” ತರಕಾರಿ ಹಾಗೂ ಹಣ್ಣುಗಳ ಸ್ವಾವಲಂಬನೆ ಅತ್ಯಗತ್ಯ” | ಪುತ್ತೂರು ಹಣ್ಣು ಮೇಳ-2020 ಪ್ರಾತ್ಯಕ್ಷಿಕೆ ತಯಾರಿ ಉದ್ಘಾಟಿಸುತ್ತ ಡಾ.ಕೃಷ್ಣ ಭಟ್ ಕೊಂಕೋಡಿ

ಪುತ್ತೂರು : ಕರಾವಳಿಯಲ್ಲಿ ವಾಣಿಜ್ಯ ಬೆಳೆಗಳ ಭರಾಟೆ ಹೆಚ್ಚಾಗಿದೆ. ಇವುಗಳ ನಡುವೆ ಆಹಾರ ಬೆಳೆಗಳು ಮರೆಯಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಆಹಾರ ಬೆಳೆಗಳತ್ತ ಚಿತ್ತ ಹರಿಸಬೇಕಾದ ಅವಶ್ಯಕತೆ ಇದೆ. ಅತೀ ಮುಖ್ಯವಾಗಿ ಆರೋಗ್ಯಕ್ಕೆ ಅಗತ್ಯವಾದ ತರಕಾರಿ ಹಾಗೂ ಹಣ್ಣುಗಳಲ್ಲಿ ನಾವು ಸ್ವಾವಲಂಬನೆ ಸಾಧಿಸಬೇಕಿದೆ. ಈ ನೆಲೆಯಲ್ಲಿ ಕೃಷಿಕರನ್ನು ಜಾಗೃತಿಗೊಳಿಸುವ ಕಾರ್ಯವಾಗಬೇಕಿದೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ ಹೇಳಿದರು.

 

ಅವರು ನಿನ್ನೆ, ಶನಿವಾರದಂದು ಪುತ್ತೂರಿನ ಸುದಾನ ವಸತಿಯುತ ಶಾಲಾ ವಠಾರದಲ್ಲಿ ನಡೆದ ಕರ್ನಾಟಕ ಸರಕಾರ, ಐ ಐ ಎಚ್ ಆರ್, ತೋಟಗಾರಿಕಾ ಇಲಾಖೆ, ನವತೇಜ ಟ್ರಸ್ಟ್, ಪುತ್ತೂರು ಜೇಸಿಐ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಮೇ 23 ರಿಂದ 25 ರವರೆಗೆ ನಡೆಯುವ ಹಣ್ಣು ಮೇಳದಲ್ಲಿ ಕರಾವಳಿಯಲ್ಲಿ ಬೆಳೆಯುವ ವಿವಿಧ ತರಕಾರಿ ಬೆಳೆ ಹಾಗೂ ಹೂವು ಬೆಳೆಯ ಪ್ರಾತ್ಯಕ್ಷಿಕೆಗೆ ತರಕಾರಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ತರಕಾರಿ ಹಾಗೂ ಹಣ್ಣು ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಯುವುದರ ಜೊತೆಗೆ ಮಾರುಕಟ್ಟೆಯ ಕಡೆಗೂ ಗಮನಹರಿಸಬೇಕಾದ ಅಗತ್ಯವಿದೆ ಎಂದರು.

ಅತಿಥಿಯಾಗಿದ್ದ ವಿವೇಕಾನಂದ ಕಾಲೇಜು ನಿವೃತ್ತ ಪ್ರಾಂಶುಪಾಲ, ಸುದಾನ ಶಾಲಾ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಹಿಂದೆ ಗ್ರಾಮ ಸ್ವಾವಲಂಬನೆಯಲ್ಲಿ ಇತ್ತು. ತರಕಾರಿಯಿಂದ ತೊಡಗಿ ಭತ್ತದವರೆಗೆ ಎಲ್ಲವನ್ನೂ ಕೃಷಿಕರು ಬೆಳೆಯುತ್ತಿದ್ದರು, ಇದರಿಂದ ಆರೋಗ್ಯವೂ ಉತ್ತಮವಾಗಿತ್ತು. ಈಗ ಕಾಲ ಬದಲಾಗಿದೆ, ಈಗ ಆರೋಗ್ಯವೂ ಹದಗೆಡುತ್ತಿರುವುದಕ್ಕೆ ಸ್ವಾವಲಂಬನೆಯಿಂದ ಹೊರಬಂದಿರುವುದೇ ಕಾರಣವಾಗಿದೆ. ಈ ಸಂದರ್ಭದಲ್ಲಿ ಮತ್ತೆ ತರಕಾರಿ, ಹಣ್ಣು ಬೆಳೆಯುವ ಮೂಲಕ ಸ್ವಾವಲಂಬನೆಯತ್ತ, ಆರೋಗ್ಯವಂತ ಬದುಕಿನತ್ತ ಸಾಗಬೇಕಿದೆ ಎಂದರು.

ಪ್ರಸ್ತಾವನೆಗೈದ ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ, ಮೇ ತಿಂಗಳ ಅಂತ್ಯದಲ್ಲಿ ನಡೆಯುವ ತೋಟಗಾರಿಕಾ ಬೆಳೆಗಳ ಮೇಳಕ್ಕೆ ಸಮಸ್ತ ಜನರ ಹಾಗೂ ವಿಶೇಷವಾಗಿ ಕೃಷಿಕರ ಸಹಕಾರ ಅಗತ್ಯವಿದೆ ಎಂದರು. ಪ್ರಾತ್ಯಕ್ಷಿಕೆಯಲ್ಲಿ ಸುಮಾರು30 ಬಗೆಯ ತರಕಾರಿ ಬೆಳೆ , ಹೂವು ಕೃಷಿಯ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.

ನವ ತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಪುತ್ತೂರು ಹಣ್ಣು ಮೇಳ ಕಾರ್ಯಕ್ರಮ ನಿರ್ದೇಶಕ ಪ್ರಜ್ವಲ್ ರೈ ವಂದಿಸಿದರು. ನವತೇಜ ಟ್ರಸ್ಟ್ ಕಾರ್ಯದರ್ಶಿ ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.