ಕೆಲಿಂಜ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ

ಬಂಟ್ವಾಳ : ಕಾರಣಿಕ ಶಕ್ತಿ ,ಭಕ್ತರ ಇಷ್ಟಪ್ರದಾಯಿನಿ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಗೆ ಫೆ. 14 ರಂದು ಬೆಂಞತ್ತಿಮಾರಿನಿಂದ ಭಂಡಾರ ಹೊರಟು ಪುಂಡಿಕಾಯಿ ಬಳಿ ಇರುವ ಪಾಲಮಂಟಮೆಗೆ ಬಂತು. ಫೆ 15 ರಂದು ಬ್ರಾಹ್ಮೀ ಮುಹೂರ್ತದಲ್ಲಿವಿಜೃಂಭಣೆಯಿಂದ ಮೆರವಣಿಗೆ ಹೊರಟು ಮಧ್ಯಾಹ್ನ ಶ್ರೀ ದೇವಿಗೆ ಹೂವಿನ ಪೂಜೆ, ಕುಂಕುಮಾರ್ಚನೆ, ಕರ್ಪೂರಾರತಿ ಆದಿ ಸೇವೆಗಳು ನಡೆದು ರಾತ್ರಿ ಮೆಚ್ಚಿ ಜಾತ್ರೆ ನಡೆಯಿತು.

 

ಮಲ್ಲಿಗೆ ಪುಷ್ಪ ದಂಡೆಯಿಂದ ಸರ್ವಾಲಂಕೃತ ದೇವಿಗೆ ಪೂಜೆ ನಡೆದ ಬಳಿಕ ಉಳ್ಳಾಲ್ತಿ ದೈವದ ನೇಮೋತ್ಸವ ನಡೆಯಿತು. ನೇಮೋತ್ಸವವನ್ನು ಕಣ್ತುಂಬಿ ಕೊಳ್ಳಲು ಊರಿನ ಹಾಗೂ ಪರವೂರುಗಳ ಸಹಸ್ರಾರು ಭಕ್ತರು ಆಗಮಿಸಿದ್ದರು.

ಕೆಲಿಂಜ ಉಳ್ಳಾಲ್ತಿ ಕ್ಷೇತ್ರಕ್ಕೆ ಸಂತಾನ ಪ್ರಾಪ್ತಿಗಾಗಿ, ವಾಕ್‌ಶ್ರವಣ ನಿವಾರಣೆಗಾಗಿ, ಆರೋಗ್ಯಭಾಗ್ಯಕ್ಕಾಗಿ, ಜಲ ಸಮೃದ್ಧಿಗಾಗಿ ಅಲ್ಲದೇ ಹಲವು ಇಷ್ಟಾರ್ಥ ಸಿದ್ಧಿಗಾಗಿ ಸಾವಿರಾರು ಭಕ್ತರು ಹರಕೆ ಸಲ್ಲಿಸುತ್ತಾರೆ. ತುಳುನಾಡಿನ ಪಂಚ ಉಳ್ಳಾಲ್ತಿ ಶಕ್ತಿಗಳು ಕೇಪು, ಕೆಲಿಂಜ, ಅನಂತಾಡಿ, ಮಾಣಿ ಮತ್ತು ಬಲ್ನಾಡು ಕ್ಷೇತ್ರಗಳಲ್ಲಿನೆಲೆನಿಂತು ತಮ್ಮ ಕಾರಣಿಕವನ್ನು ತೋರಿಸುತ್ತಿವೆ ಎಂದು ದೈವ ಭಕ್ತರ ನಂಬಿಕೆಯಿದೆ.

ಒಂದೇ ದೇವಿಯ ವಿವಿಧ ರೂಪಗಳಲ್ಲಿಆರಾಧಿಸುವ ವಿಶಿಷ್ಟ ಸಂಪ್ರದಾಯವನ್ನು ಉಳ್ಳಾಲ್ತಿಗಳ ಪರಂಪರೆಯಲ್ಲಿಕಾಣಬಹುದು. ಕೆಲಿಂಜ ಉಳ್ಳಾಲ್ತಿ ದೇವಸ್ಥಾನವು ಮೊಗರ್ನಾಡು ಸಾವಿರ ಸೀಮೆಯ ಅತ್ಯಂತ ಕಾರಣಿಕ ಕ್ಷೇತ್ರವಾಗಿದ್ದು, ಶ್ರದ್ಧಾಭಕ್ತಿಯಿಂದ ನಂಬಿದವರಿಗೆ ಇಂಬು ಕೊಡುವ ಕ್ಷೇತ್ರವಾಗಿದೆ. ಉಳ್ಳಾಲ್ತಿ ಅಮ್ಮನವರು ಆನಾಳ್ವ ಮತ್ತು ಮದನಾಳ್ವ ಅಣ್ಣತಮ್ಮಂದಿರಿಗೆ ಒಲಿದು ಕೆಲಿಂಜದಲ್ಲಿಕೊಡಿ ಇಲ್ಲದ ಕಾಸರ್ಕಾಯಿ ಮರದಡಿಯಲ್ಲಿನೆಲೆ ನಿಂತಿದ್ದಾರೆ ಎಂಬ ಪ್ರತೀತಿಯಿದೆ. ಅಜೀರ್ಣಾವಸ್ಥೆಯಲ್ಲಿರುವ ದೈವಸ್ಥಾನವನ್ನು ಪುಂಡಿಕಾಯಿ ಮನೆತನದವರು ಸುಮಾರು 180 ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಿದರು. ದೈವಸ್ಥಾನದಲ್ಲಿಈಗಲೂ ಆನಾಳ್ವ ವಂಶಸ್ಥರೇ ಪಾತ್ರಿಯಾಗಿದ್ದು, ಭಂಡಾರವು ಮದನಾಳ್ವ ವಂಶಸ್ಥರಿರುವ ಬೆಂಞತ್ತಿಮಾರು ಚಾವಡಿಯಲ್ಲಿದೆ. ಇಲ್ಲಿಪಾರ್ವತಿಯನ್ನು ಉಳ್ಳಾಲ್ತಿಯ ರೂಪದಲ್ಲಿಪೂಜಿಸಲಾಗುತ್ತಿದೆ. ಗರ್ಭಗುಡಿಯೊಳಗೆ ಭದ್ರಕಾಳಿಯ ಸಾನ್ನಿಧ್ಯವೂ ಇದೆ. ಇದರ ಪ್ರತೀಕವಾಗಿ ಜಾತ್ರೋತ್ಸವದಂದು ಕಟ್ಟಿದ ಒಂದೇ ದೈವಕ್ಕೆ ಎರಡು ರೀತಿಯ ಉಪಾಸನೆಗಳು ನಡೆಯುತ್ತದೆ. ಅಂದರೆ ದೇವಕ್ರಿಯೆ ಮತ್ತು ಅಸುರ ಕ್ರಿಯೆಯಲ್ಲಿನಡೆಯುತ್ತಿದೆ.

Leave A Reply

Your email address will not be published.