ಮುಕ್ಕೂರು : ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ
ಮುಕ್ಕೂರು : ಜನಪರ ಕಾಳಜಿಯ ಪರೋಪಕಾರಿ ಚಿಂತನೆಗಳು ಸಂಘಟನೆಗಳ ಜೀವಾಳ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಗ್ರಾಮಾಂತರ ಪ್ರದೇಶದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಆಯೋಜನೆಗೆ ಮುಂದಡಿ ಇಟ್ಟಿರುವುದು ಮಹತ್ವದ ಸಂಗತಿ ಎಂದು ಕಾನಾವು ಕ್ಲಿನಿಕ್ ನ ಡಾ.ನರಸಿಂಹ ಶರ್ಮಾ ಹೇಳಿದರು.
ಮುಕ್ಕೂರು ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಹಯೋಗದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮೂಲಕ ಮಾ.1 ರಂದು ಆಯೋಜಿಸಿದ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಕಾರ್ಯ ಚಟುವಟಿಕೆಗಳು ಸಂಘಟನೆಗಳ ಮೇಲಿನ ವಿಶ್ವಾಸಾರ್ಹತೆಯನ್ನು ಸಮಾಜದಲ್ಲಿ ಗಟ್ಟಿಯಾಗಿ ಉಳಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಯತ್ನ ಶ್ಲಾಘನೀಯ ಎಂದವರು ಪ್ರಶಂಸಿದರು.
ಪೆರುವಾಜೆ ಗ್ರಾ.ಪಂ.ಅಧ್ಯಕ್ಷೆ ಅನುಸೂಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರಗಳ ಆಯೋಜನೆ ಜನರಿಗೆ ಅನುಕೂಲಕರ. ಹೀಗಾಗಿ ಇಂತಹ ಪ್ರಯತ್ನಕ್ಕೆ ಎಲ್ಲರ ಬೆಂಬಲ ನೀಡಬೇಕು ಎಂದರು.
ಸುಳ್ಯ ಅಂಚೆ ಇಲಾಖೆ ನಿರೀಕ್ಷಕ ಸುದೀಪ್ ಕುಮಾರ್ ಮಾಹಿತಿ ನೀಡಿ, ಆಧಾರ್ ಕಾರ್ಡ್ ಅನಿವಾರ್ಯ. ಹಾಗಾಗಿ ಇದರಲ್ಲಿ ಯಾವುದೇ ತಪ್ಪು ಇಲ್ಲದೆ ಸಮರ್ಪಕವಾಗಿ ಇರಬೇಕಿದೆ.ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಸಂಘ ಸಂಸ್ಥೆಗಳ ಸಹಯೋಗ ಪಡೆದು ಗ್ರಾಮಾಂತರ ಪ್ರದೇಶದಲ್ಲಿ ಶಿಬಿರ ಆಯೋಜನೆಗೆ ಒತ್ತು ನೀಡಿದೆ ಎಂದರು.
ಪೆರುವಾಜೆ ಗ್ರಾ.ಪಂ.ಸದಸ್ಯ ಉಮೇಶ್ ಕೆಎಂಬಿ ಮಾತನಾಡಿ, ಸಂಘಟನೆಗಳು ಉತ್ತಮ ಕಾರ್ಯಕ್ಕೆ ಮುಂದಡಿ ಇಟ್ಟಾಗ ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಧಾರ್ ಶಿಬಿರ ಆಯೋಜನೆ ಶ್ಲಾಘನೀಯ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಊರಿನ ಅಭಿವೃದ್ಧಿಯಲ್ಲಿ ಸಂಘಟನೆಗಳು ಭಾಗಿಯಾದಾಗ ಅದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿದೆ. ಇದರಿಂದ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಭವಿಷ್ಯದಲ್ಲಿ ಇನ್ನಷ್ಟು ಹೊಸ ಚಿಂತನೆ ಅನುಷ್ಠಾನಿಸುವ ಯೋಚನೆ ಇದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ ಉಪಸ್ಥಿತರಿದ್ದರು. ಸದಸ್ಯ ರಕ್ಷಿತ್ ಗೌಡ ಕಾನಾವು ಸ್ವಾಗತಿಸಿ, ಕಾರ್ಯದರ್ಶಿ ಶಶಿಕುಮಾರ್ ನಿರೂಪಿಸಿದರು. *282 ಮಂದಿ ಭಾಗಿ* ಶಿಬಿರದಲ್ಲಿ ನೋಂದಣಿ ಮತ್ತು ತಿದ್ದುಪಡಿಯಲ್ಲಿ 282 ಮಂದಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು. ಬೆಳಗ್ಗೆಯಿಂದಲೇ ನೂರಾರು ಮಂದಿ ಹಾಜರಿದ್ದರು. ಅಂಚೆ ಇಲಾಖೆಯ 10 ಅಧಿಕ ಸಿಬಂದಿಗಳು ನಿರ್ವಹಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದರು.ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಪದ್ಮನಾಭ ನೆಟ್ಟಾರು ದಾಖಲೆಗಳ ಪ್ರಕ್ರಿಯೆಗೆ ಸಹಯೋಗ ನೀಡಿದರು.