ಬೆಳ್ತಂಗಡಿ, ಪುತ್ತೂರು, ವಿಟ್ಲ, ಮಂಗಳೂರು ಮಳೆ ಜೋರು : ಖುಷಿಗೊಂಡ ಜನರ ಬಾಯಲ್ಲಿ ಹೊಸ ಮಳೆ ಹಾಡು
ಮೊನ್ನೆಯೆಲ್ಲ ವಿಟ್ಲ ಪುತ್ತೂರು ಉಪ್ಪಿನಂಗಡಿ ಮತ್ತು ಕಡಬದ ಕೆಲವೆಡೆ ಜೋರು ಮಳೆ ಸುರಿದಿತ್ತು. ವಿಟ್ಲದಲ್ಲಿ ಸಣ್ಣ ಮಟ್ಟದ ಬೊಳ್ಳವೆ ಬಂದಿತ್ತು. ಜನ ಇನ್ನೆರಡು ದಿನ ತೋಟಕ್ಕೆ ನೀರು ಹಾಕುವ ಮಂಡೆ ಬೆಚ್ಚ ಇಲ್ಲ ಅಂತ ಸಂತಸ ಪಟ್ಟಿದ್ದರು. ಅಲ್ಲದೆ, ಧಗಧಗಿಸುವ ಸೂರ್ಯಾಗ್ನಿಯ ತಾಪಕ್ಕೆ ಬಸವಲಿದವರು, ಆ ದಿನದ ಅನಿರೀಕ್ಷಿತ ಮಳೆ ಕಂಡು ‘ ಇಂದೇಕೋ ಸ್ವಲ್ಪ ಹಿತವೆನಿಸಿದೆ ‘ ಎಂದು ಹಾಡು ಗುನುಗಿಕೊಂಡಿದ್ದರು.
ಅವತ್ತು ಬೆಳ್ತಂಗಡಿ ತಾಲೂಕಿನ ಜನ ತುಂಬಾ ಬೇಸರ ಮಾಡಿಕೊಂಡಿದ್ದರು. ಎಲ್ಲ ಕಡೆ ಮಳೆ ಬಂತು, ನಮಗ್ಯಾಕೆ ಇಲ್ಲ ಅಂತ ಆಕಾಶ ನೋಡಿದ್ದರು.
ಇಂದು ವರುಣನ ಸಂಚಾರ ಬೆಳ್ತಂಡಿಯ ಕಡೆಗೆ. ಇಂದು ಮುಂಜಾನೆ ಸರಿಯಾಗಿ ಐದು ಗಂಟೆಗೆ ಎಲ್ಲರ ಮನೆಯ ಬಜ್ಜೆಯಿ ಚಂಡಿ ಆಗಿದೆ. ಸುದ್ದಿ ಸುರನ ಇಲ್ಲದೆ ಮಳೆ ಬಂದ ಪರಿಣಾಮ ಬೆಲ್ ಬೆಳಿಗ್ಗೆ ಜನ ಟಾರ್ಚ್ ಹಿಡಿದುಕೊಂಡು ಜಾಲಿನಲ್ಲಿದ್ದ ಒಣ ಅಡಿಕೆ ಪೂಜುವುದು, ಅದಕ್ಕೆ ತಾರ್ಪಲ್ ಹಾಕುವ ದೃಶ್ಯ ಕಂಡುಬಂತು.
ಉಜಿರೆ, ಬೆಳ್ತಂಗಡಿ, ಧರ್ಮಸ್ಥಳ ಮತ್ತು ಗುರುವಾಯಕೆರೆಯಲ್ಲಿ ಜೋರು ಮಳೆ. ಇನ್ನೂ ಮಳೆ ಹನಿಯುತ್ತಿದೆ. ಉಪ್ಪಿನಂಗಡಿ, ವಿಟ್ಲ, ಕಡಬದ ಕೆಲವೆಡೆ ಮೇಲೆ ಹನಿದಿದೆ. ಉಪ್ಪಿನಂಗಡಿ ಮತ್ತು ಆಸುಪಾಸಿನಲ್ಲಿ ಸ್ವಲ್ಪ ಜೋರಾಗೆ ಮಳೆ ಇದೆ. ಪುತ್ತೂರು ನೆಲ್ಯಾಡಿ ಯಲ್ಲಿ ಸ್ವಲ್ಪ ಲೇಟ್ ಆಗಿ, 6.45 ಕ್ಕೆ ಮಳೆ ಶುರುವಾಯಿತು. ಈಗ ಎರಡೂ ಕಡೆ ಜೋರು ಮಳೆ. ಮಂಗಳೂರಿನಲ್ಲಿ ಕೂಡ ಮಳೆ ಅಬ್ಬರ ಜೋರು. ಉಡುಪಿ ಮಣಿಪಾಲದಲ್ಲಿ ಕೂಡ ಮಳೆರಾಯ ಕರುಣೆ ತೋರಿದ್ದಾನೆ.
ಮೈಸೂರಿನಲ್ಲಿ ಜೋರು ಮಳೆ. ಬೆಂಗಳೂರು ಮಳೆಯಿಲ್ಲ, ಆದರೆ ಮೋಡಕವಿದ ವಾತಾವರಣವಿದ್ದು ಮಳೆ ಬರುವ ಲಕ್ಷಣ ಇದೆ.
ಒಂದು ಮಟ್ಟಿಗೆ ಮಳೆ ಬಂದು ಇಳೆ ತಂಪಾಗಿದೆ. ಖುಷಿ ಗೊಂಡ ಜನ ಇವತ್ತು ಹಾಡಲು ಹೊಸ ಮಳೆ ಹಾಡು ಹುಡುಕುತ್ತಿದ್ದಾರೆ.