ಶಬರಿಮಲೆ update | ಹರಿದು ಬರುತ್ತಿರುವ ಭಕ್ತಪ್ರವಾಹ | ರಕ್ಷಣೆ-ಸುರಕ್ಷತೆಗೆ ಪೊಲೀಸ್ ಬಲ !
ಚಿತ್ರ: ಪಂಪಾ ಸಮೀಪದ ಚೆರಿಯಾನವಟ್ಟದಲ್ಲಿ ಪೊಲೀಸ್ ಇಲಾಖಾ ತಂಡ.
ಶಬರಿಮಲೆ : ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನ ಕ್ಕೆ ಮಕರ ಉತ್ಸವದ ಹಿನ್ನೆಲೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ರಕ್ಷಣೆ ಹಾಗೂ ಕ್ಷೇತ್ರದ ಸುರಕ್ಷತೆ ಹಿನ್ನೆಲೆಯಲ್ಲಿನ ಭೂತೋ ನ ಭವಿಷ್ಯತಿ ಎಂಬಂತಹ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ದೇಗುಲಕ್ಕೆ ನಿತ್ಯ ಲಕ್ಷಾಂತರ ಭಕ್ತಾದಿಗಳು ಬರುತ್ತಿದ್ದು,ಇದಕ್ಕಾಗಿ 8,402 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ.
ಮಕ್ಕಳ ಸುರಕ್ಷತೆಯ ಹಿನ್ನೆಲೆಯಲ್ಲಿ ಚೈಲ್ಡ್ ಬಾಂಡ್ ಮಕ್ಕಳಿಗೆ ಅಳವಡಿಸಲಾಗುತ್ತಿದೆ. ಮಕ್ಕಳ ಸಂಪೂರ್ಣ ವಿವರಗಳನ್ನು ಇಲಾಖಾ ದಾಖಲೆಗಳಲ್ಲಿ ನಮೂದಿಸಿ, ಒಬ್ಬೊಬ್ಬರಿಗೂ ಒಂದೊಂದು ನಂಬರ್ ಅಳವಡಿಸಲಾಗುತ್ತದೆ. ಆ ನಂಬರ್ ಮೂಲಕ ಮಗುವಿನ ಸಂಪೂರ್ಣ ವಿವರ ಲಭ್ಯವಾಗುತ್ತದೆ.
ಕಾಡು ಹಾದಿ : ಅರಣ್ಯ ಇಲಾಖೆ ಕಾವಲು
ಕಾಡು ಹಾದಿಯ ಮೂಲಕ ಎರುಮೇಲಿ-ಕಾಲಕಟ್ಟಿ-ಅಳುದಾ ನದಿ-ಕಲ್ಲಿಡಾಕುನ್ನು-ಅಳುದಾ ಬೆಟ್ಟ-ಮುಕ್ಕುಳಿ-ಕರಿಮಲೆ ಹಾದಿಯಲ್ಲಿ ಕೇರಳ ಅರಣ್ಯ ಇಲಾಖೆಯ ಸಿಬಂದಿಗಳು ಕಾವಲಾಗಿದ್ದಾರೆ. ಕಾಡಾನೆಯ ಹಾವಳಿ ಹೆಚ್ಚಿರುವುದರಿಂದ ಈಗಾಗಲೇ ರಾತ್ರಿ ವೇಳೆ ಸಂಚಾರಕ್ಕೆ ಅಳುದಾ-ಕಲ್ಲಿಡಾಕುನ್ನು-ಮುಕ್ಕುಳಿ-ಕರಿಮಲೆಯಲ್ಲಿ ನಿರ್ಬಂಧ ಹೇರಲಾಗಿದೆ.
ಪೊಲೀಸ್ ಇಲಾಖೆ ಪರಿಶೀಲನೆ
ಶಬರಿಮಲೆ, ಪಂಪಾ ಹಾಗೂ ಸುತ್ತ ಮುತ್ತ ಪೋಲಿಸ್ ಇಲಾಖೆಯ ಅಧಿಕಾರಿಗಳು ಭಧ್ರತೆ ಹಾಗೂ ಸುರಕ್ಷತೆಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
24 ಎಸ್ಪಿಗಳು, 112 ಸಹಾಯಕ ಎಸ್ಪಿಗಳು, 264 ಇನ್ಸ್ ಪೆಕ್ಟರ್ ಗಳು ಮತ್ತು 1,185 ಸಬ್ ಇನ್ಸ್ಪೆಕ್ಟರ್ಗಳು ಸೇರಿ ಒಟ್ಟು 8,402 ಪೊಲೀಸರನ್ನು ನೇಮಿಸಲಾಗುವುದು. ಅವರಲ್ಲಿ 307 ಮಹಿಳಾ ಪೊಲೀಸರು ಇರಲಿದ್ದಾರೆ.ಮಹಿಳಾ ಪೊಲೀಸರನ್ನು ಪಂಪಾ ನದಿ ಹಾಗೂ ಗಣಪತಿ ದೇವಾಲಯದ ಪಕ್ಕ ನಿಯೋಜಿಸಲಾಗಿದೆ.
ಹಾಗೂ ಅಗತ್ಯ ಕಂಡುಬಂದರೆ ಇನ್ನೂ ಹೆಚ್ಚಿನ ಸಂಖ್ಯೆಯ ಸಿಬಂದಿಗಳನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿದೆ.
ಇದರ ಜತೆಗೆ ರಾಪಿಡ್ ಆ್ಯಕ್ಷನ್ ಫೋರ್ಸ್, ಎನ್.ಡಿ.ಆರ್.ಎಫ್ ಪಡೆ, ತಿರುವಾಂಕೂರು ದೇವಸ್ವಂ ಬೋರ್ಡ್ ಸಿಬಂದಿಗಳು, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ, ಶಬರಿಮಲೆ ಸ್ವಾಮಿ ಅಯ್ಯಪ್ಪ ಸೇವಾ ಸಂಘದ ಸ್ವಯಂ ಸೇವಕರು ಕರ್ತವ್ಯದಲ್ಲಿದ್ದಾರೆ.
ಪ್ರವೀಣ್ ಚೆನ್ನಾವರ