ಮೇ ತಿಂಗಳಲ್ಲಿ ಗ್ರಾ.ಪಂ.ಚುನಾವಣೆ ? | ಗ್ರಾಮೀಣ ರಾಜಕೀಯಕ್ಕೆ ರಂಗ ತಾಲೀಮು ಶುರು
ಮುಂದಿನ 2 ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಘೊಷಣೆ ಆಗಲಿದ್ದು, ಗ್ರಾಮೀಣ ಭಾಗದಲ್ಲಿ ರಾಜಕೀಯದ ಚಟುವಟಿಕೆಗಳು ಬಿರುಸುಗೊಳ್ಳಲಿದೆ.
2015ರಲ್ಲಿ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಎಲ್ಲ ಗ್ರಾಪಂಗಳ ಮೊದಲ ಸಭೆ ನಡೆದಿತ್ತು. ಈ ವರ್ಷ ಇದೇ ಅವಧಿಗೆ ಗ್ರಾಪಂ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ.
ಹಾಗಾಗಿ, ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆಗಾಗಿ ಚುನಾವಣಾ ಆಯೋಗ ಈಗಾಗಲೇ ತಯಾರಿ ಪ್ರಾರಂಭಿಸಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳ ಮೊದಲ ಹಂತದ ಸಭೆ ನಡೆದಿದೆ. ಜಿಲ್ಲೆಯಲ್ಲಿ ಗ್ರಾಪಂಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಮತದಾರರ ಪಟ್ಟಿ ಪ್ರಕಟಿಸಬೇಕಿದೆ.
ತಾಲೂಕು ಹಂತದಲ್ಲಿ ಗ್ರಾಪಂಗಳ ಪ್ರತಿ ಕ್ಷೇತ್ರದ ಮೀಸಲಾತಿ ನಿಗದಿ ಮಾಡಬೇಕಿದೆ. ಈ ಎಲ್ಲ ವಿಷಯಗಳ ಬಗ್ಗೆ ರ್ಚಚಿಸಲಾಗಿದೆ. ಜಿಲ್ಲೆಯಲ್ಲಿ ಹಿಂದಿನಂತೆ ಮತ ಪೆಟ್ಟಿಗೆಯ ಮೂಲಕವೇ ಮತದಾನ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಬಾರಿ ನೂತನ ಗ್ರಾ.ಪಂ ರಚನೆ ಇಲ್ಲ ಎಂಬ ಮಾಹಿತಿ ಇದೆ.
ಗ್ರಾಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನೇರವಾದ ಸಹಭಾಗಿತ್ವ ಇಲ್ಲ. ಯಾವುದೇ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸುವ ಅವಕಾಶವಿಲ್ಲ. ಆದರೆ, ಅತಿ ಹೆಚ್ಚು ರಾಜಕೀಯ ಇಲ್ಲೇ ಕಾಣಿಸುತ್ತಿದೆ.
ಒಂದೆರಡು ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಆಕಾಂಕ್ಷಿಗಳು ತಯಾರಿ ನಡೆಸಿದ್ದಾರೆ.
ರಸ್ತೆ, ಚರಂಡಿ, ಉದ್ಯೋಗ ಖಾತ್ರಿಯಲ್ಲಿ ವೈಯಕ್ತಿಕ ಕೆಲಸ… ಹೀಗೆ ವಿವಿಧ ಸೌಲಭ್ಯ ಕೊಡಿಸುವ ಕೆಲಸ ಮಾಡುತ್ತಿದ್ದಾರೆ.
ಗ್ರಾಪಂ ಚುನಾವಣೆಯ ವಿಶೇಷ ರಾಜಕೀಯ ಪಕ್ಷಗಳ ಚಿಹ್ನೆಯಡಿ ನಡೆಯುವಂತಹುದ್ದು ಅಲ್ಲ. ಗ್ರಾ.ಪಂ.ಗೆ ಬ್ಯಾಲೆಟ್ ಪೇಪರ್ನ ಮೂಲಕವೇ ಚುನಾವಣೆ ನಡೆಯಲಿದೆ.
ಜಿಪಂ, ತಾಪಂಗಳಿಗಿಂತ ಗ್ರಾಪಂಗೆ ನೇರವಾಗಿ ಅನುದಾನ ಬರುವುದರಿಂದ ಗ್ರಾಪಂ ಸದಸ್ಯರಾಗಲು ಹೆಚ್ಚಿನವರು ಆಸಕ್ತಿ ಹೊಂದಿದ್ದಾರೆ.ಅಲ್ಲದೆ ಗ್ರಾ.ಪಂ.ಚುನಾವಣೆಯಲ್ಲಿ ವೈಯಕ್ತಿಕ ಅಭಿಪ್ರಾಯ ಉತ್ತಮ ಇರುವ ಅಭ್ಯರ್ಥಿಗಳು ಮತದಾರರಿಗೆ ಹತ್ತಿರ ವಾಗುತ್ತಾರೆ.ಅಲ್ಲದೇ ಅಧಿಕಾರದ ದರ್ಪ ಪ್ರದರ್ಶಿಸುವವರಿಗೆ ಹಿನ್ನೆಡೆಯಾಗಲಿದೆ.
ಈಗ ಕೊನೆಯ ಗ್ರಾಮ ಸಭೆಯ ಅವಧಿ.ಪ್ರಸ್ತುತ ಇರುವ ಗ್ರಾ.ಪಂ ಸದಸ್ಯರು ಜನರನ್ನು ಆಕರ್ಷಿಸಲು ಹೊಸ ಹೊಸ ಮಾರ್ಗವನ್ನು ಕಂಡು ಹಿಡಿಯುತ್ತಿದ್ದಾರೆ.
ಮೀಸಲಾತಿ : ಈ ಬಾರಿಯೂ ಅಭ್ಯರ್ಥಿತನಕ್ಕೆ ಮೀಸಲಾತಿ ಬದಲಾಗಲಿದೆ ಎಂಬ ಮಾಹಿತಿ ಇದೆ.ಆದರೆ ಅಧಿಕೃತ ಮಾಹಿತಿ ಇನ್ನೂ ದೊರೆತಿಲ್ಲ. ಅಧ್ಯಕ್ಷ/ಉಪಾಧ್ಯಕ್ಷ ರ ಅವಧಿ 5 ವರ್ಷಗಳು ಇರಲಿದೆ.ಈ ಮಧ್ಯೆ ರಾಜಿನಾಮೆ,ಅವಿಶ್ವಾಸ ಗೊತ್ತುವಳಿಯಾದರೆ ಮಾತ್ರ ಪದತ್ಯಾಗವಾಗಲಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಮಹಿಳೆಯರಿಗೆ ವಿಶೇಷ ಮೀಸಲಾತಿ ಇರಲಿದೆ.ಹೊಸ ತಾಲೂಕಿನಲ್ಲಿಯೂ ಮುಂದಿನ ತಾ.ಪಂ.ರಚನೆಯ ಹಿನ್ನೆಲೆಯಲ್ಲಿ ಗ್ರಾ.ಪಂ.ಚುನಾವಣೆ ಸಂದರ್ಭದಲ್ಲಿಯೇ ಕೆಲವೊಂದು ಆವಶ್ಯಕ ಮಾರ್ಪಾಡುಗಳನ್ನು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.