ಪುತ್ತೂರು | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸಿಡಿಮದ್ದು ಸ್ಫೋಟದ ಭಾರೀ ಸದ್ದು | ಪಕ್ಕ ಕಾರೊಂದರ ಗಾಜು ಪುಡಿ ಪುಡಿ | ಆಶ್ಚರ್ಯಾತಂಕದಲ್ಲಿ ಜನ
ಪುತ್ತೂರಿನಲ್ಲಿ ನಿನ್ನೆ ರಾತ್ರಿ ನಡೆದ ಎರಡು ಘಟನೆಗಳು ಜನರನ್ನು ಸ್ವಲ್ಪ ಆತಂಕಕ್ಕೆ ಮತ್ತು ಆಶ್ಚರ್ಯಕ್ಕೆ ನೂಕಿವೆ. ನಿನ್ನೆ ರಾತ್ರಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಯಾರೋ ಅಪರಿಚಿತರು ಕಾರಿನಲ್ಲಿ ಬಂದು ದೇವಸ್ಥಾನದ ಪಕ್ಕ ಸಿಡಿಮದ್ದು ಸಿಡಿಸಿ ಪರಾರಿಯಾಗಿದ್ದಾರೆ. ಮತ್ತೊಂದು ಕಡೆ ಅಲ್ಲೇ ಪಕ್ಕ ಕಾರೊಂದರ ಗಾಜನ್ನು ಪುಡಿ ಪುಡಿ ಮಾಡಲಾಗಿದೆ.
ಘಟನೆ -1
ಈ ಘಟನೆಯು ಸುಮಾರು 11.30 ರ ಸುಮಾರಿಗೆ ನಡೆದಿದ್ದು ಭಾರಿ ಸದ್ದಿಗೆ ಅಲ್ಲಿನ ಸುತ್ತಮುತ್ತಲ ಮನೆಗಳ ಜನರು ಆತಂಕಗೊಂಡರು. ಸದ್ದಿನ ಸುದ್ದಿ ತಿಳಿದ ದೇವಳದ ಆಡಳಿತ ಮಂಡಳಿಯಲ್ಲಿರುವ ಮತ್ತು ವಾಸ್ತು ಶಾಸ್ತ್ರಜ್ಞ ಮತ್ತು ನಗರ ಸಭಾ ಸದಸ್ಯರೂ ಆದ ಶ್ರೀ ಜಗನ್ನಿವಾಸ್ ರಾವ್ ಅವರು ಭೇಟಿ ನೀಡಿದ್ದರು. ಪೊಲೀಸರೂ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಘಟನೆ -2
ನಿನ್ನೆ ಮಧ್ಯರಾತ್ರಿ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನ ಗಾಜು ಪುಡಿಮಾಡಲಾಗಿದೆ. ಅಷ್ಟೇ ಅಲ್ಲದೆ ಕಾರಿನ ಒಳಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಪುಡಿಗಟ್ಟಿದ ಗಾಜಿನ ಮೂಲಕ ಒಳಗೆ ಹಾಕಲಾಗಿದೆ. ಆವೇಳೆ, ಸ್ಪೋಟಕ ಸಿಡಿಸಿದ ಸದ್ದಿಗೆ (ಘಟನೆ-1) ಬಂದ ತಂಡವು ಕಾರಿನ ಗಾಜು ಪುಡಿಗಟ್ಟಿದ ವ್ಯಕ್ತಿಯನ್ನು ಹಿಡಿದುಕೊಂಡಿದ್ದಾರೆ. ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದು ಯಾವುದೇ ದುಷ್ಕೃತ್ಯದ ಉದ್ದೇಶವಿಲ್ಲದೆ ಭ್ರಮಿತನಾಗಿ ಈ ಕೃತ್ಯ ಕೈಗೊಂಡಿದ್ದಾನೆಂದು ತನಿಖೆಯಿಂದ ತಿಳಿದು ಬಂದಿದೆ. ಆತನನ್ನು ಗಣೇಶ್ ಎಂದು ಗುರುತಿಸಲಾಗಿದ್ದು, ಮೊದಲು ಆತನನ್ನು ಠಾಣೆಯಲ್ಲಿ ವಿಚಾರಣೆ ನಡೆಸಿ, ಆ ನಂತರ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ.
ಮೇಲಿನ ಎರಡೂ ಘಟನೆಗಳು ಹೆಚ್ಚು ಕಮ್ಮಿ, ಮೂವತ್ತು ನಿಮಿಷದ ಅಂತರದಲ್ಲಿ ನಡೆದಿದ್ದು ಮಾನಸಿಕ ಅಸ್ವಸ್ಥನೇ ಸ್ಪೋಟಕ ಸಿಡಿಸಿದನಾ ಎಂಬ ಅನುಮಾನ ಕೂಡಾ ಜನರಲ್ಲಿದೆ. ಸ್ಪೋಟಕ ಸಿಡಿಸಿದವರಾರು ಎಂಬ ತನಿಖೆ ನಡೆಯುತ್ತಿದೆ. ಅದರಿಂದಷ್ಟೇ ಸತ್ಯ ಗೊತ್ತಾಗಲಿದೆ.