ಪಾರ್ಟಿ ಮಾಡಿದ ಗೆಳೆಯರೇ ಕೊಂದರೇ ? : ಮೈಸೂರು ಬಿಜೆಪಿ ಮುಖಂಡನ ಹತ್ಯೆ, ಹಳೆ ವೈಷಮ್ಯದ ಶಂಕೆ

ಮೈಸೂರು, ಮಾರ್ಚ್ 06 : ಮೈಸೂರು ನಗರದಲ್ಲಿ ಬಿಜೆಪಿ ಮುಖಂಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

 

ಕೊಲೆಯಾದ ಎಸ್. ಆನಂದ್ ಮೈಸೂರು ನಗರ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿದ್ದರು. ಶುಕ್ರವಾರ ಬೆಳಗ್ಗೆ ಕುವೆಂಪು ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆಯಾಗಿದೆ.

ಗುರುವಾರ ರಾತ್ರಿ ಆನಂದ್ ಅವರ ಮನೆಯಲ್ಲಿ ಸ್ನೇಹಿತನ ಹುಟ್ಟು ಹಬ್ಬದ ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ಯಾವುದೋ ವಿಚಾರಕ್ಕೆ ಜಗಳ ನಡೆದು ಅದು ಅತಿರೇಕಕ್ಕೆ ಹೋಗಿ ಆನಂದ್ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ಮೂರು ಅಥವ ನಾಲ್ಕು ಜನರ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಎಸ್. ಆನಂದ್ ಹತ್ಯೆ  ಮಾಡಿದ್ದಾರೆ ಎಂದು ಶಂಕಿಸಲಾಗಿದೆ.  ಹತ್ಯೆಗೆ ಬಿಯರ್ ಬಾಟಲ್‌ ಅನ್ನು ಕೂಡಾ ಬಳಸಿದ್ದು ಬಾಟಲಿನಿಂದ ಹಲವು ಬಾರಿ ಚುಚ್ಚಿ ಹತ್ಯೆ ಮಾಡಲಾಗಿದೆ.  

ಈಗ ಕೊಲೆಯಾದ ಆನಂದ್ ಅವರು ಈ ಹಿಂದೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಅವರು 13 ವರ್ಷಗಳ ಹಿಂದೆ ಕುಮಾರಸ್ವಾಮಿ ಎನ್ನುವವರ ಕೊಲೆ ಆಪಾದನೆಯ ಮೇಲೆ ಜೈಲು ಸೇರಿದ್ದರು. ಈ ಹಳೆ ವೈಷಮ್ಯವೇ ಆನಂದ್ ಅವರ ಕೊಲೆಗೆ ಕಾರಣ ಎಂದು ಬಲವಾಗಿ ಶಂಕಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ಸಂಬಂಧ ಓರ್ವ ಶಂಕಿತ ಕೊಲೆಗಾರನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Leave A Reply

Your email address will not be published.