ಕಡಬ | ಶಂಕಿತ H1N1ಗೆ ಒಂದು ಬಲಿ

ಕಡಬ: ಮಂಗಳೂರಿನಲ್ಲಿ ಖಾಸಗಿ ಬಸ್‌ ಚಾಲಕರಾಗಿದ್ದ 102 ನೆಕ್ಕಿಲಾಡಿ ಗ್ರಾಮದ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ (50) ಅವರು ಶಂಕಿತ ಎಚ್‌1ಎನ್‌1 ಜ್ವರದಿಂದಾಗಿ ಮಂಗಳವಾರ ಬೆಳಗ್ಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

20 ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು ಆರಂಭದಲ್ಲಿ ಕಡಬ ಹಾಗೂ ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ವಾರದ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದ ಅವರನ್ನು ಅಲ್ಲಿಂದ ಅದೇ ದಿನ ದೇರಳಕಟ್ಟೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಆಗಲಿದ್ದಾರೆ. ಕುಶಾಲಪ್ಪ ಅವರು ಎಚ್‌1ಎನ್‌1 ಜ್ವರದಿಂದಾಗಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಅವರ ಮನೆಯ ಪರಿಸರದಲ್ಲಿ ಭೀತಿಗೆ ಕಾರಣವಾಗಿದೆ.

ಡಿಎಚ್‌ಒ ಹೇಳಿಕೆ

ಕುಶಾಲಪ್ಪ ಗೌಡ ನ್ಯುಮೋನಿಯಾ ದಿಂದ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿ ಬಂದಿದೆ. ವೈರಲ್‌ ನ್ಯುಮೋನಿಯಾದಲ್ಲಿಯೂ ಎಚ್‌1ಎನ್‌1 ಜ್ವರದ ರೀತಿಯ ಗುಣಲಕ್ಷಣಗಳು ಕಂಡು ಬರುವುದರಿಂದಾಗಿ ಗೊಂದಲ ಉಂಟಾಗಿದೆ. ಪರಿಸರದ ಜನರು ಭಯಪಡಬೇಕಾಗಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಸಿಕಂದರ್‌ ಪಾಷಾ ಅವರು ತಿಳಿಸಿದ್ದಾರೆ.

ಆದರೆ ಈಗಾಗಲೇ ಕೋರೋನಾ ವ್ಯಾಧಿಯ ಭೀತಿಯಿಂದ ಭಯಗ್ರಸ್ತ ಜನರು ಈಗ ಎಚ್‌1ಎನ್‌1 ಹರಡುವ ಬಗ್ಗೆ ಆತಂಕಗೊಂಡಿದ್ದಾರೆ.

Leave A Reply

Your email address will not be published.