ಕಂಬಳಕ್ಕೆ ವಿಶ್ವ ಮಾನ್ಯತೆ ಸಿಗಲಿ-ರಾಹುಲ್ ಶಿಂಧೆ
ಉಪ್ಪಿನಂಗಡಿ: ಈ ಭಾಗದಲ್ಲಿ ಜನಪ್ರಿಯವಾಗಿರುವ ಜಾನಪದ ಕ್ರೀಡೆ ಕಂಬಳ ಕರಾವಳಿಯಿಂದ ದೇಶವ್ಯಾಪಿ ಪಸರಿಸುವಂತಾಗಲಿ ಎಂದು ಐ.ಎ.ಎಸ್. ಅಧಿಕಾರಿ, ಪುತ್ತೂರು ತಹಸೀಲ್ದಾರ್ ರಾಹುಲ್ ಶಿಂಧೆ ಹೇಳಿದರು.
ಅವರು ಫೆ. 29ರಂದು ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯಲ್ಲಿ 2 ದಿನಗಳ ಕಾಲ ನಡೆಯುವ ವಿಜಯ-ವಿಕ್ರಮ ಕಂಬಳವನ್ನು ಉದ್ಘಾಟಿಸಿ ಮಾತನಾಡಿದರು. ಕಂಬಳ ಎಂಬ ಕ್ರೀಡೆ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ, ಕಳೆದ 8 ತಿಂಗಳಿನಿಂದ ದ.ಕ. ಜಿಲ್ಲೆಯಲ್ಲಿ ಇದ್ದು, 3 ಕಂಬಳ ನೋಡುವ ಅವಕಾಶ ದೊರೆತಿದೆ, ನಾನು ತಿಳಿದುಕೊಂಡ ಪ್ರಕಾರ ಇದೊಂದು ಅದ್ಬುತ ಮನರಂಜನಾ ಕ್ರೀಡೆಯಾಗಿದ್ದು, ಇದಕ್ಕೆ ವಿಶ್ವ ಮಾನ್ಯತೆ ದೊರಕುವಂತಾಗಬೇಕು ಎಂದರು.
ಪುತ್ತೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ಕಂಬಳಕ್ಕೆ ಅಕಾಡೆಮಿ ಸ್ಥಾಪನೆ ಆಗಬೇಕು, ಈ ನಿಟ್ಟಿನಲ್ಲಿ ಪ್ರಯತ್ನ ಅಗತ್ಯ ಎಂದ ಅವರು ಅಕಾಡೆಮಿ ಆದರೆ ಸರ್ಕಾರದಿಂದ ಅನುದಾನ ಪಡೆಯಬಹುದಾಗಿದ್ದು, ಆ ಮೂಲಕ ಕಂಬಳವನ್ನು ಮತ್ತಷ್ಟು ಮೆರಗಿನಿಂದ ಮಾಡಬಹುದಾಗಿದೆ ಎಂದರು.
ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಮಾತನಾಡಿ ಕಂಬಳ ಉಳಿಸುವ ನಿಟ್ಟಿನಲ್ಲಿ ಮಂಗಳೂರುನಲ್ಲಿ ಸಂಘಟಿತರಾಗಿ ಸೇರಿ ಹಕ್ಕೊತ್ತಾಯ ಮಂಡನೆ ಮಾಡಬೇಕಾಗಿದೆ. ಜೊತೆಗೆ ಅಕಾಡೆಮಿ ಸ್ಥಾಪನೆ ಬಗ್ಗೆಯೂ ಸರ್ಕಾರಕ್ಕೆ ಒತ್ತಡ ತರಬೇಕಾಗಿದೆ ಎಂದರು.
ವಿಜಯ-ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಸ್ತಾವಿಕವಾಗಿ ಮಾತನಾಡಿ ವೀರ ಕ್ರೀಡೆ ಕಂಬಳ ನಿಲ್ಲಬಾರದು ಎಂಬ ಉದ್ದೇಶದಿಂದ ಮುಂದುವರಿಸಿಕೊಂಡು ಬಂದಿದ್ದೇನೆ, ಸರ್ವರ ಸಹಕಾರದಿಂದ ಮುನ್ನಡೆಯುತ್ತಿದೆ, ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಶಯನಾ ಜಯಾನಂದ ಮಾತನಾಡಿ ಜಾನಪದ ಕ್ರೀಡೆಯಾದ ಕಂಬಳವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯ ಇಲ್ಲ, ರೈತರ ಮೆಚ್ಚಿನ ಕ್ರೀಡೆ ಕಂಬಳಕ್ಕೆ ಸರ್ಕಾರದ ಮಾನ್ಯತೆ ದೊರಕುವಂತಾಗಲಿ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಗುಣಪಾಲ ಜೈನ್ ಕಡಂಬ, ಕಂಬಳ ಜಿಲ್ಲಾ ಸಮಿತಿ ತೀರ್ಪುಗಾರ ಎಡ್ತೂರು ರಾಜೀವ ರೈ, ಕದಿಕ್ಕಾರು ಬೀಡು ಪ್ರವೀಣ್ ಕುಮಾರ್, ಮಠಂತಬೆಟ್ಟು ಮಹಿಷ ಮರ್ದಿನಿ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಸಂಕಪ್ಪ ಶೆಟ್ಟಿ, ಕಟ್ಟಡ ಕಾರ್ಮಿಕ ಸಂಘದ ಕಾರ್‍ಯದರ್ಶಿ ಮಹಾಲಿಂಗ ಕಜೆಕ್ಕಾರು, ಕಂಬಳ ಸಮಿತಿ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಧನ್ಯಕುಮಾರ್ ರೈ, ವಿದ್ಯಾಧರ ಜೈನ್, ವಿಠಲ ಶೆಟ್ಟಿ ಕೊಲ್ಲೊಟ್ಟು, ಸದಾಶಿವ ಸಾಮಾನಿ ಸಂಪಿಗೆದಡಿ, ಉದ್ಯಮಿಗಳಾದ ಯು. ರಾಮ, ಚಂದಪ್ಪ ಮೂಲ್ಯ, ರಾಜೇಶ್ ಶೆಟ್ಟಿ, ಶ್ರೀಮತಿ ಸುಮಾ ಅಶೋಕ್ ಕುಮಾರ್ ರೈ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ನೆಕ್ಕರೆ ಸ್ವಾಗತಿಸಿ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಪದಾಧಿಕಾರಿಗಳಾದ ಚಂದ್ರಶೇಖರ ಮಡಿವಾಳ, ಯೋಗೀಶ್ ಸಾಮಾನಿ ಸಂಪಿಗೆದಡಿ, ಆದರ್ಶ ಕಜೆಕ್ಕಾರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್‍ಯಕ್ರಮ ನಿರೂಪಿಸಿದರು.