ಬೈತಡ್ಕ: 31ನೇ ಸ್ವಲಾತ್ ವಾರ್ಷಿಕ ಸಮಾರೋಪ

ಸವಣೂರು: ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ, ಕಾಣಿಯೂರು ಇದರ ಆಶ್ರಯದಲ್ಲಿ ಅಸ್ವಲಾತುಲ್ ಕಫೀಲು ಬಿಶ್ಯಫಾಅಃ ಇದರ 31ನೇ ವಾರ್ಷಿಕ ಮತ್ತು ನಾಲ್ಕು ದಿನಗಳ ಧಾರ್ಮಿಕ ಮತಪ್ರಭಾಷಣದ ಸಮಾರೋಪ ನಡೆಯಿತು.

ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್‌ರವರು ವಾರ್ಷಿಕ ಸ್ವಲಾತ್ ಮಜ್ಲಿಸ್‌ಗೆ ನೇತೃತ್ವ ನೀಡಿ ದುವಾ ನೆರವೇರಿಸಿದರು. ಪಾರತ್ರಿಕ ನರಕಾಗ್ನಿಯಿಂದ ಮುಕ್ತಿಹೊಂದಲು ಮತ್ತು ಐಹಿಕ ಜೀವನದಲ್ಲಿ ಯಶಸ್ಸು ಸಂಪಾದಿಸಬೇಕಾದರೆ ಪ್ರವಾದಿ ಮುಹಮ್ಮದ್(ಸ.ಅ)ರವರ ಸಂದೇಶಗಳನ್ನು ಪಾಲಿಸಬೇಕು, ಪ್ರವಾದಿಯವರ ಮೇಲೆ ನಿರಂತರ ಸ್ವಲಾತ್ ಹೇಳುತ್ತಿರಬೇಕು, ಸ್ವಲಾತ್, ದಿಕ್ರ್ ಮಜ್ಲಿಸ್‌ಗಳಲ್ಲಿ ಪಾಲ್ಗೊಳ್ಳಬೇಕು, ಹೃದಯದಲ್ಲಿ ಪರಿವರ್ತನೆಯಾಗಬೇಕು ಎಂದು ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್ ಹೇಳಿದರು.

ಸ್ವಲಾತ್‌ನಿಂದ ಹೃದಯ ಪ್ರಕಾಶಿಸುತ್ತಿರಲಿ

ಧಾರ್ಮಿಕ ಮತಪ್ರಭಾಷಣ ಸಮಾರೋಪದಲ್ಲಿ ಮುಖ್ಯ ಪ್ರಭಾಷಣ ನಡೆಸಿದ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂರವರು ಹುಟ್ಟಿದ ಪ್ರತಿಯೊಬ್ಬರೂ ಒಂದು ದಿನ ಮರಣ ಹೊಂದುವುದು ಖಚಿತ, ಜನನ-ಮರಣಗಳ ಮಧ್ಯದ ನಮ್ಮ ಕ್ಷಣಿಕ ಜೀವನದಲ್ಲಿ ನಾವು ಮಾಡುವ ಪುಣ್ಯ ಕಾರ್ಯಗಳು ಮಾತ್ರ ನಮ್ಮನ್ನು ರಕ್ಷಿಸಲಿದೆ ಎಂದು ಹೇಳಿದರು. ಅಲ್ಲಾಹು ನಮ್ಮನ್ನು ವಿವಿಧ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸುವವನಾಗಿದ್ದು ಆ ಪರೀಕ್ಷೆಯನ್ನು ತಾಳ್ಮೆಯಿಂದ ಎದುರಿಸಿದವರು ಜೀವನದಲ್ಲಿ ಯಶಸ್ಸು ಸಂಪಾದಿಸುತ್ತಾರೆ, ನಿತ್ಯ ಸ್ವಲಾತ್ ಹೇಳುವ ಮೂಲಕ ನಮ್ಮ ಹೃದಯ ಪ್ರಕಾಶಿಸುತ್ತಿರಬೇಕು ಎಂದು ಅವರು ಹೇಳಿದರು.

ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ: ಬೈತಡ್ಕ ಮುದರ್ರಿಸ್ ಸ್ವಾದಿಖ್ ಸಖಾಫಿ ಮಾತನಾಡಿ ದಾನ ಮಾಡುವ ಪ್ರವೃತ್ತಿಯನ್ನು ಪ್ರತಿಯೋರ್ವರೂ ರೂಢಿಸಿಕೊಳ್ಳಬೇಕು, ದಾನವು ನಮ್ಮನ್ನು ವಿವಿಧ ವಿಪತ್ತುಗಳಿಂದ ಸಂರಕ್ಷಿಸುತ್ತದೆ ಎಂದು ಹೇಳಿದರು. ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ ಇದರ ಅಧ್ಯಕ್ಷ ಎ.ಟಿ.ಸಿ ಅಬ್ದುಲ್ ಕರೀಂ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಪಿ.ಬಿ ಅಬ್ದುಲ್ ರಹಿಮಾನ್ ಹಾಜಿ, ಬೈತಡ್ಕ ಮಸೀದಿಯ ಮಾಜಿ ಅಧ್ಯಕ್ಷ ಬಿ.ಪಿ ಅಬ್ದುಲ್ ಹಮೀದ್ ಹಾಜಿ, ಬೈತಡ್ಕ ಮಸೀದಿಯ ಉಪಾಧ್ಯಕ್ಷರುಗಳಾದ ಬಿ.ಎಸ್ ಇಸ್ಮಾಯಿಲ್ ಹಾಜಿ ಬೈತಡ್ಕ, ಅಬೂಬಕ್ಕರ್ ಹಾಜಿ, ಕೋಶಾಕಾರಿ ಸಾಬು ಹಾಜಿ ಕೆಲೆಂಬಿರಿ, ಕರಿಂಬಿಲ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್, ಚಾಪಳ್ಳ ಮಸೀದಿ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ, ಪಳ್ಳತ್ತಾರು ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಂಕಿರಿ, ಸಮಾದಿ ಮಸೀದಿ ಅಧ್ಯಕ್ಷ ಎಂ.ಎ ಉಮ್ಮರ್ ಫಾರೂಕ್, ಅಲೆಕ್ಕಾಡಿ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅಲೆಕ್ಕಾಡಿ, ಪುಣ್ಚತ್ತಾರು ಮಸೀದಿ ಅಧ್ಯಕ್ಷ ಉಮ್ಮರ್ ಮಾಲೆಂಗಿರಿ, ಬೈತಡ್ಕ ಸದರ್ ಮುಅಲ್ಲಿಂ ಅಲೀ ಸಖಾಫಿ, ಮುಅಲ್ಲಿಂ ತಾಜುದ್ದೀನ್ ಸಖಾಫಿ, ಅಹ್ಮದ್ ಸಿನಾನ್ ಸಅದಿ, ಮುಅಝಿನ್ ಹಕೀಂ ಜೌಹರಿ ಉಪಸ್ಥಿತರಿದ್ದರು. ಬೈತಡ್ಕ ಮುದರ್ರಿಸ್ ಸ್ವಾದಿಕ್ ಸಖಾಫಿ ಸ್ವಾಗತಿಸಿದರು. ಬೈತಡ್ಕ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ರೆಂಜಲಾಡಿ ವಂದಿಸಿದರು. ಬೈತಡ್ಕ ಜಮಾಅತ್ ಕಮಿಟಿಯವರು ಮತ್ತು ಜಮಾಅತರು, ರಿಫಾಯಿಯಾ ದಫ್ ಕಮಿಟಿಯವರು, ಖುತುಬಿಯ್ಯತ್ ಕಮಿಟಿಯವರು, ಎಂವೈಎಫ್ ಕಮಿಟಿಯವರು ಸಹಕರಿಸಿದರು.

ಜ.28ರಂದು ಬೈತಡ್ಕ ಮುದರ್ರಿಸ್ ಸ್ವಾದಿಕ್ ಸಖಾಫಿ ಹಾಗೂ ಜ.29ರಂದು ಯು.ಕೆ ಮುಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ನಡೆಸಿದರು. ಬೈತಡ್ಕ ಮಸೀದಿ ಪರಿಸರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ವಲಿಯುಲ್ಲಾಹಿ ಮಶ್‌ಹೂರ್(ಖ.ಸಿ)ರವರ ದರ್ಬಾರಿನಲ್ಲಿ ಪ್ರತೀ ಶುಕ್ರವಾರ ರಾತ್ರಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ)ರವರ ಹೆಸರಿನಲ್ಲಿ ಸ್ವಲಾತ್ ಮಜ್ಲಿಸ್ ನಡೆಯುತ್ತಿದ್ದು ವಿವಿಧ ಕಡೆಗಳಿಂದ ಹಲವಾರು ಮಂದಿ ಭಾಗವಹಿಸುತ್ತಿದ್ದಾರೆ.

ಇಲ್ಲಿ ದರ್ಸ್ ಶಿಕ್ಷಣ ಕೂಡಾ ನೀಡಲಾಗುತ್ತಿದ್ದು ಸುಮಾರು ೭೫ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಜಮಾಅತ್ ಕಮಿಟಿಯವರು ಒಗ್ಗಟ್ಟಿನಿಂದ ಎಲ್ಲ ಕೆಲಸಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು ಜಮಾಅತರ ಸಹಕಾರ ಕೂಡಾ ಉತ್ತಮವಾಗಿ ದೊರೆಯುತ್ತಿದೆ ಎಂದು ಜುಮಾ ಮಸೀದಿ ಮತ್ತು ದರ್ಗಾ ಶರೀಫ್‌ನ ಅಧ್ಯಕ್ಷ ಎ.ಟಿ.ಸಿ ಅಬ್ದುಲ್ ಕರೀಂ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ರೆಂಜಲಾಡಿ ತಿಳಿಸಿದ್ದಾರೆ. ಮತಪ್ರಭಾಷಣದ ಕೊನೆಯಲ್ಲಿ ಅನ್ನದಾನ ನಡೆಯಿತು. ಸುಳ್ಯ, ಪುತ್ತೂರು, ಕಡಬ ತಾಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು. ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಆಗಮಿಸಿ ದರ್ಗಾ ಝಿಯಾರತ್ ನಡೆಸಿದರು.

Leave A Reply

Your email address will not be published.