ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ವ್ಯಾನ್ ಮತ್ತು ಸ್ಕೂಟಿ ಪರಸ್ಪರ ಢಿಕ್ಕಿ ಹೊಡೆದುಕೊಂಡು ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಕೊಲ್ಲಮೊಗ್ರ ಚಾಂತಳದ ಚಿದಾನಂದರವರು (40 ) ಮೃತಪಟ್ಟಿದ್ದಾರೆ.
ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದವ್ಯಾನ್ ಹಾಗೂ ಸೋಣಂಗೇರಿ ಕಡೆಯಿಂದ ಬೆಳ್ಳಾರೆಗೆ ಹೋಗುತ್ತಿದ್ದ ಕೊಲ್ಲಮೊಗ್ರದ ಚಿದಾನಂದ ಎಂಬವರು ಚಲಾಯಿಸುತ್ತಿದ್ದ ಸ್ಕೂಟಿ ಕಾವಿನಮೂಲೆ ಬಳಿ ಪರಸ್ಪರ ಮುಖಾಮುಖಿ ಢಿಕ್ಕಿ ಹೊಡೆದುಕೊಂಡ ಪರಿಣಾಮ ಸ್ಕೂಟಿ ಸವಾರನಿಗೆ ತಲೆಗೆ ತೀವ್ರ ಗಾಯಗಳಾಗಿತ್ತು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾಣಿ ತಲುಪುವಷ್ಟರಲ್ಲಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ.
ಕನಕಮಜಲಿನಲ್ಲಿ ತನ್ನ ಸಂಬಂಧಿಕರ ಮನೆಯ ಗೃಹಪ್ರವೇಶದ ಕುಟ್ಟಿಪೂಜೆಗೆ ನಿನ್ನೆ ಚಿದಾನಂದರವರು ತೆರಳಿದ್ದರು. ಇವತ್ತು ವಾಪಾಸು ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಕೂಟಿಯ ಹಿಂಬದಿಯಲ್ಲಿ ಸಹ-ಸವಾರರಾಗಿದ್ದ ತನ್ನ ಸಂಬಂದಿಯಾದ, ಬೆಳ್ಳಾರೆಯಲ್ಲಿ ಏರ್ ಟೆಲ್ ಕಂಪೆನಿ ವಿತರಕರಾಗಿರುವ ವಿನೀತ್ ರವರಿದ್ದುಅವರಿಗೆ ಅಲ್ಪಸ್ವಲ್ಪ ಗಾಯವಾಗಿದೆ.