ಬೆಳ್ತಂಗಡಿಯಲ್ಲಿ ಅರಣ್ಯ ಹಕ್ಕು ಸಮಿತಿ ಸಭೆ | ಕುಂದು ಕೊರತೆ ಆಲಿಸಿದ ಶಾಸಕರು | 7 ಫಲಾನುಭವಿಗಳಿಗೆ 88 ಲಕ್ಷ ರೂ. ಪರಿಹಾರ ವಿತರಣೆ

ಬೆಳ್ತಂಗಡಿ : ಪಾರಂಪರಿಕವಾಗಿ ಅರಣ್ಯದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಾಗೂ ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಪ್ರಥಮ ಆದ್ಯತೆಯನ್ನು ನೀಡಲಾಗುತ್ತಿದ್ದು ಕಾನೂನಿನ ಅಡೆತಡೆ ನಿವಾರಣೆಗಾಗಿ ಸಂಬಂದಪಟ್ಟ ಇಲಾಖಾ ಸಚಿವರೊಂದಿಗೆ ಸಮಾಲೋಚಿಸಿ ಇಲಾಖೆಗಳು ಪರಸ್ಪರ ಗೂಬೆಕೂರಿಸಿಕೊಂಡು ಅರಣ್ಯವಾಸಿಗಳಿಗೆ ಅನ್ಯಾಯವಾಗದಿರಲಿ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

 

ಬೆಳ್ತಂಗಡಿ ತಾ.ಪಂ ಸಭಾಭವನದಲ್ಲಿ ಬುಧವಾರ ಅನುಸೂಚಿತ ಬುಡಕಟ್ಟುಗಳ ಹಾಗೂ ಇತರೆ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ -2006 ಮತ್ತುನಿಯಮ – 2008ರಲ್ಲಿ ನಡೆಯುವ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅರಣ್ಯವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳ ಕುಂದು ಕೊರತೆಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.

ಇದೇ ಸಂದರ್ಭದಲ್ಲಿ ಅರಣ್ಯದಿಂದ ಹೊರಬಂದ 7 ಫಲಾನುಭವಿಗಳಿಗೆ 88 ಲಕ್ಷ ರೂ. ಪರಿಹಾರವನ್ನು ವಿತರಿಸಲಾಯಿತು.

ತಾಲೂಕಿನಲ್ಲಿ ಪ.ಜಾತಿ, ಪಂಗಡದ 496 ಅರ್ಜಿ ಇತರೆ 1263 ಅರ್ಜಿಗಳು ಹಾಗೂ ಸಮುದಾಯ ಅಭಿವೃದ್ಧಿಗೆ 29 ಅರ್ಜಿಗಳು ಬಂದಿದ್ದುಈ ಸಮಸ್ಯೆಗಳ ವಿಲೇವಾರಿಗೆ ಪ್ರಯತ್ನಿಸಲಾಗುವುದು. ತಾಲೂಕಿನಲ್ಲಿರುವ ನಡ, ಮಲವಂತಿಗೆ, ನಾರಾವಿ, ನಾವೂರು, ಶಿರ್ಲಾಲು, ಸುಲ್ಕೇರಿ, ಮೆಲಂತಬೆಟ್ಟು, ಗ್ರಾ.ಪಂ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯಾನವನ ಬಂದಿದ್ದು ಇದರಲ್ಲಿ ಹಲವಾರು ಕುಟುಂಬಗಳು ವಾಸವಾಗಿ ಮೂಲಸೌಲಭ್ಯಕ್ಕಾಗಿ ಮನವಿ ನೀಡುತ್ತಿದ್ದಾರೆ.

ಮುಖ್ಯವಾಗಿ ವಿದ್ಯುತ್ ಮತ್ತು ರಸ್ತೆ ಈ ಭಾಗದ ಜನರ ಬೇಡಿಕೆಯಾಗಿದೆ. ಅರಣ್ಯ ಹಕ್ಕು ಕಾಯಿದೆಯನ್ನು ಅರ್ಥಮಾಡಿಕೊಳ್ಳದೆ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಹರೀಶ್ ಆರೋಪಿಸಿದರು.

ವಿಭಾಗ 1972, ಅರಣ್ಯ ಸಂರಕ್ಷಣಾ ಕಾಯಿದೆ 1980 ಇದರ ಅನ್ವಯ ಸಮುದಾಯ ಅಭಿವೃದ್ಧಿಗೆ ಅವಕಾಶವಿದೆ. ಮೀಸಲು ಅರಣ್ಯ ಪ್ರದೇಶ ಹಾಗೂ ಸಾಮಾಜಿಕ ಅರಣ್ಯ ಪ್ರದೇಶವಿದ್ದರೂ ಆ ಭಾಗದ ಕುಟುಂಬದ ಜನರಿಗೆ ಸೌಲಭ್ಯಗಳನ್ನು ನೀಡುವ ಅವಕಾಶವಿದೆ ಎಂದರು.

ನಾವುರ, ನಾರಾವಿ ಮುಂತಾದೆಡೆ ಸೋಲಾರ್ ನೀಡಿದ್ದಾರೆ. ಆದರೆ ರಾತ್ರಿ ಹೊತ್ತು ಉರಿಯುವುದಿಲ್ಲ ಎಂದು ಆ ಭಾಗದ ಜನರು ಆರೋಪಿಸಿದರು. ತಕ್ಷಣ ಇದನ್ನು ಸರಿಪಡಿಸುವಂತೆ ಶಾಸಕ ಪೂಂಜಾ ಅಧಿಕಾರಿಗಳಿಗೆ ಸೂಚಿಸಿದರು.
ನಾವುರ ಮಾಳಿಗೆ ಎಂಬ 23 ಕುಟುಂಬಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂ ಅರ್ಜಿ ಸಲ್ಲಿಸಿದ್ದು ಇದನ್ನು ದೆಹಲಿ ಮತ್ತು ಬೆಂಗಳೂರಿನಲ್ಲಿ ಸಂಬಂದಪಟ್ಟ ಇಲಾಖೆಗೆ ಭೇಟಿ ನೀಡಿ ಮಂಜೂರಾತಿಗೆ ಪ್ರಯತ್ನಿಸಲಾಗಿದೆ. ಇದೀಗ ಪ್ರಥಮ ಹಂತದ ಮಂಜೂರಾತಿ ಸಿಕ್ಕಿದ್ದು ಇನ್ನೂ ಉಳಿದ ಮಂಜೂರಾತಿಯನ್ನು ಪಡೆದು ಮುಂದಿನ ಮಾರ್ಚ್ ತಿಂಗಳೊಳಗೆ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಲಾಗುವುದು. ಮೆಸ್ಕಾಂ ಇಲಾಖೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಯನ್ನು ವರ್ಗಾಯಿಸಿ ಇಲ್ಲವಾದರೆ ಕೆಲಸ ಮಾಡಲಿ

ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಸಮರ್ಪಕವಾದ ಕೆಲಸ ನಡೆಯುತ್ತಿಲ್ಲ. ಸರಕಾರ ಅನುದಾನ ಮಂಜೂರುಗೊಳಿಸಿದರೂ ಸರಿಯಾದ ಅಂದಾಜುವೆಚ್ಚ ತಯಾರಿಸದೆ ಮತ್ತು ಅದಕ್ಕೆ ಬೇಕಾದ ಅನುಮೋದನೆಯನ್ನು ಪಡೆಯದೆ ಅನ್ಯಾಯ ಮಾಡುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಬ್ಲೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಚೆನ್ನಪ್ಪ ಮೊಯ್ಲಿಯವರನ್ನು ವರ್ಗಾಯಿಸಿ ಇಲ್ಲವಾದಲ್ಲಿ ಕೆಲಸ ಮಾಡಿಸಿ ಎಂದು ಶೇಖರ್ ಲಾೈಲ ಒತ್ತಾಯಿಸಿದರು.

ಇದಕ್ಕೆ ಶಾಸಕ ಹರೀಶ್ ಪೂಂಜಾ ಸರಿಯಾದ ಕರ್ತವ್ಯ ನಿರ್ವಹಿಸದೆ ಸಭೆಗೆ ತಪ್ಪು ಮಾಹಿತಿ ನೀಡುವುದು ಬೇಡ ಮುಂದಿನ ಮೂರು ತಿಂಗಳೊಳಗೆ ಜನರ ಬೇಡಿಕೆಯ ರಸ್ತೆಯ ಕಾಮಗಾರಿಗಳಿಗೆ ಪರವಾನಿಗೆ ಪಡೆಯುವ ಮತ್ತು ಅಂದಾಜುವೆಚ್ಚ ತಯಾರಿಸುವ ಕಾರ್ಯ ಮಾಡಬೇಕು ಇಲ್ಲವಾದಲ್ಲಿ ಇವರಿಗೆ ಮೆಮೋ ನೀಡಬೇಕು ಎಂದು ಶಾಸಕ ಪೂಂಜಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಜಿಲ್ಲಾಧಿಕಾರಿಗಳು ಮೂರು ನಾಲ್ಕು ದಿನದೊಳಗೆ ಒಂದು ರಸ್ತೆಗೆ ಆನ್‍ಲೈನ್ ಅರ್ಜಿ ಸಲ್ಲಿಸುವುದು ಮತ್ತು ಅಂದಾಜುವೆಚ್ಚ ತಯಾರಿಸಲು ಇಂಜಿನಿಯರ್‍ ಗೆ ಸೂಚಿಸಿದರು.


ಹಕ್ಕುಪತ್ರ ಇದ್ದರೂ ಆರ್‍ಟಿಸಿ ಇಲ್ಲ!

ಅರಣ್ಯ ಹಕ್ಕುಪತ್ರ ಇದ್ದರೂ ಆರ್‍ಟಿಸಿ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಕೆಲವು ಕುಟುಂಬಗಳು ಆರೋಪಿಸಿದರು. ಇದಕ್ಕೆ ಮುಂದಿನ ಒಂದು ವಾರದೊಳಗೆ ತಹಶೀಲ್ದಾರರನ್ನು ಭೇಟಿಯಾಗಿ ಅದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ಮಧ್ಯವರ್ತಿಗಳ ಬಗ್ಗೆಎಚ್ಚರ !

ತಾಲೂಕಿನಲ್ಲಿ ಹಲವಾರು ಮಧ್ಯವರ್ತಿಗಳು ಜನರನ್ನು ಮೋಸಗೊಳಿಸುವ ದಂಧೆಯಲ್ಲಿ ತೊಡಗಿದ್ದು ಯಾವುದೇ ಕಾರಣಕ್ಕೂ ಜನರು ತಮ್ಮ ನೋವುಗಳನ್ನು, ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು. ಇಲ್ಲವಾದಲ್ಲಿ ನನ್ನ ಗಮನಕ್ಕೆ ತನ್ನಿ ಸಮಸ್ಯೆ ಪರಿಹರಿಸಲಾಗುವುದು ಎಂದು ಶಾಸಕ ಪೂಂಜಾ ತಿಳಿಸಿದರು.

ಜಂಟಿ ಸರ್ವೆಗೆ ಸೂಚನೆ

ತಾಲೂಕಿನಲ್ಲಿ ಅರಣ್ಯ ಭೂಮಿ, ಕಂದಾಯ ಭೂಮಿ ಎಂಬ ಗೊಂದಲದಿಂದ ಬಡವರಿಗೆ ಮನೆಕಟ್ಟಲು ನಿವೇಶನ ಸಿಗುವುದಿಲ್ಲ ಕೂಡಲೆ ಜಂಟಿಸರ್ವೆ ಮಾಡಿ ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಈ ಬಗ್ಗೆ ರಾಷ್ಟ್ರೀಯ ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿಯಾಗಿ ಜಿಪಿಎ ಸರ್ವೆ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ವಿದ್ಯುತ್ ಸಂಪರ್ಕಕ್ಕೆ ವಸೂಲಿ ಚತುರರ ಹಾವಳಿ

ತಾಲೂಕಿನ ಅಳದಂಗಡಿ,ನಾವೂರ ಮುಂತಾದೆಡೆ ಪಂಚಾಯತ್‍ಗಳು ಬಡ ಕುಟುಂಬಗಳಿಂದ 1ಸಾವಿರದಿಂದ 4ಸಾವಿರ ರೂ ಹಣವನ್ನು ಪಡೆಯುತ್ತಿದೆ. ಇದರಿಂದ ಅನ್ಯಾಯವಾಗಿದೆ ಎಂದು ಸಭೆಯಲ್ಲಿ ಆರೋಪಿಸಲಾಯಿತು. ಈ ಬಗ್ಗೆ ಶಾಸಕ ಪೂಂಜಾ ಜನರಿಂದ ಹಣ ಪಡೆಯುವ ಹಕ್ಕು ಯಾರಿಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು, ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಇಲಾಖೆಯೆ ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಹಣ ನೀಡಬೇಡಿ ಎಂದು ತಿಳಿಸಿದರು.


ಅಭಿವೃದ್ಧಿ ಕಾರ್ಯಕ್ಕೆ ಖಾಸಗಿ ಅವಲಂಬನೆ ಬೇಡ : ಜಿಲ್ಲಾಧಿಕಾರಿ

ಪಿಡಬ್ಲೂಡಿ ಮತ್ತು ಮೆಸ್ಕಾಂ ಇಲಾಖೆಯವರು ರಸ್ತೆ ಅಭಿವೃದ್ಧಿಗೆ ಮತ್ತು ಇನ್ನಿತರ ಮೂಲಭೂತ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳ ಪರವಾನಿಗೆಯನ್ನು ಪಡೆಯಬೇಕು ಮತ್ತು ಸರಕಾರದ ಮಟ್ಟದಲ್ಲಿ ಸಂಬಂದಪಟ್ಟ ಶಾಸಕರ ಮೂಲಕ ಅನುದಾನ ಬರುವಂತೆ ಮಾಡಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಖಾಸಗಿಯವರನ್ನು ಅವಲಂಬಿಸಬಾರದು ಅರಣ್ಯ ಪ್ರದೇಶದ ಕುಟುಂಬಗಳಿಗೆ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಭರವಸೆ ನೀಡಿದರು.

ಈ ಭಾಗದ ಸಮುದಾಯದ ಅಭಿವೃದ್ಧಿಗೆ ಸರಕಾರದ ಅನುಮತಿಯನ್ನು ಪಡೆಯಲಾಗುವುದು ಎಂದು ತಿಳಿಸಿದರು. ಡಿಎಫ್‍ಒ ರುತ್ರೇನ್ ಮಾತನಾಡಿ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೆ ಡಾಮರೀಕರಣವಿದ್ದ ರಸ್ತೆಗೆ ಕಾಂಕ್ರೀಟೀಕರಣ ಅಥವಾ ಮರುಡಾಮರೀಕರಣ ಮಾಡಬೇಕಾದರೆ ತಕ್ಷಣ ಮಾಹಿತಿ ಕೊಡಿ ಇಲಾಖೆಯಿಂದ ಅನುಮತಿ ನೀಡಲಾಗುವುದು.


ಬಡ ರೈತರಿಗೆ ರಕ್ಷಣೆ ನೀಡಿ

ರಾಷ್ಟ್ರೀಯ ಉದ್ಯಾನದೊಳಗೆ ಸ್ವಯಂಪ್ರೇರಿತವಾಗಿ ಹೊರಗೆ ಬಂದು ವಾಸಿಸುವವರಿಗೆ ಇಲಾಖೆ ಸರಕಾರದಿಂದ ಅನುದಾನ ನೀಡಿ ಹೊರಗೆ ಕಳುಹಿಸುತ್ತಾರೆ. ಹಿಂದೆ ಕ್ಯೂಬಿಕ್ ಮೀಟರ್ ಒಂದಕ್ಕೆ 3700 ರೂ. ಪರಿಹಾರ ನೀಡುತ್ತಿದ್ದರು. ಈಗ 700 ರೂ. ಪರಿಹಾರ ನೀಡಲಾಗುತ್ತಿದೆ. ಇದರಿಂದ ಕೃಷಿ ಜಮೀನು ಹೊಂದಿದ ಕುಟುಂಬಗಳು ಬೀದಿಯಲ್ಲಿ ಬೀಳುವಂತಾಗಿದೆ. ತಕ್ಷಣದಿಂದ ಹಿಂದಿನ ಪರಿಹಾರ ನೀಡಬೇಕು ಎಂದು ಪ್ರಕಾಶ್ ಇಳಂತಿಲ ಒತ್ತಾಯಿಸಿದರು.

ಇದಕ್ಕೆ ಸಂಬಂದಪಟ್ಟ ಸಚಿವರಲ್ಲಿ ಮಾತನಾಡಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅರಣ್ಯದಿಂದ ಹೊರಬಂದ 7 ಫಲಾನುಭವಿಗಳಿಗೆ 88 ಲಕ್ಷ ರೂ. ಪರಿಹಾರವನ್ನು ವಿತರಿಸಲಾಯಿತು.

ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಜಿಲ್ಲಾಧಿಕಾರಿ ಸಿಂಧೂರೂಪೇಶ್, ಡಿಎಫ್‍ಒ ರುತ್ರೇನ್, ಯೋಜನಾ ಸಮನ್ವಯ ಅಧಿಕಾರಿ ಡಾ| ಸತೀಶ್, ಎಸಿಎಫ್ ಬಸವರಾಜು ಕೆ.ಎನ್, ಮೆಸ್ಕಾಂ ಅಭಿಯಂತರ ರಾಮಚಂದ್ರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.

ಅಚುಶ್ರೀ ಬಾಂಗೇರು

‘ನಳಂದಾ ವಿಹಾರ್’
ಮೊಗ್ರು ಗ್ರಾಮ ಮತ್ತು ಅಂಚೆ,
ಬೆಳ್ತಂಗಡಿ ತಾಲೂಕು, ದ.ಕ
ಮೊ: 9972725702

Leave A Reply

Your email address will not be published.