ನಾಳೆ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ । ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆಬದಲಾವಣೆ

ಮಂಗಳೂರು : ನಾಳೆ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸ್ವಲ್ಪ ಇತ್ತ ಗಮ‌ನ ಹರಿಸಿ. ನಾಳೆ ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

ನಾಳೆ ಬೆ.9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರ ಬದಲಾವಣೆ ಇರಲಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳು ಮೆಲ್ಕಾರ್, ಕೊಣಾಜೆ, ತೊಕ್ಕೊಟ್ಟು ಮೂಲಕ ಮಂಗಳೂರು ಕಡೆಗೆ ಮತ್ತು ಮಂಗಳೂರಿನಿಂದ ಬೆಂಗಳೂರು ಕಡೆ ಸಾಗುವ ವಾಹನಗಳು ಪಂಪ್ ವೆಲ್, ತೊಕ್ಕೊಟ್ಟು, ಕೊಣಾಜೆ, ಬಿ.ಸಿ.ರೋಡ್ ಮೂಲಕ ಬೆಂಗಳೂರು ಕಡೆಗೆ ಸಾಗಬೇಕು.

ಅದೇ ರೀತಿ ಉಡುಪಿಯಿಂದ ಬೆಂಗಳೂರು ಕಡೆಗೆ ಪಡುಬಿದ್ರೆ, ಕಾರ್ಕಳ, ಧರ್ಮಸ್ಥಳ, ಶಿರಾಡಿ ಮೂಲಕ ಬೆಂಗಳೂರು ಕಡೆಗೆ ಮತ್ತು ಬಿ.ಸಿ.ರೋಡ್, ಕೈಕಂಬ, ಪೊಳಲಿ ಮೂಲಕವೂ ಮಂಗಳೂರು ಸಂಪರ್ಕಿಸಲು ಅವಕಾಶ ನೀಡಲಾಗಿದೆ.

ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದ್ದು, ಡಿ.19 ರ ಗಲಭೆ ಬಳಿಕ ಮೊದಲ ಬಾರಿಗೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಮಂಗಳೂರು ನಗರದಲ್ಲಿ ಅನುಮತಿ ಸಿಗದ ಹಿನ್ನೆಲೆ ಸ್ಥಳ ಬದಲಾವಣೆ ಮಾಡಲಾಗಿದ್ದು, ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಹಲವು ಸಂಘಟನೆಗಳು ಭಾಗಿಯಾಗಲಿವೆ. ದ.ಕ ಮತ್ತು ಉಡುಪಿ ಜಿಲ್ಲೆಯ ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆಯಿದ್ದು,ನಿವೃತ್ತ ಐಎಎಸ್ ಅಧಿಕಾರಿ ಹರ್ಷ ಮಂದರ್, ಕಣ್ಣನ್ ಗೋಪಿನಾಥನ್, ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಮುಖ್ಯ ಭಾಷಣ ಮಾಡಲಿದ್ದಾರೆ. ಪಿಎಫ್ ಐ, ಎಸ್ ಡಿಪಿಐ ಸೇರಿ ಹಲವು ಸಂಘಟನೆಗಳು ಭಾಗಿಯಾಗಲಿದೆ

Leave A Reply

Your email address will not be published.