ಬೆಳ್ತಂಗಡಿಯ ಶಕ್ತಿಮಾನ್ ರಿಗೆ ಗೌರವ ಸಮರ್ಪಣೆ । ಅರ್ಥಪೂರ್ಣ ಫೆಬ್-14 ಆಚರಿಸಿದ ಯುವ ಬ್ರಿಗೇಡ್

ಬೆಳ್ತಂಗಡಿಯ ಯುವ ಬ್ರಿಗೇಡ್ ಅವರಿಂದ ಅರ್ಥಪೂರ್ಣ ಫೆಬ್-14 ಆಚರಣೆ

ಮತ್ತೊಂದು ಫೆಬ್ರವರಿ 14 ಬಂದೇ ಬಿಟ್ಟಿದೆ. ಚಕ್ರವರ್ತಿ ಸೂಲಿಬೆಲೆಯವರ ಇಚ್ಛೆಯಂತೆ ಇಂದು ಯುವಾ ಬ್ರಿಗೇಡ್ ಈ ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನವಾಗಿಸಿ ಇದು ಆರನೇ ವರ್ಷ.

ಈ ಹಿಂದೆ ಇದೇ ದಿನ ನಾವು ವೃದ್ಧಾಶ್ರಮಗಳಿಗೆ ಹೋಗಿದ್ದು, ಪೌರ ಕಾರ್ಮಿಕರು ವಾಸಿಸುವ ಪ್ರದೇಶವನ್ನು ಸ್ವಚ್ಛ ಮಾಡಿದ್ದು, ಪೊಲೀಸರನ್ನು ನಮ್ಮೊಳಗಿನ ಸೈನಿಕರೆಂದು ಗೌರವಿಸಿದ್ದು ನೆನಪಿನಲ್ಲಿ ಹಸಿಯಾಗಿದೆ.

ಈ ಬಾರಿ ನಾವು ನಮ್ಮನ್ನು ಸದಾ ಬೆಳಕಿನಲ್ಲಿಡಲು ಪ್ರಾಣದ ಹಂಗನ್ನು ತೊರೆದು ದುಡಿಯುವ ಪವರ್‌ಮನ್‌ಗಳಿಗೆ ಗೌರವ ಸಮರ್ಪಿಸಿದ್ದೇವೆ. ಈ ಕಾರ್ಯಕ್ರಮವನ್ನು ನಾವು ‘ಶಕ್ತಿಮಾನ್ ‘ ಎಂದು ಕರೆದಿದ್ದೇವೆ. ಶಕ್ತಿಯೊಂದಿಗೆ ಸಾಹಸದ ಆಟವಾಡುವ ಸಾಹಸಿಗನಲ್ಲವೇ ಆತ ?

ನಮ್ಮೂರಿನ ವಿದ್ಯುತ್ ಕಛೇರಿಗಳಿಗೆ ಹೋಗಿ ಅಲ್ಲಿರುವ ಈ ಶಕ್ತಿಮಾನ್‌ಗಳನ್ನು ಗುರುತಿಸಿ ಅವರೆಲ್ಲರಿಗೂ ಸೇರಿ ಒಂದು ಫಲಕವನ್ನು ಕೊಟ್ಟು ಗೌರವಿಸುವ ಕಾರ್ಯಕ್ರಮವಿತ್ತು.

ಈ ಬಾರಿ ನೆರೆ ಪ್ರವಾಹದ ಹೊತ್ತಲ್ಲಿ ವಿದ್ಯುತ್ ಪ್ರವಾಹವನ್ನು ಮರು ಸ್ಥಾಪಿಸಲು ನಿರಂತರ ಕಾರ್ಯಗೈದ ಈ ಪವರ್‌ಮನ್‌ಗಳ ಕಾರ್ಯಕ್ಷಮತೆಯನ್ನು ಕಂಡಾಗಲೇ ಇಂಥದ್ದೊಂದು ಆಲೋಚನೆ ಬಂದಿತ್ತು. ನಮಗಾಗಿ ದುಡಿಯುವ ಈ ಜೀವಗಳಿಗೆ ಈ ಬಾರಿಯ ದೇಶಪ್ರೇಮಿಗಳ ದಿನ ಸಮರ್ಪಣೆ.

ಫೆಬ್ರವರಿ 14 ರಂದು ದೇಶಪ್ರೇಮಿಗಳ ದಿನ ಆಚರಿಸುವ ಹೊತ್ತಲ್ಲಿ ವಿದ್ಯುತ್ ಇಲಾಖೆಯ ಶಕ್ತಿಮಾನ್‌ ಗಳನ್ನು ಅಭಿನಂದಿಸುವ ಕಾರ್ಯಕ್ರಮ ಇದು. ಇದು ಅವರಿಗೆ ಧನ್ಯತೆಯ ಭಾವ ತುಂಬಿದರೆ ನಮಗೆ ಸಾರ್ಥಕತೆಯನ್ನು ತಂದೊಡ್ಡುವ ಕ್ಷಣ!

ಈ ಫೆಬ್ರವರಿ 14ರಂದು ಅವರು ತಂತಿಗಳನ್ನು ಬೆಸೆಯಲಿ ನಾವು ಹೃದಯಗಳನ್ನು ಬೆಸೆಯೋಣ.

# ಶಕ್ತಿಮಾನ್ | ಯುವ ಬ್ರಿಗೇಡ್, ಬೆಳ್ತಂಗಡಿ

Leave A Reply

Your email address will not be published.