ಡಂಪಿಂಗ್ ಯಾರ್ಡ್ ಆಗಿ ಮಾರ್ಪಡಾಗಿರುವ ಸುಳ್ಯ ನ.ಪಂ. ಕಚೇರಿ ಆವರಣ ;ಗಬ್ಬೆದ್ದು ನಾರುತ್ತಿರುವ ನಗರಾಡಳಿತ, ಕಚೇರಿ ಆವರಣದಲ್ಲೇ ಪ್ರತಿದಿನ ತ್ಯಾಜ್ಯಕ್ಕೆ ಬೆಂಕಿ
–ಪದ್ಮನಾಭ ಸುಳ್ಯ
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾದ ಹಸಿಕಸ ಮತ್ತು ಒಣ ಕಸವನ್ನು ವಿಲೇವಾರಿ ಮಾಡಲು ಪ್ರತ್ಯೇಕ ಜಾಗ ಇಲ್ಲದೆ ಸುಮಾರು ೨ ವರ್ಷದಿಂದ ನಗರ ಪಂಚಾಯತ್ ಆವರಣದಲ್ಲೇ ಹಾಕಿ ಕಸ ವಿಂಗಡಣೆ ಕಾಮಗಾರಿ ನಡೆಸುತ್ತಿರುವುದರಿಂದ ಮತ್ತು ವಿಂಗಡಿತ ಕಸವನ್ನು ಬೇರೆಲ್ಲಿಗೂ ಕೊಂಡೊಯ್ಯಲಾರದೆ ಅಲ್ಲೇ ಇರಿಸಬೇಕಾಗಿ ಬಂದಿರುವುದರಿಂದ ನ.ಪಂ. ಕಚೇರಿಯ ಸುತ್ತ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿದ್ದು ಕಚೇರಿ ತುಂಬೆಲ್ಲಾ ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಕಚೇರಿಯ ಹಿಂದುಗಡೆಯೇ ಪ್ರತಿದಿನ ಸಂಗ್ರಹವಾಗುವ ಕಸಕ್ಕೆ ಬೆಂಕಿ ಹಾಕಿ ಪರಿಸರ ಮಾಲಿನ್ಯಕ್ಕೂ ಕಾರಣ ಆಗುತ್ತಿದ್ದಾರೆ.
ಸುಳ್ಯ ನಗರ ಪಂಚಾಯತ್ ೨೦ ವಾರ್ಡ್‌ಗಳಿಂದ ಕೂಡಿ ವೇಗವಾಗಿ ಅಭಿವೃದ್ದಿ ಆಗುತ್ತಿರುವ ನಗರ. ಆದರೆ ಅಭಿವೃದ್ದಿ ಆಗುವುದಕ್ಕಿಂತ ಹೆಚ್ಚಿನ ಸಮಸ್ಯೆಗಳ ಪಟ್ಟಿ ಸುಳ್ಯ ನಗರದಲ್ಲಿದೆ. ಆದರೆ ಇಲ್ಲಿಯವರೆಗೆ ನಗರದಲ್ಲಿ ಸುಸಜ್ಜಿತವಾದ ಘನತ್ಯಾಜ್ಯ ಘಟಕ ಇಲ್ಲ. ಸುಳ್ಯ ನಗರಾಡಳಿತಕ್ಕೆ ನಗರದಲ್ಲಿ ಬೀಳುವ ಕಸಗಳನ್ನು ಎಲ್ಲಿ ವಿವೇವಾರಿ ಮಾಡಬೇಕು ಎನ್ನುವುದು ದೊಡ್ಡ ಸಮಸ್ಯೆ ಆಗಿದೆ.
ನಗರದ ಹೊರ ವಲಯದ ಕಲ್ಚರ್ಪೆಯಲ್ಲಿ ತ್ಯಾಜ್ಯಗಳನ್ನು ಹಾಕುವ ಸಲುವಾಗಿ ತ್ಯಾಜ್ಯ ಘಟಕಗಳನ್ನು ಮಾಡಿ ನಗರದ ಕಸವನ್ನು ತೆಗೆದುಕೊಂಡು ಹೋಗಿ ಸುರಿಯಲಾಯಿತು ಆದರೆ. ದಿನದಿಂದ ದಿನಕ್ಕೆ ಅಲ್ಲಿ ಸಮಸ್ಯೆ ಹೆಚ್ಚಗತೊಡಗಿತ್ತು. ನಗರದ ಕಸವನ್ನು ಸುರಿಯಲು ಜಾಗ ಸಾಕಾಗದಿದ್ದಾಗ ಮತ್ತು ಸರಿಯಾಗಿ ವಿವೇವಾರಿ ಆಗದೇ ಸಮಸ್ಯೆ ಉದ್ಭವವಾಯಿತು. ತ್ಯಾಜ್ಯ ಘಟಕಕ್ಕೆ ಸುರಿದ ಲಕ್ಷಾಂತರ ರೂಪಾಯಿ ತ್ಯಾಜ್ಯದೊಂದಿಗೆ ಮಣ್ಣು ಪಾಲಾಯಿತು.
ಕಲ್ಚರ್ಪೆಯಲ್ಲಿ ಕಸ ವಿವೇವಾರಿ ನಿಲ್ಲಿಸಿದ ನಂತರ ಒಣ ಕಸವನ್ನು ನಗರ ಪಂಚಾಯತ್‌ನ ಆವರಣದಲ್ಲೇ ಇರುವ ವಾಹನ ನಿಲುಗಡೆಯ ಶೆಡ್‌ನಲ್ಲೇ ಕಸ ಹಾಕಲು ಆರಂಭಿಸಲಾಯಿತು. ಈಗ ಈ ವಾಹನ ನಿಲುಗಡೆ ಶೆಡ್ ಭರ್ತಿಗೊಂಡಿದ್ದು ಕಸ ಹಾಕಲು ಸ್ಥಳವೇ ಇಲ್ಲದಂತಾಗಿದೆ. ಕಳೆದ ೨-೩ ತಿಂಗಳಿನಿಂದ ನಗರ ಪಂಚಾಯತ್ ಕಾರ್ಯಾಲಯದ ಹಿಂದುಗಡೆ ಇರುವ ಶೆಡ್‌ನಲ್ಲಿ ತುಂಬಿಸುವ ಕೆಲಸ ಆಯಿತು. ಅಲ್ಲಿ ಕೂಡ ತುಂಬಿದ ನಂತರ ಕಚೇರಿಯ ಪಕ್ಕದಲ್ಲೇ ಕಸ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಈಗ ಕಚೇರಿಯ ಮೂರು ಕಡೆಯಿಂದ ಕಸದ ರಾಶಿಯೇ ಎದ್ದು ಕಾಣುತ್ತಿದೆ. ಕಳೆದ ಒಂದು ತಿಂಗಳಿನಿಂದ ಕಸ ಹಾಕಲು ಸ್ಥಳದ ಕೊರತೆ ಉದ್ಭವಿಸಿದಾಗ ಬೇರೆ ದಾರಿ ಇಲ್ಲದಾಗ ಕಚೇರಿಯ ಆವರಣದಲ್ಲೇ ದಿನದಿತ್ಯದ ಕಸವನ್ನು ತಂದು ಬೆಂಕಿ ಹಾಕಲು ಸುರು ಮಾಡಿದರು. ಈಗ ಪ್ರತಿದಿನ ಕಸಕ್ಕೆ ಬೆಂಕಿ ಹಾಕಿ ಬಳಿಕ ನೀರು ಸುರಿದು ನಂದಿಸುವ ಕೆಲಸ ಮಾಡುವ ಮೂಲಕ ಪರಿಸರ ಮಾಲಿನ್ಯವನ್ನು ನಗರ ಪಂಚಾಯತ್ ಅಧಿಕಾರಿಗಳೇ ಮಾಡುತ್ತಿದ್ದಾರೆ.
ತ್ಯಾಜ್ಯಗಳಿಗೆ ಬೆಂಕಿ ಹಾಕುತ್ತಿರುವ ಪರಿಣಾಮ ಕಚೇರಿಯೊಳಗೆ ಸಿಬ್ಬಂದಿ ಕೆಲಸ ಮಾಡಲು ಅಸಾಧ್ಯವಾಗುತ್ತಿದೆ. ಮುಖಕ್ಕೆ ಕರವಸ್ತ್ರ ಇಟ್ಟುಕೊಂಡೆ ಕೆಲಸ ಮಾಡಬೇಕಾದ ಅನೀವಾರ್ಯತೆಗೆ ಸಿಬ್ಬಂದಿಗಳು ಸಿಲುಕಿದ್ದಾರೆ. ತ್ಯಾಜ್ಯ ಸಮಸ್ಯೆ ಪರಿಹಾರ ಮಾಡದ ನಗರ ಪಂಚಾಯತ್ ಅಧಿಕಾರಿಗಳಿಗೆ ಸಾರ್ವಜನಿಕರು ಪ್ರತಿರೋಧದ ಧ್ವನಿ ಎತ್ತುತ್ತಿದ್ದಾರೆ ಕಸವಿಲೇವಾರಿಗೆ ಅತ್ಯಂತ ನಿಧಾನಗತಿಯ ಉಪಕ್ರಮ ನಡೆಸುತ್ತಿರುವ ಅಧಿಕಾರಿಗಳು ಹಾಗೂ ಇಚ್ಛಾಶಕ್ತಿ ತೋರದೆ ತಮಗೂ ನಗರದ ಕಸಕ್ಕೂ ಸಂಬಂಧವೇ ಇಲ್ಲದಂತೆ ಇರುವ ಉನ್ನತ ಜನಪ್ರತಿನಿಧಿಗಳು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾಗಿ ಬಂದರೂ ಬರಬಹುದು.
ನಗರ ಪಂಚಾಯತ್‌ನ ಎದುರುಗಡೆ ವಾಹನ ನಿಲುಗಡೆಗಾಗಿ ನಿರ್ಮಿಸಲಾಗಿರುವ ದೊಡ್ಡ ಶೆಡ್‌ನಲ್ಲಿ ಹಸಿಕಸ-ಒಣಕಸ ವಿಂಗಡಿಸಲು ಆರಂಭಿಸಿ ಒಂದು ವರ್ಷ ಕಳೆದಿದೆ ಅಲ್ಲಿ ವಿಂಗಡಿಸಲ್ಪಟ್ಟ ಹಸಿಕಸವನ್ನು ಹಳೆಗೇಟಿನ ಸಮೀಪದ ವಿನೋದ್‌ಗ ಲಸ್ರಾದೊರವರ ತೋಟಕ್ಕೆ ಕೊಂಡೊಯ್ದು ಕಳೆದ ೧೧ತಿಂಗಳಿನಿಂದ ಹಾಕಲಾಗುತ್ತಿದೆ. ಹಸಿಕಸ-ಒಣಕಸ ಬೇರ್ಪಡಿಸಲು ಆರಂಭಿಸಿದ ಆರಂಭದಲ್ಲಿ ದೊರೆತ ಪ್ಲಾಸ್ಟಿಕ್‌ಗಳನ್ನು ಗೋಣಿಯಲ್ಲಿ ತುಂಬಿಸಿ ನ.ಪಂ. ಕಚೇರಿಯ ಹಿಂಬದಿ ಇರುವ ಹಳೆಯ ದಾಸ್ತಾನು ಕಟ್ಟಡದಲ್ಲಿ ದಾಸ್ತಾನು ಇಡಲಾಗಿದೆ. ಅದು ಅಲ್ಲಿ ತುಂಬಿ ಹೋಗಿದೆ. ನ.ಪಂ. ಎದುರಿನ ದೊಡ್ಡ ಶೆಡ್‌ನಲ್ಲಿ ಕಸ ತುಂಬಿ ತುಳುಕ ತೊಡಗಿದೆ. ಗಾಳಿ ಬಂದಾಗ ದುರ್ನಾತ ಮೂಗಿಗೆ ಬಡಿಯುತ್ತಿದೆ. ಸಂಜೆ ೫ ಗಂಟೆಯಾಗುತ್ತಿದ್ದಂತೆ ಸೊಳ್ಳೆಗಳು ಧಾಳಿ ಆರಂಭಿಸತೊಡಗಿವೆ. ಈಗ ನಗರ ಪಂಚಾಯತ್‌ನ ಹಿಂಬದಿಯ ಸ್ಥಳದಲ್ಲಿ ಕಸ ರಾಶಿ ಹಾಕಿದ್ದು, ಹಿಂಬದಿ ಹೋಗಿ ನೋಡಿದರೆ ಅಲ್ಲಿ ಹಾಕಲಾಗಿರುವ ಕಸದ ಅಗಾಧತೆ ಕಾಣಸಿಗುತ್ತದೆ. ನಗರ ಪಂಚಾಯತ್ ಕಚೇರಿಯ ಮುಂಬದಿ ಮತ್ತು ಹಿಂಬದಿ ಕಸ ತುಂಬಿ ಹೋಗಿದ್ದು, ಇದು ಅಧಿಕಾರ ವಹಿಸಿಕೊಳ್ಳಲಿರುವ ನೂತನ ನ.ಪಂ. ಆಡಳಿತಕ್ಕೆ ಬೃಹತ್ ಸವಾಲೊಂದನ್ನು ನಿಭಾಯಿಸಬೇಕಿದೆ.
ಮಳೆಗಾಲ ಆರಂಭವಾಗುವ ಮೊದಲು ಕಸದ ಸಮಸ್ಯೆಗೆ ಮುಕ್ತಿ ದೊರೆತೆರೆ ನೆಮ್ಮದಿ. ಇಲ್ಲದಿದ್ದರೆ ನಗರ ಪಂಚಾಯತ್ ಆವರಣದಲ್ಲಿ ಸಂಗ್ರಹವಾದ ಕಸ ಮತ್ತು ಕಸದ ನೀರು ಮಳೆ ನೀರಿನೊಂದಿಗೆ ಹೆದ್ದಾರಿ ಸೇರುವುದು ಖಚಿತ. ಮಳೆಗಾಲದ ಒಳಗೆ ಕಸ ವಿಲೇವಾರಿ ಆಗದೇ ಇದ್ದಲ್ಲಿ ನಗರದ ಜನತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದು ಕಂಡಿತ.
ಕಲ್ಚರ್ಪೆಯ ಸ್ಥಳಕ್ಕೆ ಕಸ ಕೊಂಡೊಯ್ಯಲು ಆಗದೆ ಸ್ಥಗಿತಗೊಳಿಸಿ ಒಂದು ವರ್ಷವಾದರೂ ಪರ್ಯಾಯ ಸ್ಥಳದ ಹುಡುಕಾಟ ಮತ್ತು ಕಸ ಬರ್ನಿಂಗ್ ಮಾಡುವ ಯಂತ್ರ ಅಳವಡಿಕೆ ಆಗದಿರುವುದು ಆಶ್ಚರ್ಯದ ವಿಚಾರ. ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಾಗವೂ ಆಗಿಲ್ಲ – ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಯಂತ್ರ ಕೂಡಾ ಬಂದಿಲ್ಲ. ನಗರ ಪಂಚಾಯತ್ ಚುನಾವಣೆ ಕಳೆದು ತಿಂಗಳು ಕಳೆದರೂ ಆಡಳಿತ ಮಂಡಳಿಯ ನೇಮಕವಾಗಿಲ್ಲ. ಇದರಿಂದ ಅಧಿಕಾರಿಗಳು ಅವರದೇ ಆಟ ಆಡುತ್ತಿದ್ದಾರೆ. ಅವರನ್ನು ಪ್ರಶ್ನಿಸುವವರು ಯಾರು ಇಲ್ಲದಂತಾಗಿದೆ. ಈಗ ತಹಶೀಲ್ದಾರರೇ ಆಡಳಿತಾಧಿಕಾರಿಯಾಗಿರುವ ಈಗಲಾದರೂ ಕಸಕ್ಕೆ ಸ್ಥಳ ಕಾದಿರಿಸುವ ಪ್ರಕ್ರಿಯೆ ನಡೆಯುವುದೇ ಎಂದು ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಚುನಾವಣೆಯ ಮೊದಲು ನಗರ ಪಂಚಾಯತ್ ನಲ್ಲಿ ಆಧಿಕಾರದಲ್ಲಿದ್ದ ಬಿಜೆಪಿ ಕಸ ಸಮಸ್ಯೆಗೆ ಮುಕ್ತಿ ನೀಡುವುದಾಗಿ ಚುನಾವಣಾ ಸಂದರ್ಭದಲ್ಲಿ ಹೇಳಿತ್ತು. ಆದರೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ೧೦ ತಿಂಗಳೂ ಕಳೆದರೂ ಕಸ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಆದರೆ ಈಗ ಪರಿಸ್ಥಿತಿ ಬಿಗಾಡಯಿಸಿದೆ. ನ.ಪಂ ಕಚೇರಿಯ ಮೂರು ಕಡೆ ಕಸ ರಾಶಿ ಹಾಕಲಾಗಿದೆ. ಅಲ್ಲದೇ ತ್ಯಾಜ್ಯಕ್ಕೆ ಬೆಂಕಿ ಹಾಕಿ ಪರಿಸರ ಮಾಲಿನ್ಯಕ್ಕೂ ಕಾರಣ ಆಗುತ್ತಿದ್ದಾರೆ. ಕಸ ಸಮಸ್ಯೆ ಪರಿಹಾರಕ್ಕೆ ಹಲವು ಬಾರಿ ಸಭೆಗಳಾದರೂ ಪ್ರಯೋಜನಾ ಆಗಿಲ್ಲ. ಕಸ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಬರಲು ಶಾಸಕರು ವಾರಣಾಸಿಗೆ ಹೋಗಿ ಬಂದು ಬರ್ನಿಂಗ್ ಮೆಶೀನ್ ಹಾಕುತ್ತೇನೆ ಎಂದರು. ಆದರೆ ಕಸ ಮಾತ್ರ ಅಲ್ಲೇ ಇದೆ. ನಗರದ ತ್ಯಾಜ್ಯ ಸಮಸ್ಯೆಯನ್ನು ಗಂಬೀರವಾಗಿ ತೆಗೆದುಕೊಂಡು ಅದನ್ನು ವಿಲೇವಾರಿ ಮಾಡುವ ಕೆಲಸ ಆಗಬೇಕು. ಕಸವನ್ನು ಇಟ್ಟುಕೊಂಡು ಹಲವಾರು ಮಂದಿ ಹಣ ಮಾಡಿದ್ದಾರೆ. ಮಳೆಗಾಲದ ಒಳಗೆ ಕಸಕ್ಕೆ ಮುಕ್ತಿ ನೀಡದಿದ್ದರೆ ನಗರದ ಜನತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
-ಎಂ. ವೆಂಕಪ್ಪ ಗೌಡ, ನಗರ ಪಂಚಾಯತ್ ಸದಸ್ಯರು, ಸುಳ್ಯ
ಸುಳ್ಯ ನಗರದಲ್ಲಿ ಸ್ಥಳವಾಕಾಶದ ಕೊರತೆಯಿಂದ ಕಸ ವಿಲೇವಾರಿ ಸಮಸ್ಯೆ ಬಿಗಾಡಯಿಸಿದೆ. ನ.ಪಂ ಆವರಣದಲ್ಲಿ ರಾಶಿ ಹಾಕಿರುವ ಒಣ ಕಸಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ಶಾಸಕರ ನಿರ್ದೇಶನದಂತೆ ಕಸ ಮುಕ್ತಿಗೆ ಕಸದಿಂದ ಗ್ಯಾಸ್ ಉತ್ಪತ್ತಿ ಮಾಡುವ ಯಂತ್ರ ಅಳವಡಿಸುವ ಚಿಂತನೆ ನಡೆಸಿದ್ದೇವೆ. ಇದಕ್ಕೆ ಈಗಾಗಲೇ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರವಾನಿಗೆ ನೀಡಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಒಪ್ಪಿಗೆ ಪಡೆದು ಟೆಂಡರ್ ಕರೆದು ಪ್ರಕ್ರಿಯೆ ಆರಂಭಿಸಲಾಗುವುದು. ಮುಂದಿನ ೨ ತಿಂಗಳ ಒಳಗೆ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡಲಾಗುವುದು
-ಮತ್ತಡಿ ಮುಖ್ಯಾಧಿಕಾರಿ, ನಗರ ಪಂಚಾಯತ್ ಸುಳ್ಯ