ಕೋಟಿ-ಚೆನ್ನಯರ ಆರಾಧ್ಯ ದೇವರಾದ ಕೆಮ್ಮಲೆ ಶ್ರೀ ನಾಗಬ್ರಹ್ಮರಿಗೆ ಜೀರ್ಣೋದ್ದಾರ ಸಂಭ್ರಮ
ಕಾರಣಿಕ ಸತ್ಯ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರ ಕುಲದೇವರಾದ ಎಣ್ಮೂರು ಗ್ರಾಮದ ಹೇಮಳದ ಕೆಮ್ಮಲೆ ಶ್ರೀ ನಾಗಬ್ರಹ್ಮ, ಶ್ರೀ ಬ್ರಹ್ಮರು ಮತ್ತು ಉಳ್ಳಾಕ್ಲು, ಪರಿವಾರ ದೈವಗಳ ಮೂಲಸ್ಥಾನ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದೆ.
ಸುಮಾರು ಐದು ನೂರು ವರುಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೋಟಿ-ಚೆನ್ನಯರ ಆದಿ ಗರಡಿ ಎಣ್ಮೂರಿನ ನಾಗಬ್ರಹ್ಮ ಕೋಟಿ-ಚೆನ್ನಯ ಕ್ಷೇತ್ರದಿಂದ 2 ಕಿ.ಮೀ. ದೂರದಲ್ಲಿರುವ ಎಣ್ಮೂರು ಗ್ರಾಮದ ಕೆಮ್ಮಲೆ (ಹೇಮಳ) ಕ್ಷೇತ್ರದಲ್ಲಿ ಈಗ ಜೀರ್ಣೋದ್ಧಾರದ ಸಂಭ್ರಮ.
ಅಪಾರ ಭಕ್ತ ಸಮುದಾಯದ ನಂಬಿಕೆವುಳ್ಳ ಈ ನೆಲದಲ್ಲಿ ಊರ-ಪರವೂರ ಭಕ್ತರ ಸಮಾಗಮ ಹಾಗೂ ಸರಕಾರದ ನೆರವಿನೊಂದಿಗೆ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

1.25 ಕೋಟಿ ರೂ. ವೆಚ್ಚ
ಶಿಥಿಲಾವಸ್ಥೆಯಲ್ಲಿದ್ದ ಸಾನ್ನಿಧ್ಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಊರವರು ಮುಂದಾಗಿ ದೈವಜ್ಞರಾದ ಶ್ರೀಧರನ್ ಪೆರುಂಬಾಳ್ ಮತ್ತು ಲಕ್ಷ್ಮೀನಾರಾಯಣ ಅಮ್ಮಂಗೋಡು ನೇತೃತ್ವದಲ್ಲಿ ಪ್ರಶ್ನಾ ಚಿಂತನೆ ಇರಿಸಿ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಡಿ ಇಡಲಾಯಿತು. ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು 2016ರ ಡಿಸೆಂಬರ್ 21 ಮತ್ತು 25ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಕೆಮ್ಮಲೆ ಮೂಲಸ್ಥಾನದಲ್ಲಿ ಸರ್ಪಸಂಸ್ಕಾರ, ದೇವರ ಅನುಜ್ಞಾ ಕಲಶ ಮೊದಲಾದ ದೇವತಾ ಕಾರ್ಯಗಳು ನಡೆದಿವೆ.

ವಾಸ್ತು ಶಿಲ್ಪಿ ಎಸ್.ಎಂ. ಪ್ರಸಾದ್ ಮುನಿಯಂಗಳ ಮಾರ್ಗದರ್ಶನದಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 28 ಲಕ್ಷ ರೂ. ವೆಚ್ಚದಲ್ಲಿ ಶಿಲಾಮಯ ನಾಗಬ್ರಹ್ಮ ದೇವಸ್ಥಾನ, 8 ಲಕ್ಷ ರೂ. ವೆಚ್ಚದಲ್ಲಿ ಬ್ರಹ್ಮರಗುಂಡ, 8 ಲಕ್ಷ ರೂ. ವೆಚ್ಚದಲ್ಲಿ ಚಾಮುಂಡಿ ದೇವಸ್ಥಾನ, 10 ಲಕ್ಷ ರೂ. ವೆಚ್ಚದಲ್ಲಿ ಉಳ್ಳಾಕ್ಲು ಭಂಡಾರದ ಬೀಡು, 15 ಲಕ್ಷ ರೂ. ವೆಚ್ಚದಲ್ಲಿ ಉಳ್ಳಾಕ್ಲು ಮಾಡ, 35 ಲಕ್ಷ ರೂ. ವೆಚ್ಚದಲ್ಲಿ ಗೋಪುರ, ನಾಗಾಲಯ ಸಹಿತ ವಿವಿಧ ಕಟ್ಟೆಗಳ ನಿರ್ಮಾಣ ಕಾಮಗಾರಿಗೆ 1.25 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ಅದರಂತೆ ಕೆಲಸ ಕಾರ್ಯ ಸಾಗುತ್ತಿದೆ.ಇದಕ್ಕಾಗಿ ಕರ್ನಾಟಕ ಸರಕಾರದಿಂದ 45 ಲಕ್ಷ ಅನುದಾನ ಮಂಜೂರು ಗೊಂಡಿದೆ.

ತಾಯಿಯ ಹರಕೆ ತೀರಿಸಲು ಬಂದರು
ಪಡುಮಲೆ ಬಲ್ಲಾಳರ ಬೀಡಿನಿಂದ ಹೊರಟು ಬಾಕಿಮಾರು ಗದ್ದೆಯ ಮೂಲಕ ಇಳಿದು ಬಂದ ಕೋಟಿ-ಚೆನ್ನಯರು ಪಂಜ ಸೀಮೆಗೆ ಪ್ರವೇಶಿಸಿದರು.
ಎಣ್ಮೂರಿನಲ್ಲಿರುವ ಕೋಟಿ-ಚೆನ್ನಯರ ಸಮಾಧಿ ಸ್ಥಳ, ಅಕ್ಕ ಕಿನ್ನಿದಾರು ಮನೆ – ಹೀಗೆ ಪರಿಸರದಲ್ಲಿ ಹತ್ತಾರು ಕುರುಹುಗಳು ಇಲ್ಲಿ ಈ ವೀರ ಕಾರಣಿಕ ಶಕ್ತಿಗಳು ಸಂಚರಿಸಿದ್ದಕ್ಕೆ ಸಾಕ್ಷಿಯಂತಿವೆ. ಇದರಲ್ಲಿ ಕೆಮ್ಮಲೆ ನಾಗ ಬ್ರಹ್ಮಸ್ಥಾನವೂ ಒಂದು. ಬಲ್ಲಾಳರ ಕಾಲದಲ್ಲಿ ತಾಯಿ ದೇಯಿ ಬೈದ್ಯೆತಿ ಹೇಳಿದ ಹರಕೆ ತೀರಿಸಲೆಂದು ಕೋಟಿ-ಚೆನ್ನಯರು ಕೆಮ್ಮಲೆ ನಾಗಬ್ರಹ್ಮನ ಕ್ಷೇತಕ್ಕೆ ಬರುತ್ತಾರೆ.
ಆದರೆ ಅದಾಗಲೆ ನಾಗಬ್ರಹ್ಮನ ಪೂಜೆ ಮುಗಿಸಿ ಬರುವ ಅರ್ಚಕರು ಎದುರಾದರು. ನಮ್ಮ ತಾಯಿ ಹೇಳಿದ ಹರಕೆಯನ್ನು ಸಲ್ಲಿಸಬೇಕಾಗಿದೆ, ತಾವು ಬರಬೇಕೆಂದು ಕೇಳಿಕೊಂಡರು. ನಾನು ಪೂಜೆ ಮಾಡಿ ಬಾಗಿಲು ಹಾಕಿದ್ದೇನೆ. ನಾಳೆ ಬನ್ನಿ ಎಂದು ಹೇಳಿ ಅರ್ಚಕ ತನ್ನ ದಾರಿ ಹಿಡಿದರು. ಆದರೆ ಕೋಟಿ-ಚೆನ್ನಯರು ಅರ್ಧ ದಾರಿಯಿಂದ ತಿರುಗಿ ಹೋಗಲಾರೆವೆಂದು ಹೇಳಿ ಮುಂದಕ್ಕೆ ತೆರಳಿದರು.

ನಂದಾದೀಪ ಉರಿಯಿತು
ನಾಗಬ್ರಹ್ಮನ ಗುಡಿಯ ಎದುರಿನಲ್ಲಿ ನಿಂತು ನಾವು ಸತ್ಯದಲ್ಲಿ ಹುಟ್ಟಿ ಸತ್ಯದಲ್ಲಿ ಬೆಳೆದವರಾದರೆ ಬಾಗಿಲು ತೆರೆದು ನಂದಾದೀಪ ಉರಿಯಲಿ ಎಂದು ಪ್ರಾರ್ಥನೆ ಮಾಡಿದರು. ಕೆಲವೇ ಕ್ಷಣಗಳಲ್ಲಿ ಬಾಗಿಲು ತೆರೆಯಿತು. ನಂದಾದೀಪ ಬೆಳಗಿತು. ನಾಗಬ್ರಹ್ಮರೇ ಅರ್ಚಕರ ವೇಷದಲ್ಲಿ ಪೂಜೆ ಸಲ್ಲಿಸಿದರು. ಕೋಟಿ-ಚೆನ್ನಯರು ನಾಗಬ್ರಹ್ಮರಿಗೆ ಮುಷ್ಟಿ ತುಂಬ ಹಣ, ಬುಟ್ಟಿ ತುಂಬ ಹೂವು ಅರ್ಪಿಸಿ ಗುಡಿಗೆ ಪ್ರದಕ್ಷಿಣೆ ಬಂದು, ಅಡ್ಡಬಿದ್ದು ಹರಕೆ ಸಂದಾಯ ಮಾಡಿದರು. ತೆರೆದ ಬಾಗಿಲು ಹಾಕಿಕೊಂಡಿತು, ದೀಪ ಸಣ್ಣದಾಯಿತು. ಕೋಟಿ-ಚೆನ್ನಯರು ಎಣ್ಮೂರು ಬೀಡಿಗೆ ಸೇರಿದ ಮೇಲೂ ನಾಗಬ್ರಹ್ಮನ ದರ್ಶನ ಪಡೆಯುತ್ತಲೇ ಇದ್ದರು ಎನ್ನುತ್ತದೆ ಇಲ್ಲಿನ ಇತಿಹಾಸ.

ಕೆಮ್ಮಲೆ ಕ್ಷೇತ್ರ ಇತಿಹಾಸ ಪ್ರಸಿದ್ಧವಾಗಿದ್ದು, ಜಿಲ್ಲೆ, ಹೊರ ಜಿಲ್ಲೆಗಳಿಂದ ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ವೀರ ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯರ ಕುಲದೇವರಾದ ನಾಗಬ್ರಹ್ಮನ ಕಾರಣಿಕ ಕ್ಷೇತ್ರ ಇದಾಗಿದೆ. ಜೀರ್ಣೋದ್ಧಾರ ಪ್ರಗತಿಯಲ್ಲಿದೆ.