ ಸರಕಾರದ ಸ್ಥಿತಿ. ಕರಾವಳಿ ಭಾಗದಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ವಿದೇಶದಲ್ಲಿ ನೆಲೆಸಿರುವವರು ಆಗಮಿಸಿದ್ದಾರೆ. ಆದರೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿದೇಶದಿಂದ ಬಂದವರ ಮೇಲೆ ನಿಗಾ ಇರಿಸಿಲ್ಲ.
ಕೈಯಲ್ಲಿ ಸೀಲ್ ಇದ್ದರೂ ಓಡಾಟ ರಾಜಾರೋಷ ?
ಹೀಗೆ ರಾಜ್ಯಕ್ಕೆ ಮರಳಿರುವವನ್ನು ಕಳೆದ ಮೂರ್ನಾಲ್ಕು ದಿನಗಳಿಂದ ಏರ್ ಪೋರ್ಟ್ ಗಳಲ್ಲಿ ಕೈಗೆ ಸ್ಟ್ಯಾಂಪಿಂಗ್ ಹಾಕಲಾಗುತ್ತಿದೆ. ಆದರೆ ಅದಕ್ಕೂ ಮೊದಲು ರಾಜ್ಯಕ್ಕೆ ಮರಳಿದವರನ್ನು ಆರೋಗ್ಯ ಇಲಾಖೆ ಸರಿಯಾದ ರೀತಿಯಲ್ಲಿ ತಪಾಸಣೆ ನಡೆಸಿಲ್ಲ. ಮಾತ್ರವಲ್ಲ ವಿದೇಶದಿಂದ ಬಂದ ಹಲವರಿಗೆ ಕೊರೊನಾ ಸೋಂಕು ಇದ್ದರೂ ಕೂಡ ಬಹುತೇಕರು ತಪಾಸಣೆಗೆ ಒಳಪಡಿಸಿಲ್ಲ. ಇನ್ನು ವಿದೇಶದಿಂದ ಬಹುತೇಕರಿಗೆ ಮನೆಯಲ್ಲಿಯೇ 14 ದಿನಗಳ ಗೃಹಬಂಧನಕ್ಕೆ ಒಳಗಾಗುವಂತೆ ಸೂಚಿಸಿದ್ದರು ಕೂಡ ಹಲವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿವೆ. ನಾಗರೀಕರು ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಮಾರ್ಚ್ 11ರ ನಂತರದಲ್ಲಿ ರಾಜ್ಯಕ್ಕೆ ಬಂದಿರುವವರ ಸಂಖ್ಯೆ ಸರಕಾರದ ಬಳಿಯಲ್ಲಿದೆ. ಆದರೆ ಅದಕ್ಕೂ ಮೊದಲು ಬಂದವರ ಲೆಕ್ಕ ಸರಕಾರದ ಬಳಿಯಿಲ್ಲ. ವಿದೇಶಿದಿಂದ ಬಂದವರ ಕೈಗೆ ಸೀಲ್ ಹಾಕಿದ್ದರೂ ಕೂಡ ಸಾರ್ವಜನಿಕವಾಗಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇಂತವರ ವಿರುದ್ದ ಕಾನೂನು ಕ್ರಮಕೈಗೊಳ್ಳುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸುತ್ತಿವೆ.
ಕ್ವಾರಂಟೈನ್ ತಪ್ಪಿಸಿಕೊಳ್ಳಲು ಮಾತ್ರೆ ತಿಂದಿದ್ದ ಪ್ರಯಾಣಿಕರು ?
ವಿದೇಶಗಳಿಂದ ತಾಯ್ನಾಡಿಗೆ ಮರಳುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಇದನ್ನು ತಪ್ಪಿಸಿಕೊಳ್ಳಲು ಬಹುತೇಕರು ವಿಮಾನ ನಿಲ್ದಾಣಗಳನ್ನು ತಲುಪುವ ಒಂದು ಗಂಟೆಯ ಮೊದಲು ಮಾತ್ರೆಗಳನ್ನು ತಿನ್ನುತ್ತಾರೆ. ಇದರಿಂದ ಥರ್ಮಲ್ ಸ್ಕ್ರೀನಿಂಗ್ ವೇಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗೋದೇ ಇಲ್ಲಾ. ತಮಿಳುನಾಡಿನ ವಕೀಲರೊಬ್ಬರು ಇಂತಹ ಅಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ.
ವಿದೇಶದಿಂದ ಬರುತ್ತಿರುವ ಕೆಲ ಭಾರತೀಯರು ಕೊರೋನಾ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ಯಾರಾಸಿಟಮಲ್ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ವಿಮಾನ ಲ್ಯಾಂಡಿಂಗ್ ಕೇವಲ 1 ಗಂಟೆ ಇರುವಾಗ ಅವರು ಜ್ವರ ಕಡಿಮೆಯಾಗುವ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದರು. ಈ ಪ್ಯಾರಾಸಿಟಮಲ್ ಮಾತ್ರೆಗಳನ್ನು ಸೇವಿಸಿದಾಗ ಜ್ವರದ ತೀವ್ರತೆ ಕಡಿಮೆಯಾಗುತ್ತದೆ. ಹೀಗಾಗಿ ಥರ್ಮಲ್ ಸ್ಕ್ಯಾನರ್ ನಲ್ಲಿ ಫಲಿತಾಂಶ ಸರಿಯಾಗಿ ಲಭ್ಯವಾಗದ ಪರಿಣಾಮ ಇವರೆಲ್ಲ ಪಾಸ್ ಆಗುತ್ತಿದ್ದಾರೆ. ಹೀಗೆ 10 ಮಂದಿ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದ್ದನ್ನು ನಾನೇ ಗಮನಿಸಿದ್ದೇನೆ ಎಂದು ತಿಳಿಸಿದ್ದಾರೆ. ಹೀಗೆ ಹೋಮ್ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡವರು ಇಂದು ನಮ್ಮ ನಿಮ್ಮ ಬಳಿಯೂ ಸುತ್ತುತ್ತಿರಬಹುದು. ಇದರಿಂದಾಗಿ ಕೊರೊನಾ ಎಲ್ಲೆಡೆ ಹರಡುವ ಭೀತಿ ಎದುರಾಗಿದೆ.