ಕೊರೊನಾ ಟೆಸ್ಟ್ | ದ.ಕ.ದ 17 ಜನರದ್ದು ನೆಗೆಟಿವ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 17 ಜನರ ಮಾದರಿ ನೆಗೆಟಿವ್ ಎಂದು ಪ್ರಯೋಗಾಲಯದ ವರದಿ ಬಂದಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದೆ ಇರುವುದರಿಂದ ಜಿಲ್ಲೆಯ ಜನತೆ ಸ್ವಲ ಮಟ್ಟಿಗೆ ನಿರಾಳವಾಗಿದೆ. ಆದರೆ ನೆರೆಯ ಕೇರಳ ಹಾಗೂ ಕೊಡಗಿನಲ್ಲಿ ಪಾಸಿಟಿವ್ ವರದಿಯಾಗಿರುವುದು ಆತಂಕಕ್ಕೆ ಎಡೆ ಮಾಡಿದೆ.
ಮಾ.20 ರಂದು ದ.ಕ.ದಿಂದ ಮತ್ತೆ 9 ಜನರ ಗಂಟಲ ದ್ರವದ ಸ್ಯಾಂಪಲ್‌ನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 36,951 ಜನರನ್ನು ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದ್ದು, ಮಾ.20ರಂದು 630 ಮಂದಿಯ ಥರ್ಮಲ್ ತಪಾಸಣೆ ನಡೆಸಲಾಗಿದೆ. ಇದುವರೆಗೆ ಒಟ್ಟು 1564 ಮಂದಿ ಮನೆಯಲ್ಲೇ 14 ದಿನಗಳ ನಿಗಾದಲ್ಲಿದ್ದಾರೆ.
ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ 14 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 10 ಮಂದಿಯ ಕ್ವಾರಂಟೈನ್ ಅವಧಿ ಮಾ.20 ಕ್ಕೆ ಮುಕ್ತಾಯಗೊಳಿಸಿದ್ದು, ಸೋಂಕಿನಿಂದ ಪಾರಾಗಿದ್ದಾರೆ.
ಐದು ಮಂದಿ ಶಂಕಿತರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರ ಮೇಲೆ ವೈದ್ಯಕೀಯ ನಿಗಾ ವಹಿಸಲಾಗಿದೆ.
ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡುತ್ತಿದ್ದು, ಈವರೆಗೆ 1,04,151 ಮನೆಗಳಿಗೆ ಭೇಟಿ ನೀಡಿ 4,00,148 ಮಂದಿಯನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
ವಿದೇಶಗಳಿಂದ ಬಂದವರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ.
ಇಂದಿನಿಂದ ಸೆಲೂನ್, ಬ್ಯೂಟಿ ಪಾರ್ಲರ್ ಬಂದ್
ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲೂ ಕೊರೋನಾ ಸೋಂಕು ಹರಡುವ ಭೀತಿ ಇರುವುದರಿಂದ ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ಮಾ.21ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮುಚ್ಚಬೇಕು.
ಈ ಕುರಿತು ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್ ಎಸೋಸಿಯೇಶನ್‌ಗಳು ಗಮನ ಹರಿಸಿ ಮುಚ್ಚಲು ಸಹಕರಿಸಬೇಕು ಎಂದು ಮಂಗಳೂರು ನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಎಸ್. ಆದೇಶ ಹೊರಡಿಸಿದ್ದಾರೆ.
ಆದರೆ ಕೆಲವೆಡೆ ಸ್ಥಳಿಯಾಡಳಿತವಾದ ಗ್ರಾ.ಪಂ.ಗಳು ಕೊರೊನಾ ಜಾಗೃತಿ ಗೆ ಇನ್ನೂಮುಂದಾಗಿಲ್ಲ,ತೀರಾ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಿಗೂ ಸಿಬಂದಿಗಳು ತಡವಾಗಿ ಬರುವ ಕುರಿತು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಲಾರಂಬಿಸಿದೆ.ಆರೋಗ್ಯ ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬೇಟಿ ನೀಡಿದ ಮೇಲೆ ಸಿಬಂದಿಗಳು ಆಗಮಿಸಿದ ಕುರಿತು ಮಾಹಿತಿ ಇದೆ.
ಕೊರೊನಾ ವೈರಸ್ ಹರಡದಂತೆ ಪ್ರತಿಯೊಬ್ಬ ಸ್ವಯಂ ನಿರ್ಬಂದ ಮಾಡಿಕೊಂಡು ಹೊರ ಸಂಚಾರ ಮಾಡದೆ ಮನೆಯಲ್ಲೇ ಇದ್ದರೆ ಹೆಚ್ಚು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ.