ಪ್ರತೀಕ್ ಕೋಟ್ಯಾನ್ ಮತ್ತವನ ಸಹಚರ ಅರೆಸ್ಟ್ | ನಾವೂರು ಕಪ್ಪು ಕಲ್ಲು ಅಕ್ರಮ ಗಣಿಗಾರಿಕೆ
ಬೆಳ್ತಂಗಡಿ, ನಾವೂರು : ಝೇವಿಯರ್ ಪಾಲೇಲಿ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಪ್ಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಪ್ರತೀಕ್ ಕೋಟ್ಯಾನ್ ಮತ್ತವನ ಓರ್ವ ಸಹಚರನನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಶ್ವಿಯಾಗಿದ್ದಾರೆ. ಮೊನ್ನೆ ಮಾರ್ಚ್ 19 ರಂದು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಅಲ್ಲಿಗೆ ಬೆಳ್ತಂಗಡಿ ತಹಶೀಲ್ದಾರರ ನೇತೃತ್ವದಲ್ಲಿ ದಾಳಿ ನಡೆದಿತ್ತು. ಆದರೆ ಜಗತ್ ಚಾಲಾಕಿ ಪ್ರತೀಕ್ ಕೋಟ್ಯಾನ್ ತನ್ನ ತಂಡದ ಜತೆ ಓಡಿ ತಪ್ಪಿಸಿಕೊಂಡಿದ್ದ.
ಆದರೆ ಆರೋಪಿಗಳ ಹೆಜ್ಜೆ ಜಾಡು ಹಿಡಿದು ಹೋದ ಬೆಳ್ತಂಗಡಿ ಪೊಲೀಸರು ಈಗ ಇಬ್ಬರನ್ನೂ ಎತ್ತಾಕಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಮುಖ್ಯ ಆರೋಪಿಯಾದ ಲಾಯಿಲ ನಿವಾಸಿ ಪ್ರತೀಕ್ ಕೋಟ್ಯಾನ್ ಸೇರಿದ್ದು ಮತ್ತೊಬ್ಬ ಆತನ ಸಹವರ್ತಿ ವೇಣೂರು ನಿವಾಸಿಯಾದ ಅಣ್ಣಪ್ಪ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಹಲವಾರು ಸಮಯಗಳಿಂದ ಈತ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ. ದಾಳಿ ಸಮಯ ಕಲ್ಲಿನ ಕೋರೆ ಸ್ಥಳದಲ್ಲಿ ಭಾರೀ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ವಯರ್ಗಳು, 11 ಜೀವಂತ ಮದ್ದುಗಳು, 15 ಚೀಲದಲ್ಲಿ ಜಿಲೆಟಿನ್ ಕಡ್ಡಿಗಳು, ಟ್ರಾಕ್ಟರ್, ಎರಡು ಹಿಟಾಚಿಗಳು ಸಹಿತ 25 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಾಹನ, ಹಿಟಾಚಿ ಮತ್ತು ಇತರ ಸೊತ್ತುಗಳನ್ನು ತಹಶೀಲ್ದಾರರು ಜಪ್ತಿ ಮಾಡಿದ್ದರು.
ಈ ಹಿಂದೆ ಪತ್ರಕರ್ತನಾಗಿ ಸ್ವಲ್ಪ ಸಮಯ ತೊಡಗಿಕೊಂಡಿದ್ದ ಪ್ರತೀಕ್ ಕೋಟ್ಯಾನ್, ಅಕ್ರಮ ಮರಳುಗಾರಿಕೆಯಲ್ಲೂ ಕೈಯಾಡಿಸಿ ಹೆಸರು ಕೆಡಿಸಿಕೊಂಡಿದ್ದ. ಬೆಳ್ತಂಗಡಿ ಉಪ ನಿರೀಕ್ಷಕ ನಂದ ಕುಮಾರ್, ಗಣಿ ಮತ್ತು ಭೂ ಗಣಿವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.