ಬಡವನ ಬದುಕನ್ನೇ ಬದಲಾಯಿಸಿದ ಕೇರಳ ಲಾಟರಿ | 7 ಲಕ್ಷದ ಸಾಲಗಾರ ಈಗ 12 ಕೋಟಿ ಒಡೆಯ !
ತಿರುವನಂತಪುರ : ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಬಡ ರಬ್ಬರ್ ಟ್ಯಾಪರ್ ಒಬ್ಬ ರಾತ್ರೋರಾತ್ರಿ ಕೋಟ್ಯಧಿಪತಿ ಆಗಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್ನಲ್ಲಿ ಒಟ್ಟು 7 ಲಕ್ಷ ಸಾಲ ಹೊಂದಿದ್ದ ರಂಜನ್ ಈಗ ಬರೋಬ್ಬರಿ 12 ಕೋಟಿ ಮೌಲ್ಯದ ಲಾಟರಿ ಟಿಕೆಟ್ ಗೆದ್ದು ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ.
ರಂಜನ್ ಅವರು ಇತ್ತೀಚೆಗೆ ಬ್ಯಾಂಕ್ ಒಂದಕ್ಕೆ ತೆರಳಿ ತನ್ನ ಮೂರು ಸಾಲದ ಬಡ್ಡಿ ಕಟ್ಟುವುದಕ್ಕಾಗಿ ನಾಲ್ಕನೇ ಸಾಲವನ್ನು ಕೊಡಿ ಎಂದು ಬ್ಯಾಂಕ್ನ ಮ್ಯಾನೇಜರ್ನಲ್ಲಿ ಕೇಳಿಕೊಂಡಿದ್ದರು.ಆದರೆ ಮ್ಯಾನೇಜರ್ ಅದಕ್ಕೆ ಒಪ್ಪದೆ ಆತನನ್ನು ಹಾಗೇ ಕಳಿಸಿದ್ದರು. ಈಗ ಲಾಟರಿ ಹೊಡೆದು ಬ್ಯಾಂಕ್ ನಲ್ಲಿ ಡೆಪಾಸಿಟ್ ಇಡೋವಷ್ಟು ಹಣ ಸಂಪಾದಿಸಿದ್ದಾರೆ.
3 ಸಾಲಗಳನ್ನು ಚುಕ್ತಾ ಮಾಡಲು ನಾಲ್ಕನೇ ಸಾಲ ಕೇಳಿ ಸಿಗದಾಗ ಬೇಜಾರಿನಿಂದ ಮನೆಗೆ ಹಿಂದಿರುಗುವಾಗ ತನ್ನ ಹವ್ಯಾಸವಾಗಿದ್ದ ಲಾಟರಿ ಟಿಕೆಟ್ನ್ನು ಕೊಂಡು ಬಂದಿದ್ದಾನೆ. 300 ರೂಪಾಯಿ ಕೊಟ್ಟು ತೆಗೆದುಕೊಂಡ ಲಾಟರಿ ಟಿಕೆಟ್ ರಂಜನ್ ಅವರ ಬದುಕನ್ನೇ ಬದಲಾಯಿಸಿದೆ. ಸೋಮವಾರದಂದು ಲಾಟರಿ ಟಿಕೆಟ್ನ ವಿಜೇತರನ್ನು ಘೋಷಿಸಲಾಗಿದೆ. ಆದರೆ ಯಾರೂ ಕೂಡ ಆ ಟಿಕೆಟ್ ತಮ್ಮದು ಎಂದು ಮುಂದೆ ಬಂದಿರಲಿಲ್ಲ.
ಮಂಗಳವಾರದಂದು ಲಾಟರಿ ಕೊಂಡ ಸ್ಥಳಕ್ಕೆ ಹೋದ ರಂಜನ್ ತನ್ನ ಟಿಕೆಟ್ ಗೆದ್ದಿದೆಯೋ ಇಲ್ಲವೋ ಎಂದು ಪರಿಶೀಲಿಸಿದ್ದಾರೆ. ಆಗ ತನ್ನ ಟಿಕೆಟ್ ಸಂಖ್ಯೆ ಎಸ್ಟಿ 269609 ಲಾಟರಿ ಗೆದ್ದಿದ್ದು 12 ಕೋಟಿ ಹಣವು ತನಗೆ ಬಹುಮಾನವಾಗಿ ಬಂದಿರುವುದು ರಂಜನ್ಗೆ ತಿಳಿದುಬಂದಿದೆ.
ಸಂತಸದಿಂದ ಮನೆಗೆ ಬಂದ ರಂಜನ್ ತನ್ನ ಮಡದಿಯ ಬಳಿ ಈ ವಿಚಾರವನ್ನು ಹಂಚಿಕೊಂಡಾಗ ಮೊದಲಿಗೆ ಆಕೆ ನಂಬಿರಲಿಲ್ಲವಂತೆ. ಆಮೇಲೆ ಊರವರೆಲ್ಲ ಬಂದು ಆತನಿಗೆ ಶುಭಹಾರೈಸುವುದನ್ನು ಕಂಡು ಆಕೆ ನಂಬಿದಳು ಎಂದು ರಂಜನ್ ತಿಳಿಸಿದ್ದಾರೆ.
ತೆರಿಗೆ ಎಲ್ಲ ಕಳೆದು ರಂಜನ್ಗೆ 7 ರಿಂದ 8 ಕೋಟಿ ರೂಪಾಯಿ ಬಹುಮಾನವಾಗಿ ಬರುವ ನಿರೀಕ್ಷೆಯಿದೆ. ಈ ಹಣದಲ್ಲಿ ಮೊದಲು ಬ್ಯಾಂಕ್ನಲ್ಲಿರುವ 7 ಲಕ್ಷ ಸಾಲವನ್ನು ತೀರಿಸಿಕೊಳ್ಳುವುದಾಗಿ ರಂಜನ್ ತಿಳಿಸಿದ್ದಾರೆ. ಅರ್ಧ ನಿರ್ಮಾಣವಾಗಿರುವ ತನ್ನ ಮನೆಯನ್ನು ಈ ಹಣದಲ್ಲಿ ಪೂರ್ತಿ ಮಾಡುವುದಾಗಿ ಆತ ಹೇಳಿದ್ದಾರೆ.
ಮೂರು ಮಕ್ಕಳಿರುವ ಕುಟುಂಬದಲ್ಲಿ ಮೊದಲನೇ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದು, ಮಗ ವಿದ್ಯಾಭ್ಯಾಸ ಬಿಟ್ಟು ತಂದೆಗೆ ಕೆಲಸದಲ್ಲಿ ನೆರವಾಗುತ್ತಿದ್ದಾನೆ. ಇನ್ನೋರ್ವ ಮಗಳು 12ನೇ ತರಗತಿಯಲ್ಲಿ ಓದುತ್ತಿದ್ದಾಳೆ.