ಸಖತ್ ಸದ್ದು ಮಾಡಿದ Love mocktail
ವಿಮರ್ಶೆ: ? ಪದ್ಮಾ ಶಿವಮೊಗ್ಗ
ಹೀರೊ ಆಗಿ ಗುರುತಿಸಿಕೊಂಡಿದ್ದ ನಟ ಡಾರ್ಲಿಂಗ್ ಕೃಷ್ಣ ಮೊದಲ ನಿರ್ದೇಶನದ ಚಿತ್ರ ಲವ್ ಮಾಕ್‌ಟೇಲ್. ನಾಯಕನ ಹುಡುಗಿಯರ ಜತೆಗಿನ ಸ್ನೇಹ, ಪ್ರೀತಿ ಸುಂದರವಾದ ಹೂವುಗಳ ಬೊಕೆಯಂತೆ ಚಿತ್ರಿಸಿದ್ದಾರೆ. ಮೊದಲ ನಿರ್ದೇಶನದಲ್ಲೇ ಸೈ ಎನ್ನಿಸಿಕೊಂಡಿದ್ದಾರೆ ಕೃಷ್ಣ. ಹುಡುಗನೊಬ್ಬನ ಬದುಕಿನಲ್ಲಿ ಹಾದು ಹೋಗುವ ಪ್ರೇಮ ಕಥೆಗಳ ಪಯಣ ಈ ಚಿತ್ರದಲ್ಲಿದೆ.
ಕಾನ್ಸೆಪ್ಟ್ ಕಾರಣಕ್ಕೆ ಸುದೀಪ್ ನಟನೆಯ ಮೈ ಆಟೋಗ್ರಾಫ್ ಚಿತ್ರ ನೆನಪಾದರೂ, ನಿರೂಪಣೆ, ಮೇಕಿಂಗ್ ಸ್ಟೋರಿ ಹೇಳುವ ರೀತಿಯಿಂದಾಗ ಫ್ರೆಶ್ ಎನ್ನಿಸುತ್ತದೆ. ಇನ್ನೊಂದು ವಿಭಿನ್ನವಾದ ಲವ್ ಜರ್ನಿ ನೋಡಿದ ಅನುಭವ ಆಗುತ್ತದೆ. ಆದಿ (ಕೃಷ್ಣ)ನಿಗೆ ಶಾಲೆಯಲ್ಲಿ ಹುಟ್ಟುವ ಫಸ್ಟ್ ಲವ್, ಯೌವನಕ್ಕೆ ಕಾಲಿಟ್ಟಾಗ ಸಿಗುವ ಹುಡುಗಿಯೊಂದಿಗಿನ ಪ್ರೀತಿ, ನಂತರ ಪ್ರೀತಿಸದೇ ಮದುವೆಯಾದ ಹುಡುಗಿಯೊಂದಿಗಿನ ಪ್ರೀತಿ ಬಾಂಧವ್ಯ.. ಹೀಗೆ ಹಲವು ಹಂತಗಳಲ್ಲಿ ಹುಡುಗಿಯರು ಅವನ ಜೀವನದಲ್ಲಿ ಬಂದು ಹೋಗುತ್ತಾರೆ. ಪ್ರಯಾಣ ಮಾಡುವಾಗ ರಸ್ತೆಯಲ್ಲಿ ಸಿಕ್ಕ ಕಾಲೇಜು ಹುಡುಗಿ ಅದಿತಿ (ರಚನಾ) ಜತೆ ನಾಲ್ಕು ಗಂಟೆ ಟ್ರಾವೆಲ್ ಮಾಡುತ್ತಲೇ ಆದಿಯ ಬದುಕಿನ ಪುಟಗಳು ತೆರೆದು ಕೊಳ್ಳುತ್ತವೆ. ಹುಡುಗಿ ತಲುಪಬೇಕಾದ ಜಾಗ ಸಿಗುವ ಹೊತ್ತಿಗೆ ನಾಯಕ ಕೂಡಾ ತನ್ನ ಡೆಸ್ಟಿನೇಷನ್ ತಲುಪಿರುತ್ತಾನೆ.
ಚಿತ್ರ ತುಂಬಾ ಲವಲವಿಕೆಯಿಂದ ಮೂಡಿಬಂದಿದೆ. ರಿಯಲಿಸ್ಟಿಕ್ ಆಗಿ ಆಪ್ತವೆನ್ನಿಸುತ್ತದೆ. ಮೊದಲರ್ಧ ಪ್ರೇಕ್ಷಕನ ಮುಖದಲ್ಲಿ ಮಂದಹಾಸ ಮೂಡಿಸಿದರೆ, ದ್ವಿತಿಯಾರ್ಧದಲ್ಲಿ ಕೊನೆಕೊನೆಗೆ ಭಾವುಕನನ್ನಾಗಿ ಮಾಡುತ್ತದೆ. ಚಿತ್ರದ ಅವಧಿ ಸ್ವಲ್ಪ ದೀರ್ಘ ಎನ್ನಿಸುತ್ತದೆ. ದ್ವಿತಿಯಾರ್ಧದಲ್ಲಿ ಸ್ವಲ್ಪ ಕತ್ತರಿ ಪ್ರಯೋಗ ಆಗಿದ್ದರೆ ಚೆನ್ನಾಗಿರುತ್ತಿತ್ತು.
ಕೃಷ್ಣ ಮತ್ತು ಮಿಲನಾ ಜೋಡಿಯ ಲವ್ ಸ್ಟೋರಿ ದೀರ್ಘವಾಯಿತು. ಲವ್ ಡೋಸ್ ಜಾಸ್ತಿ ಎನ್ನಿಸುತ್ತದೆ. ಇಷ್ಟನ್ನು ಹೊರತುಪಡಿಸಿ ನೋಡಿದರೆ, ಹಿತವಾದ ಅನುಭವ ನೀಡುತ್ತದೆ. ಸ್ಕ್ರಿಪ್ಟ್, ಸ್ಕ್ರೀನ್‌ಪ್ಲೇ, ಡೈಲಾಗ್ ಎಲ್ಲವೂ ಚೆನ್ನಾಗಿದೆ. ಮೊದಲ ಬಾರಿಗೆ ಛಾಯಾಗ್ರಹಣ ಮಾಡಿರುವ ಶ್ರೀಕ್ರೇಜಿ‚ ಮೈಂಡ್ ಜೀವನದ ಬಗ್ಗೆ ಸೀರಿಯಸ್‌ನೆಸ್ ಇಲ್ಲದ ಹುಡುಗಿಯಾಗಿ ಅಮೃತಾ ಅಯ್ಯಂಗಾರ್, ನಿಧಿ ಪಾತ್ರದಲ್ಲಿ ಮಿಲನಾ ನಾಗರಾಜ್, ಗೆಳೆಯರಾದ ವಿಜಯ್, ಸುಷ್ಮಾ, ಟ್ರಾವೆಲ್‌ಮೇಟ್ ಆಗಿ ರಚನಾ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಕೃಷ್ಣ ಪ್ರತಿಯೊಂದು ಸನ್ನಿವೇಶದಲ್ಲೂ ಅತ್ಯುತ್ತಮವಾಗಿ ನಟಿಸಿ ಮೆಚ್ಚುಗೆ ಗಳಿಸುತ್ತಾರೆ. ಶಾಲೆಯ ಎಪಿಸೋಡ್‌ನಲ್ಲಿಯೂ ನಟರು ಅತ್ಯುತ್ತಮವಾಗಿ ನಟಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಮುದ ನೀಡೋದ್ರಲ್ಲಿ ಸಂಶಯವಿಲ್ಲ.
ಫ್ಯಾಮಿಲಿ ಸಮೇತ ನೋಡಿ ರಿಲ್ಯಾಕ್ಸ್ ಮಾಡಬಹುದಾದ ಚಿತ್ರ ಇದು.
https://youtu.be/BuKh35mtyzI