ಕಡಬ | ನೂತನ ತಾಲೂಕು ಪಂಚಾಯತ್ ಕಛೇರಿಗೆ ಜಾಗ ಗುರುತು | ಎಪ್ರಿಲ್ ತಿಂಗಳಿನಿಂದ ತಾ. ಪಂ. ಕಛೇರಿ ಕಾರ್ಯಾರಂಭ
ಕಡಬ: ಕಡಬ ಪೇಟೆಯ ಸಮೀಪದ ಹಳೆಸ್ಟೇಷನ್ ಎಂಬಲ್ಲಿ ತಾಲೂಕು ಪಂಚಾಯತ್‌ಗೆ 1.15 ಎಕ್ರೆ ಜಾಗ ಗುರುತು ಮಾಡಲಾಗಿದ್ದು ಎಪ್ರಿಲ್ ತಿಂಗಳಿನಿಂದ ಹೊಸ ತಾಲೂಕು ಪಂಚಾಯತ್ ಕಛೇರಿ ಕಾರ್ಯಾರಂಭ ಮಾಡಲಿದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.
ಅವರು ಮಾ.6ರಂದು ಕಡಬ ಹಳೆಸ್ಟೇಷನ್‌ಗೆ ಭೇಟಿ ನೀಡಿ ಅಲ್ಲಿರುವ 2.30ಎಕ್ರೆ ಜಾಗದಲ್ಲಿ 1.15ಎಕ್ರೆ ತಾಲೂಕು ಪಂಚಾಯತ್ ರಚನೆಗೆ ಹಾಗೂ 1.15 ಎಕ್ರೆ ಪ್ರವಾಸಿ ಬಂಗಲೆ ನಿರ್ಮಣಕ್ಕೆ ಖಾದಿರಿಸುವ ಬಗ್ಗೆ ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರಿಕ್ಷಕ ಅವಿನ್ ರಂಗತ್ತಮಲೆ, ಪಿಡಬ್ಯೂಡಿ ಇಂಜಿನಿಯರ್ ಕಾನಿಷ್ಕ್, ಪಂಚಾಯತ್ ರಾಜ್ ಇಂಜಿನಿಯರ್ ಭರತ್, ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ, ಸದಸ್ಯರಾದ ಹಾಜಿ ಹನೀಪ್ ಕೆ.ಎಂ. ಗ್ರಾಮ ಸಹಾಯಕ ವಿಜಯ ಕುಮಾರ್, ಪ್ರಮುಖರಾದ ಡೆನ್ನಿಸ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.
ಎಪ್ರಿಲ್ ತಿಂಗಳಿನಿಂದ ತಾಲೂಕು ಪಂಚಾಯತ್ ಕಛೇರಿ ಕಾರ್‍ಯಾರಂಭ-ನವೀನ್ ಭಂಡಾರಿ
ಕಡಬ ತಾಲೂಕು ಪಂಚಾಯತ್ ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ಎಪ್ರಿಲ್ ತಿಂಗಳಿಂದ ಕಡಬ ಹೊಸ ತಾಲೂಕು ಪಂಚಾಯತ್ ಕಛೇರಿ ಕಾರ್ಯಾರಂಭ ಮಾಡಲಿದೆ, ಈಗಾಗಲೇ ಹಳೆಸ್ಟೇಷನ್‌ನಲ್ಲಿ ಜಾಗ ಗುರುತಿಸಲಾಗಿದ್ದು ಅಲ್ಲಿರುವ ಸರಕಾರಿ ಕಟ್ಟಡಗಳಲ್ಲಿ ನಾಲ್ಕು ಕಟ್ಟಡಗಳನ್ನು ದುರಸ್ತಿ ಮಾಡಲಾಗುತ್ತಿದ್ದು ಅದರಲ್ಲಿ ಕಚೇರಿಯನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲಾಗುತ್ತದೆ, ಬಳಿಕ ಹೊಸ ಕಟ್ಟಡಗಳು ರಚನೆಯಾದ ಬಳಿಕ ಪೂರ್ಣ ಪ್ರಮಾಣದ ಕಟ್ಟಡದಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಿಸಲಿದೆ ಎಂದರು.